ಭಾನುವಾರ (ಡಿಸೆಂಬರ್ 3) ನಡೆದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) 2024ರ ನೋಂದಣಿ ಮತ್ತು ಅರ್ಜಿಗಳ ಸಂಖ್ಯೆಯಲ್ಲಿ ಏರಿಕೆೆಯಾಗಿದೆ.
ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್ಎಲ್‌ಯು) ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಪದವಿಪೂರ್ವ (ಯುಜಿ) ಮತ್ತು ಸ್ನಾತಕೋತ್ತರ (ಪಿಜಿ) ಪರೀಕ್ಷೆಗಳಿಗೆ 1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಯುಜಿ ಪರೀಕ್ಷೆಯ ಅರ್ಜಿಗಳಲ್ಲಿ 34.7% ಹೆಚ್ಚಳ ಮತ್ತು ಪಿಜಿ ಪರೀಕ್ಷೆ ಅರ್ಜಿಗಳಲ್ಲಿ 25.8% ಹೆಚ್ಚಳವಾಗಿರುವುದನ್ನು ಇದು ಬಿಂಬಿಸುತ್ತದೆ ಎಂದು ಒಕ್ಕೂಟ ಹೇಳಿದೆ.
"ಎರಡೂ ವಿಭಾಗಗಳಲ್ಲಿನ ಈ ಏರಿಕೆ ಒಟ್ಟಾರೆ 24.5%ರಷ್ಟು ಇದ್ದು ಇದು ಸಿಎಲ್ಎಟಿ 2024 ರಲ್ಲಿ (ಅಭ್ಯರ್ಥಿಗಳು) ಉತ್ಸಾಹ ಮತ್ತು ವ್ಯಾಪಕ ಆಸಕ್ತಿಯಿಂದ ಭಾಗಿಯಾಗಿರುವುದನ್ನು ತೋರಿಸುತ್ತದೆ. ಪರೀಕ್ಷೆಯನ್ನು ಜೂನ್‌ನಿಂದ ಡಿಸೆಂಬರ್ ತಿಂಗಳಿಗೆ ಪರೀಕ್ಷಾ ದಿನಾಂಕ ಬದಲಾವಣೆ ಮಾಡಿದ್ದು ಇದಕ್ಕೆ ಕಾರಣವಿರಬಹುದು, ಇದು ಆಕಾಂಕ್ಷಿಗಳು ಮತ್ತು ಸಂಘಟಕರಿಗೆ ಸಿದ್ಧತೆಗೆ ಒತ್ತಡ ರಹಿತ ಅವಧಿಯನ್ನು ಒದಗಿಸಿದೆ" ಎಂದು ಒಕ್ಕೂಟ ಹೇಳಿದೆ.
ದೇಶಾದ್ಯಂತ 139 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಯಿತು. ಕೇಂದ್ರಾಡಳಿತ ಪ್ರದೇಶವಾದ ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯುವಿನ ಸಿಲ್ವಾಸ್ಸಾ ಮತ್ತು ದಿಯುನಲ್ಲಿ ಹೊಸ ಕೇಂದ್ರಗಳಲ್ಲೂ ಪರೀಕ್ಷೆ ನಡೆದವು.
ಯುಜಿ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳ ಸಂಖ್ಯೆಯನ್ನು 150 ರಿಂದ 120 ಕ್ಕೆ ಇಳಿಸಲಾಗಿದ್ದು, 2 ಗಂಟೆಗಳ ಪರೀಕ್ಷಾ ಅವಧಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳ ಒತ್ತಡದ ಬಗೆಗಿನ ಕಳವಳ ಪರಿಹರಿಸಲು ಹೀಗೆ ಮಾಡಲಾಗಿದ್ದು ಇದರಿಂದ ಆಕಾಂಕ್ಷಿಗಳು ಪರೀಕ್ಷೆಯ ಮೇಲೆ ಗಮನ ಹರಿಸಲು ಅನುವು ಮಾಡಿಕೊಡುತ್ತದೆ ಎಂದು ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎಂಎನ್ಎಲ್ಯು) ನಾಗ್ಪುರದ ಉಪಕುಲಪತಿ ಪ್ರೊಫೆಸರ್ ವಿಜೇಂದರ್ ಸಿಂಗ್ ನೇತೃತ್ವದ ಒಕ್ಕೂಟ ತಿಳಿಸಿದೆ.