ಎನ್‌ಎಲ್‌ಎಟಿ 2020: ಹದಿನಾಲ್ಕು ನಗರಗಳಲ್ಲಿ ಪರೀಕ್ಷಾ ಕೇಂದ್ರ, ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯ

ತಾಂತ್ರಿಕ ಸೌಲಭ್ಯ ಇರುವ ಅಭ್ಯರ್ಥಿಗಳು ನಿಬಂಧನೆಗಳ ಅನುಸಾರ ದೇಶದ ಯಾವುದೇ ಮೂಲೆಯಿಂದಲಾದರೂ ಪರೀಕ್ಷೆ ಬರೆಯಬಹುದು. ಅರ್ಜಿಯಲ್ಲಿ ಸಲ್ಲಿಸಿದ ವಿಳಾಸದಿಂದಲೇ ಪರೀಕ್ಷೆ ಬರೆಯಬೇಕೆಂಬ ನಿಯಮವೇನೂ ಇಲ್ಲ ಎಂದು ಕಾನೂನು ಶಾಲೆ ಸ್ಪಷ್ಟಪಡಿಸಿದೆ.
Classroom
Classroom

ಎನ್ಎಲ್ಎಟಿ ಪರೀಕ್ಷೆ ಬರೆಯಲು ಮುಂದಾದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಹದಿನಾಲ್ಕು ವಿವಿಧ ನಗರಗಳಲ್ಲಿ 14 ಪರೀಕ್ಷಾ ಕೇಂದ್ರಗಳನ್ನು ತೆರೆದಿದೆ.

ಎನ್‌ಎಲ್‌ಎಟಿ 2020 ಪರೀಕ್ಷೆಗೆ ಬೇಕಾದ ಸೌಲಭ್ಯಗಳನ್ನು ಹೊಂದಿರದ ಅಭ್ಯರ್ಥಿಗಳು ಕೆಳಗಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬಹುದು.

  • ಔರಂಗಾಬಾದ್, ಮಹಾರಾಷ್ಟ್ರ

  • ಭುವನೇಶ್ವರ, ಒಡಿಶಾ

  • ಬಿಕನೇರ್, ರಾಜಸ್ಥಾನ

  • ಚೆನ್ನೈ, ತಮಿಳುನಾಡು

  • ಡೆಹ್ರಾಡೂನ್, ಉತ್ತರಾಖಂಡ್

  • ಗೋರಖ್‌ಪುರ, ಉತ್ತರ ಪ್ರದೇಶ

  • ಗುವಾಹಟಿ, ಅಸ್ಸಾಂ

  • ಜಬಲ್ಪುರ್, ಮಧ್ಯಪ್ರದೇಶ

  • ಜೈಪುರ, ರಾಜಸ್ತಾನ

  • ಲಕ್ನೋ, ಉತ್ತರ ಪ್ರದೇಶ

  • ನಾಸಿಕ್, ಮಹಾರಾಷ್ಟ್ರ

  • ರೋಹ್ಟಕ್, ಹರಿಯಾಣ

  • ಶಿಮ್ಲಾ, ಹಿಮಾಚಲ ಪ್ರದೇಶ

  • ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರಾಧಾರಿತ ಪರೀಕ್ಷೆಗಳನ್ನು ಆಯೋಜಿಸುವ ಟೆಸ್ಟ್ ಪ್ಯಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೇಂದ್ರಗಳನ್ನು ನಿರ್ವಹಿಸಲಿದೆ. ಮನೆಯಲ್ಲಿ ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಟೆಸ್ಟ್ ಪ್ಯಾನ್ ತಾಂತ್ರಿಕ ಉಪಕರಣಗಳು ಮತ್ತು ಸ್ಥಳವನ್ನು ಒದಗಿಸುತ್ತದೆ. ಅಭ್ಯರ್ಥಿಗಳು ಈ ಸೌಲಭ್ಯ ಪಡೆಯಲು 350 ರೂಪಾಯಿಗಳನ್ನು ಸಂದಾಯ ಮಾಡಬೇಕು.

ತಾಂತ್ರಿಕ ಸೌಲಭ್ಯ ಇರುವ ಅಭ್ಯರ್ಥಿಗಳು ನಿಬಂಧನೆಗಳ ಅನುಸಾರ ದೇಶದ ಯಾವುದೇ ಮೂಲೆಯಿಂದಲಾದರೂ ಪರೀಕ್ಷೆ ಬರೆಯಬಹುದು. ಅರ್ಜಿಯಲ್ಲಿ ಸಲ್ಲಿಸಿದ ವಿಳಾಸದಲ್ಲಿಯೇ ಕುಳಿತು ಮಾತ್ರವೇ ಪರೀಕ್ಷೆ ಬರೆಯಬೇಕೆಂಬ ನಿಯಮವೇನೂ ಇಲ್ಲ ಎಂದು ಕಾನೂನು ಶಾಲೆಯು ಸ್ಪಷ್ಟಪಡಿಸಿದೆ.

ಪ್ರತಿಯೊಂದು ಕೇಂದ್ರದಲ್ಲಿ 350 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಕೊರೊನಾ ಹರಡುವುದನ್ನು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನು ನಿರೀಕ್ಷಿಸಬಹುದು.

ಆದರೆ "ತಾಂತ್ರಿಕ ಸಮಸ್ಯೆ, ಇಂಟರ್ನೆಟ್ ಸ್ಥಗಿತ ಅಥವಾ ಟೆಸ್ಟ್ ಪ್ಯಾನ್ ಕೇಂದ್ರಗಳಲ್ಲಿ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಎನ್‌ಎಲ್‌ಎಸ್‌ಐಯು ಜವಾಬ್ದಾರಿಯಲ್ಲ. ಟೆಸ್ಟ್ ಪ್ಯಾನ್ ಮತ್ತು ಅಭ್ಯರ್ಥಿಯ ನಡುವಿನ ವೈಯಕ್ತಿಕ ಒಪ್ಪಂದವಾಗಿ ವ್ಯವಸ್ಥೆ ಏರ್ಪಟ್ಟಿದೆ,” ಎಂದು ಕಾನೂನು ಶಾಲೆಯು ಮಾಹಿತಿ ನೀಡಿದೆ.

ಮೊದಲು ತಿಳಿಸಿದ್ದ 1 ಎಂಬಿಪಿಎಸ್ ಅಂತರ್ಜಾಲ ಸಾಮರ್ಥ್ಯದ ಬದಲಿಗೆ ವಿದ್ಯಾರ್ಥಿಗಳು 512 ಕೆಬಿಪಿಎಸ್‌ ಸಾಮರ್ಥ್ಯದ ಅಂತರ್ಜಾಲದ ಮೂಲಕ ಆನ್ ಲೈನ್ ಪರೀಕ್ಷೆ ಬರೆಯಬಹುದು ಎಂದು ತಿಳಿಸಲಾಗಿದೆ. ವಿಂಡೋಸ್ (7 ಅಥವಾ ಅದಕ್ಕಿಂತ ಸುಧಾರಿತ ಆವೃತ್ತಿ), ಮ್ಯಾಕ್ ಒಎಸ್ (10.13 ಅದಕ್ಕಿಂತ ಸುಧಾರಿತ ಆವೃತ್ತಿ) ಹಾಗೂ ಲಿನಕ್ಸ್ (ಉಬುಂಟು ಆವೃತ್ತಿಗಳು 18.04, 16.04, 15.04 ಮಾತ್ರ) ಆಪರೇಟಿಂಗ್ ಸಿಸ್ಟಂಗಳಲ್ಲಿ ಡೆಸ್ಕ್ಟಾಪ್ ಕಂಪ್ಯೂಟರ್, ಲ್ಯಾಪ್ಟಾಪ್ ಮತ್ತು ಆಂಡ್ರಾಯ್ಡ್ ಮೊಬೈಲ್ ಸಾಧನಗಳನ್ನು ಬಳಸಿ ಪರೀಕ್ಷೆ ಬರೆಯಬಹುದಾಗಿದೆ.

ಈ ವರ್ಷ ಪ್ರತ್ಯಕ ಪ್ರವೇಶ ನಡೆಸಲು ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಮುಂದಾಗಿರುವುದನ್ನು ವಿದ್ಯಾರ್ಥಿ ಸಮುದಾಯ ಮತ್ತು ಇತರೆ ರಾಷ್ಟ್ರೀಯ ಕಾನೂನು ಶಾಲೆಗಳು ತೀವ್ರವಾಗಿ ಖಂಡಿಸಿವೆ. ಶಾಲೆಯ ಉಪಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಅವರನ್ನು ಎನ್‌ಎಲ್‌ಯುಗಳ ಒಕ್ಕೂಟದ ಕಾರ್ಯದರ್ಶಿ- ಖಜಾಂಚಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಸಿಎಲ್ಎಟಿ ಪ್ರವೇಶ ಪರೀಕ್ಷೆಯ ನಡಾವಳಿಯಲ್ಲಿ ಭಾಗವಹಿಸದಿರಲು ಕಾನೂನು ಶಾಲೆ ನಿರ್ಧರಿಸಿದೆ.

ಕಳೆದ ವಾರ, ಎನ್‌ಎಲ್‌ಎಸ್‌ಐಯು ಸೆಪ್ಟೆಂಬರ್ 12 ರಂದು ನಡೆಯಲಿರುವ ಎನ್‌ಎಲ್‌ಎಟಿಯ ತಾಂತ್ರಿಕ ಅವಶ್ಯಕತೆಗಳ ಸಮಗ್ರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಆನ್‌ಲೈನ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅಗತ್ಯವಾದ ತಂತ್ರಜ್ಞಾನ ಸೌಲಭ್ಯಗಳಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

Related Stories

No stories found.
Kannada Bar & Bench
kannada.barandbench.com