2014ರಿಂದ ಆರು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ ಇ ಡಿ; 53 ಪ್ರಕರಣಗಳಲ್ಲಿ ಶಿಕ್ಷೆ: ಕೇಂದ್ರದ ಮಾಹಿತಿ

ಇ ಡಿ ಪ್ರಕರಣ ಹೂಡುವ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. 2021-22 ರಲ್ಲಿ 1,116 ಪ್ರಕರಣ ದಾಖಲಿಸಲಾಗಿದೆ. 2014-15 ಕೇವಲ 181 ಪ್ರಕರಣಗಳು ದಾಖಲಾಗಿದ್ದವು.
ED Headquarters
ED Headquarters
Published on

ಜಾರಿ ನಿರ್ದೇಶನಾಲಯ (ಇ ಡಿ) 2014ರಿಂದ ಈವರೆಗೆ 6,444 ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ಆರಂಭಿಸಿದ್ದು ನ್ಯಾಯಾಲಯಗಳು ಅರ್ಹತೆಯ ಆಧಾರದ ಮೇಲೆ ನಿರ್ಧರಿಸಿದ 56 ಪ್ರಕರಣಗಳಲ್ಲಿ 53 ಪ್ರಕರಣಗಳಲ್ಲಿ ಶಿಕ್ಷೆ ದೊರೆತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಸಂಸತ್ತಿಗೆ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯಗಳು ಏಪ್ರಿಲ್ 1, 2014ರಿಂದ ನವೆಂಬರ್ 30, 2025ರ ನಡುವೆ ಅರ್ಹತೆಯ ಆಧಾರದ ಮೇಲೆ 56 ತೀರ್ಪುಗಳನ್ನು ನೀಡಿವೆ ಆ ಪೈಕಿ 53 ನ್ಯಾಯಾಲಯಗಳು 121 ಆರೋಪಿಗಳಿಗೆ ಶಿಕ್ಷೆ ವಿಧಿಸಿವೆ ಎಂದು ಹೇಳಿದರು.

ಪ್ರತಿಕ್ರಿಯೆಯಲ್ಲಿ ವಿವರಿಸಿರುವಂತೆ, ಅರ್ಹತೆ ಆಧಾರದ ಮೇಲೆ ತೀರ್ಪು ನೀಡಲಾದ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾದ ಪ್ರಮಾಣ ಶೇ 94.64ರಷ್ಟಿದೆ.

ಆರಂಭವಾದ ತನಿಖೆಗಳು

2014-15 ಹಣಕಾಸು ವರ್ಷದಿಂದ, ಇ ಡಿ ಮತ್ತು ಆದಾಯ ತೆರಿಗೆ ಇಲಾಖೆ ಸಾವಿರಾರು ಪ್ರಕರಣಗಳನ್ನು ದಾಖಲಿಸಿವೆ. ಪಿಎಂಎಲ್‌ಎ ಅಡಿ ಒಟ್ಟು 6,444 ಪ್ರಕರಣಗಳನ್ನು (ಇಸಿಐಆರ್‌) ಇ ಡಿ ದಾಖಲಿಸಿದೆ. ಆದಾಯ ತೆರಿಗೆ ಇಲಾಖೆ ಒಟ್ಟು 13,877 ಪ್ರಕರಣಗಳನ್ನು ದೂರು ರೂಪದಲ್ಲಿ ಸಲ್ಲಿಸಿದೆ.

ಪ್ರಕರಣಗಳ ಸಂಖ್ಯೆ ವರ್ಷವಾರು

ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 2014ರಿಂದ ಏರುಮುಖವಾಗಿರುವುದನ್ನು ದಾಖಲೆಗಳು ಹೇಳುತ್ತಿವೆ.

ಇ ಡಿ ಪ್ರಕರಣ ಹೂಡುವ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ. 2021-22 ರಲ್ಲಿ 1,116 ಪ್ರಕರಣ ದಾಖಲಿಸಲಾಗಿದೆ. 2014-15 ಕೇವಲ 181 ಪ್ರಕರಣಗಳು ದಾಖಲಾಗಿದ್ದವು.

ಆದಾಯ ತೆರಿಗೆ ಇಲಾಖೆಯ ದೂರು ಪ್ರಕರಣಗಳು 2017-18ರಲ್ಲಿ ಅತಿ ಹೆಚ್ಚು ಎಂದರೆ, 4,527 ಪ್ರಕರಣಗಳು ದಾಖಲಾಗಿದ್ದು 2014-15ರಲ್ಲಿ ಇಂತಹ ಪ್ರಕರಣಗಳ ದಾಖಲು ಪ್ರಮಾಣ 669ರಷ್ಟಿತ್ತು.

ಶೋಧ ಮತ್ತು ಜಪ್ತಿ ಕಾರ್ಯಾಚರಣೆ

ಇ ಡಿ 2014-15ರಿಂದ 2025 ನವೆಂಬರ್ ತನಕ ಒಟ್ಟು 11,106 ಶೋಧ ಕಾರ್ಯಾಚರಣೆ ನಡೆಸಿದೆ. 2014-15ರಲ್ಲಿ 46 ಶೋಧ ಕಾರ್ಯಾಚರಣೆಗಳು ಮಾತ್ರ ನಡೆದಿದ್ದವು. ಆದರೆ 2023-24ರಲ್ಲಿ ಈ ಸಂಖ್ಯೆ 2,600ಕ್ಕೆ ಏರಿಕೆಯಾಗಿದೆ ಮತ್ತು 2025 ನವೆಂಬರ್ ಹೊತ್ತಿಗೆ 2,267 ಶೋಧ ಕಾರ್ಯಾಚರಣೆ ನಡೆದಿದೆ. ಆದಾಯ ತೆರಿಗೆ ಇಲಾಖೆ ಇದೇ ಅವಧಿಯಲ್ಲಿ 9,657 ಸಾಮೂಹಿಕ ಶೋಧ ಕಾರ್ಯ ನಡೆಸಿದ್ದು 2024-25ರಲ್ಲಿ ಅತ್ಯಧಿಕ 1,437 ಶೋಧ ಕಾರ್ಯ ನಡೆದಿದೆ.

ನ್ಯಾಯಾಲಯ ವಿಚಾರಣೆ ಮತ್ತು ಶಿಕ್ಷೆ

ಇ ಡಿ ನ್ಯಾಯಾಲಯಕ್ಕೆ ಪ್ರಕರಣಗಳನ್ನು ಸಲ್ಲಿಸುವಲ್ಲಿ ಸಕ್ರಿಯವಾಗಿದೆ. ಒಟ್ಟು 2,416 ದೂರುಗಳ (ಪೂರಕ ದೂರುಗಳನ್ನು ಸೇರಿಸಿ) ಪ್ರಕರಣಗಳನ್ನು ದಾಖಲೆ ಮಾಡಲಾಗಿದೆ. ಈ ದೂರುಗಳಲ್ಲಿ ಒಟ್ಟಾರೆ 16,404 ವ್ಯಕ್ತಿಗಳು/ಸಂಸ್ಥೆಗಳ ಹೆಸರಿದೆ. ಅರ್ಹತೆಯ ಆಧಾರದ ಮೇಲೆ ನಿರ್ಧರಿಸಲಾದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಇ ಡಿ ವರದಿ ಹೇಳಿದೆ. ಏಪ್ರಿಲ್ 1, 2014ರಿಂದ ನವೆಂಬರ್ 30, 2025ರವರೆಗೆ ಪಿಎಂಎಲ್ಎ ವಿಶೇಷ ನ್ಯಾಯಾಲಯಗಳು ನಿರ್ಧರಿಸಿದ 56 ಪ್ರಕರಣಗಳಲ್ಲಿ 53 ಪ್ರಕರಣಗಳಲ್ಲಿ ಶಿಕ್ಷೆ ದೊರೆತಿದೆ. ಇದರರ್ಥ ಶಿಕ್ಷೆಯ ಪ್ರಮಾಣ 94.64% ರಷ್ಟಿದ್ದು, 121 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ.

ಅಂತೆಯೇ ಆದಾಯ ತೆರಿಗೆ ಇಲಾಖೆ 2014-15 ರಿಂದ ಈವರೆಗೆ ಹೂಡಿರುವ ಒಟ್ಟು ಪ್ರಕರಣಗಳಲ್ಲಿ 522 ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದ್ದು, 963 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. 3,345 ಪ್ರಕರಣಗಳನ್ನು ಹಿಂಪಡೆಯಲಾಗಿದೆ.

ಈ ಫಲಿತಾಂಶಗಳು (ಅಪರಾಧ ಸಾಬೀತು, ಖುಲಾಸೆ ಅಥವಾ ಹಿಂಪಡೆಯುವಿಕೆ) ವಿಭಿನ್ನ ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿರಬಹುದು, ಅಂದರೆ ಅವು ವರದಿಯಾದ ನಿರ್ದಿಷ್ಟ ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಗೆ ನೇರವಾಗಿ ಸಂಬಂಧಿಸಿಲ್ಲ ಎಂದು ಸಚಿವಾಲಯ ಹೇಳಿದೆ.

Search by Income Tax Department
Search by Income Tax Department

[ಸಂಸತ್ತಿಗೆ ನೀಡಲಾದ ಉತ್ತರದ ಪ್ರತಿ]

Attachment
PDF
ED_and_ITD_
Preview
Kannada Bar & Bench
kannada.barandbench.com