ಮೋಸದ ಧಾರ್ಮಿಕ ಮತಾಂತರ ತಡೆಯಲು ರಾಜ್ಯದಲ್ಲಿ ಕಾನೂನನ್ನು ರೂಪಿಸುತ್ತಿರುವುದಾಗಿ ಬಿಜೆಪಿ ನೇತೃತ್ವದ ನೂತನ ರಾಜಸ್ಥಾನ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಅಶ್ವಿನಿ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಪ್ರಸ್ತುತ, ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಡೆಯಲು ರಾಜ್ಯದಲ್ಲಿ ಕಾನೂನು ಇಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿವರಿಸಿದೆ.
ಹೀಗಾಗಿ ತನ್ನದೇ ಆದ ಕಾಯಿದೆ ರೂಪಿಸುವವರೆಗೆ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡುವ ನಿರ್ದೇಶನಗಳಿಗೆ ತಾನು ಬದ್ದವಾಗಿರುವುದಾಗಿ ಅದು ತಿಳಿಸಿದೆ.
ವಂಚನೆ ಮತ್ತು ಬಲವಂತದ ಮತಾಂತರ ತಡೆಯಲು ಕೈಗೊಂಡ ಕ್ರಮಗಳನ್ನು ವಿವರಿಸುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.
ಬೆದರಿಕೆ, ಮೋಸ, ಆಮಿಷ, ಆರ್ಥಿಕ ಸಹಾಯದ ಮೂಲಕ ಮಾಡುವ ಎಲ್ಲಾ ಮೋಸದ ಮತ್ತು ಬಲವಂತದ ಮತಾಂತರ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳುವಂತೆ ಉಪಾಧ್ಯಾಯ ಮನವಿ ಮಾಡಿದ್ದರು.