ಎನ್ಎಲ್ಎಟಿ ವಿರುದ್ಧ ಸುಪ್ರೀಂ ಮೊರೆಹೋದ ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಉಪಕುಲಪತಿ: ರಿಟ್ ಅರ್ಜಿ ಸಲ್ಲಿಕೆ

ಪರ್ಯಾಯ ಪ್ರವೇಶ ಪ್ರಕ್ರಿಯೆ ರೂಪಿಸಲು ಕಾನೂನು ಶಾಲೆಗೆ ಯಾವುದೇ ಅಧಿಕಾರ ಇಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಶಾಲೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Supreme Court
Supreme Court

ಪ್ರತ್ಯೇಕ ಪ್ರವೇಶಾತಿ ಪರೀಕ್ಷೆ ನಡೆಸಲು ಮುಂದಾದ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ವಿಳಂಬವಾದ ಹಿನ್ನೆಲೆಯಲ್ಲಿ ಎನ್ಎಲ್ಎಟಿ ಮೂಲಕ ಪ್ರವೇಶ ಕಲ್ಪಿಸಲು ವಿವಿ ಮುಂದಾಗಿರುವುದು ಭಾರಿ ವಿವಾದ ಸೃಷ್ಟಿಸಿದೆ.

ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಉಪಕಲಪತಿ ಪ್ರೊ ಆರ್ ವೆಂಕಟರಾವ್ ಮತ್ತು ಪೋಷಕರೊಬ್ಬರ ಪರವಾಗಿ ವಕೀಲರಾದ ಸುಘೋಷ್ ಸುಬ್ರಮಣ್ಯಂ ಮತ್ತು ವಿಪಿನ್ ನಾಯರ್ ಅರ್ಜಿ ಸಲ್ಲಿಸಿದ್ದಾರೆ. ಪ್ರತ್ಯೇಕ ಪರೀಕ್ಷೆ ವಿದ್ಯಾರ್ಥಿಗಳನ್ನು ಮತ್ತು ವಿವಿಯನ್ನು ಪ್ರತ್ಯೇಕಿಸಿಬಿಡುತ್ತದೆ ಎಂಬ ಆತಂಕ ದೂರಿನಲ್ಲಿದೆ.

ಎನ್ಎಲ್ಎಸ್ಐಯುನ ಈಗಿನ ಉಪಕುಲಪತಿ ಪ್ರತ್ಯೇಕ ಪರೀಕ್ಷೆ ನಡೆಸಲು ಶೈಕ್ಷಣಿಕ ಮಂಡಳಿಯ ಅಗತ್ಯ ಒಪ್ಪಿಗೆ ಪಡೆದಿಲ್ಲ. ಈ ಬಗೆಯ ಪರೀಕ್ಷೆ ನಡೆಸಲು ನೀಡಲಾದ ಕಾರಣಗಳು ವಿಚಿತ್ರ ಮತ್ತು ಆಧಾರರಹಿತವಾಗಿವೆ. ಮನೆಯಿಂದಲೇ ಪರೀಕ್ಷೆಯಲ್ಲಿ ಭಾಗಿಯಾಗಲು ಬೇಕಾದ ತಾಂತ್ರಿಕ ಸೌಲಭ್ಯ ಪಡೆಯುವುದು ಕಠಿಣವಾದದ್ದು, ತಾರತಮ್ಯದಿಂದ ಕೂಡಿರುವಂಥದ್ದು ಹಾಗೂ ಕಾನೂನುಬಾಹಿರವಾಗಿದೆ. ವಿದ್ಯಾರ್ಥಿಗಳ ನ್ಯಾಯಸಮ್ಮತ ನಿರೀಕ್ಷೆಗಳನ್ನು ಇದು ಉಲ್ಲಂಘಿಸಿದೆ ಎಂಬ ನಾಲ್ಕು ಪ್ರಮುಖ ಅಂಶಗಳು ಅರ್ಜಿಯಲ್ಲಿವೆ.

ಪರ್ಯಾಯ ಪ್ರವೇಶ ಪ್ರಕ್ರಿಯೆ ರೂಪಿಸಲು (ಎನ್‌ಎಲ್‌ಎಟಿ) ಕಾನೂನು ಶಾಲೆಗೆ ಯಾವುದೇ ಅಧಿಕಾರ ಇಲ್ಲ. ಮತ್ತು ಪ್ರವೇಶಾತಿ ನಿರ್ಧಾರ ಕೈಗೊಂಡ ಕಾರ್ಯಕಾರಿ ಸಭೆ ಕೂಡ ಕಾನೂನು ಬಾಹಿರ. ಇದು ಎನ್ಎಲ್ಎಟಿ ಏಕಪಕ್ಷೀಯವಾಗಿ ಮತ್ತು ತರಾತುರಿಯಿಂದ ಕೈಗೊಂಡ ನಿರ್ಧಾರ. ಅಲ್ಲದೆ ಸಿಎಲ್ಎಟಿ ಅಂಕಗಳನ್ನು ಕಾನೂನು ಶಾಲೆಯ ಪ್ರವೇಶಾತಿಗೆ ಪರಿಗಣಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಕೇವಲ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಚಿಸಲಾದ ತಾಂತ್ರಿಕ ಅವಶ್ಯಕತೆಗಳು ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೊರೆ ಸೃಷ್ಟಿಸುತ್ತವೆ ಎಂಬ ಕಳವಳ ಅರ್ಜಿಯಲ್ಲಿ ವ್ಯಕ್ತವಾಗಿದೆ.

ಎನ್‌ಎಲ್‌ಎಸ್‌ಐಯು ಕೈಗೊಂಡ ದಿಢೀರ್ ಮತ್ತು ವಿಚಿತ್ರ ನಿರ್ಧಾರ, ಪ್ರವೇಶಾಂಕಾಂಕ್ಷಿಗಳನ್ನು ಉದ್ವೇಗ, ಭಯ ಹಾಗೂ ಗೊಂದಲದ ಸ್ಥಿತಿಗೆ ತಳ್ಳಿದೆ. ಆಕಾಂಕ್ಷಿಗಳು ತೀವ್ರ ಮಾನಸಿಕ ಒತ್ತಡ ಅನುಭವಿಸುವಂತಾಗಿದೆ. ಅಲ್ಲದೆ ಒಕ್ಕೂಟ ಮತ್ತು ಕಾನೂನು ಶಾಲೆಯ ನಂಟಿಗೂ ಈ ನಿರ್ಧಾರ ಅಪಾಯ ತಂದೊಡ್ಡಿದೆ. ಈ ಕ್ರಮಗಳಿಂದಾಗಿ ಹಿಂದೆಂದೂ ಉದ್ಭವಿಸದ ಅನಿಶ್ಚಿತತೆ ತಲೆದೋರಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ದೊಡ್ಡಮಟ್ಟದಲ್ಲಿ ನಡೆದಿದೆ. ಸಂವಿಧಾನದ 14 ಮತ್ತು 21ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಇದಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಎನ್ಎಲ್ಎಟಿ ನಡೆಸಲು ಕಾನೂನು ಶಾಲೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಬೇಕು. ಪರೀಕ್ಷೆ ಬರೆಯಲು ಬೇಕಾದ ತಾಂತ್ರಿಕ ಅವಶ್ಯಕತೆಗಳ ಕುರಿತು ನೀಡಲಾಗಿದ್ದ ಸೂಚನೆಗಳನ್ನು ಅಮಾನ್ಯಮಾಡಬೇಕು. ಸಿಎಲ್ಎಟಿ ಅಂಕಗಳ ಆಧಾರದ ಮೇಲೆಯೇ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವಂತೆ ನಿರ್ದೇಶಿಸಬೇಕು ಎಂದು ದೂರುದಾರರು ಕೋರಿದ್ದಾರೆ.

ಸೆಪ್ಟೆಂಬರ್ 12 ರಂದು ಆನ್‌ಲೈನ್‌ ಮೂಲಕ ಎನ್ಎಲ್ಎಟಿ ಆಯೋಜಿಸಲಾಗಿದೆ. ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಸೆಪ್ಟೆಂಬರ್ 28 ರಂದು ನಡೆಯಲಿದೆ. ಇದರ ಜೊತೆಗೆ ಜಾರ್ಖಂಡ್ ಹೈಕೋರ್ಟಿನಲ್ಲಿ ಕೂಡ ಅರ್ಜಿ ದಾಖಲಾಗಿದ್ದು ಐವರು ವಿದ್ಯಾರ್ಥಿಗಳು ಕಾನೂನು ಶಾಲೆಯ ಕ್ರಮವನ್ನು ಪ್ರಶ್ನಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com