
ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ರಚಿಸಿದ್ದ ವಿಶೇಷ ತನಿಖಾ ದಳವು (ಎಸ್‌ಐಟಿ) ತನಿಖೆ ನಡೆಸಿರುವ ವಿಧಾನಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಮೆಚ್ಚುಗೆ ದಾಖಲಿಸಿದೆ.
ಬೆಂಗಳೂರು ವಕೀಲರ ಸಂಘದ ಕೋರಿಕೆಯಂತೆ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಎಸ್‌ಐಟಿಗೆ ವಹಿಸಿತ್ತು. ತನಿಖೆ ಪೂರ್ಣಗೊಂಡ ಬಳಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು. ಇದರಂತೆ ನ್ಯಾಯಾಲಯಕ್ಕೆ ಎಸ್‌ಐಟಿ ವರದಿ ಸಲ್ಲಿಸಿತ್ತು.
ಮುಂದುವರಿದ ಭಾಗವಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 10.01.2025ರ ಆದೇಶದಂತೆ “ಎಸ್‌ಐಟಿಯು ತನಿಖಾ ವರದಿ ಸಲ್ಲಿಸಿದೆ. ಎಸ್‌ಐಟಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿದ್ದು, ನ್ಯಾಯಯುತ ತನಿಖೆಯ ಸಂಬಂಧ ಮಾಡಲಾಗಿದ್ದ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಎಸ್‌ಐಟಿಯು ಶ್ಲಾಘನೀಯ ಕೆಲಸ ಮಾಡಿದೆ. ತನಿಖಾ ವಿಧಾನವು ವಿಶಿಷ್ಟವಾಗಿದ್ದು, ಇಂಥ ಕೆಲಸವು ಮೊದಲ ಬಾರಿಗೆ ನಡೆದಿದೆ. ಇದಕ್ಕಾಗಿ ಎಸ್‌ಐಟಿಗೆ ನ್ಯಾಯಾಲಯ ಮೆಚ್ಚುಗೆ ದಾಖಲಿಸಿಸುತ್ತಿದೆ. ಎಸ್‌ಐಟಿಯ ತನಿಖಾ ವಿಧಾನಕ್ಕೆ ಮೆಚ್ಚುಗೆ ಸೂಚಿಸಲಾಗಿದೆಯೇ ವಿನಾ ತನಿಖೆಯ ಮೆರಿಟ್‌ಗೆ ಅಲ್ಲ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
“ತನಿಖೆ ಮುಗಿದಿರುವುದರಿಂದ ಅಥವಾ ಮುಗಿಯುವ ಹಂತದಲ್ಲಿರುವುದರಿಂದ ಎಸ್‌ಐಟಿಯು ಬನಶಂಕರಿ ಪೊಲೀಸರಿಗೆ ತನಿಖಾ ವರದಿಯ ಪ್ರತಿ ನೀಡಲು ಅನುಮತಿಸಲಾಗುತ್ತಿದೆ. ಆ ಠಾಣೆಯ ಅಧಿಕಾರಿಯು ಸಂಬಂಧಿತ ನ್ಯಾಯಾಲಯಕ್ಕೆ ವರದಿ ಸಲ್ಲಿಸಹುದಾಗಿದೆ. ಆನಂತರ ಸಕ್ಷಮ ನ್ಯಾಯಾಲಯವು ಕಾನೂನಿನ ಪ್ರಕಾರ ಪ್ರಕ್ರಿಯೆ ಮುಂದುವರಿಸಬಹುದಾಗಿದೆ” ಎಂದು ಹೈಕೋರ್ಟ್ ಆದೇಶಿಸಿತ್ತು.
ಹೈಕೋರ್ಟ್ ನಿರ್ದೇಶನದಂತೆ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ಜೀವಾ ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿ ಬಿ ಎಂ ಕನಕಲಕ್ಷ್ಮಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 108 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 7(a) ಅಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬನಶಂಕರಿ ಠಾಣಾಧಿಕಾರಿ ಈಚೆಗೆ 2,300 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಜೀವಾಗೆ ಕನಕಲಕ್ಷ್ಮಿ ಅವರು ಕಿರುಕುಳ ನೀಡಿರುವುದು ಸಾಬೀತಾಗಿದೆ ಎನ್ನಲಾಗಿದ್ದು. ಸಾಕ್ಷಿಗಳ ಹೇಳಿಕೆ, ವಿಡಿಯೋ ಸಾಕ್ಷಿಗಳನ್ನು ಅಡಕಗೊಳಿಸಿದೆ ಎನ್ನಲಾಗಿದೆ.
ಬನಶಂಕರಿ ಠಾಣೆ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನಲ್ಲಿನ ಮನೆಯಲ್ಲಿ 2024ರ ನವೆಂಬರ್ 22ರಂದು ಡೆತ್ ನೋಟ್ ಬರೆದಿಟ್ಟು, ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಕನಕಲಕ್ಷ್ಮಿ ಅವರು ಕಿರುಕುಳ ನೀಡಿರುವ ಕುರಿತು ಉಲ್ಲೇಖಿಸಲಾಗಿದೆ ಎನ್ನಲಾಗಿತ್ತು.
ಈ ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖೆಗೆ ವಹಿಸಬೇಕು ಎಂದು ಎಎಬಿ ವಾದಿಸಿತ್ತು. ಇದರ ಅನ್ವಯ ಹೈಕೋರ್ಟ್ ಬೆಂಗಳೂರು ಸಿಬಿಐನ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ವರ್ಮಾ, ಕರ್ನಾಟಕ ಹೋಮ್ ಗಾರ್ಡ್‌ನ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರನ್ನೊಳಗೊಂಡ ಎಸ್‌ಐಟಿ ರಚಿಸಿತ್ತು. ಈ ತಂಡವು ಮಾರ್ಚ್ 11ರಂದು ಕನಕಲಕ್ಷ್ಮಿ ಅವರನ್ನು ಬಂಧಿಸಿ, ತನಿಖೆಗೆ ಒಳಪಡಿಸಿತ್ತು. ಸದ್ಯ ಕನಕಲಕ್ಷ್ಮಿ ಜಾಮೀನು ಅರ್ಜಿಯು ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.