ತಾಲಿಬಾನ್ ಉಗ್ರರ ಕೈವಶವಾಗಿರುವ ಆಘ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಸಂಬಂಧ ಮಧ್ಯಪ್ರವೇಶ ಮಾಡುವಂತೆ ಕೋರಿ ಮಹಾರಾಷ್ಟ್ರದ ಥಾಣೆಯ ವಕೀಲ ಆದಿತ್ಯ ಮಿಶ್ರಾ ಅವರು ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿದ್ದಾರೆ.
“ಈಚೆಗೆ ಆಫ್ಘಾನಿಸ್ತಾನ ಸರ್ಕಾರದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿರುವುದರಿಂದ ಆಫ್ಘಾನಿಸ್ತಾನದಲ್ಲಿರುವ ಭಾರತೀಯರು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರುವ ಸಂಬಂಧ ಭಾರತ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತದೆ ಎಂಬ ವಿಶ್ವಾಸವಿದೆ. ನ್ಯಾಯದ ಆತ್ಯಂತಿಕ ಹಿತದೃಷ್ಟಿಯಿಂದ ಮಾನವ ಹಕ್ಕುಗಳ ಅತ್ಯುನ್ನತ ರಕ್ಷಕನಾದ ಎನ್‌ಎಚ್‌ಆರ್‌ಸಿಯು ಮಧ್ಯಪ್ರವೇಶಿಸಿ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಅವರು ಹೇಳಿದ್ದಾರೆ. ಈ ಮನವಿಯ ವಿಚಾರಣೆಯನ್ನು ಎನ್‌ಎಚ್‌ಆರ್‌ಸಿ ಶೀಘ್ರದಲ್ಲೇ ನಡೆಸಲಿದೆ.