
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಲಯಗಳು ಸಹ ಕೇಂದ್ರ ಸರ್ಕಾರದ ಮಾತುಗಳನ್ನು ಕೇಳುವ ಸ್ಥಿತಿ ತಲುಪಿವೆ ಎಂದು ಹೇಳಿದ್ದು ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ಅಡ್ವೊಕೇಟ್ ಜನರಲ್‌ಗೆ ವಕೀಲ ವಸಂತ್ ಕುಮಾರ್ ಮನವಿ ಸಲ್ಲಿಸಿದ್ದಾರೆ.
ನವೆಂಬರ್ 13ರಂದು ಎಚ್ ಡಿ ಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆ ಎಲ್ಲವೂ ಕೇಂದ್ರ ಸರ್ಕಾರದ ಕೈಗೊಂಬೆಯಾಗಿವೆ. ನ್ಯಾಯಾಲಯಗಳು ಕೂಡ ಕೇಂದ್ರ ಸರ್ಕಾರದ ಮಾತು ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆ ನ್ಯಾಯಾಂಗದ ಸ್ವಾತಂತ್ರತೆಯನ್ನು ಪ್ರಶ್ನಿಸುವಂತಿದೆ. ನ್ಯಾಯಾಂಗವು ಕಾರ್ಯಾಂಗದ ಪ್ರಭಾವದಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಮಾಡಿದಂತಿದೆ. ಆದ್ದರಿಂದ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ನ್ಯಾಯಾಲಯದ ಅಧಿಕಾರ ಮತ್ತು ಸಮಗ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ನ್ಯಾಯಾಂಗದ ವಿಮರ್ಶೆಯ ಎಲ್ಲೆಯನ್ನು ಮೀರಿದೆ. ನ್ಯಾಯಾಲಯದ ಘನತೆಗೆ ಕಳಂಕ ತರುವ, ನ್ಯಾಯಾಲಯದ ಘನತೆ ಮತ್ತು ಅಧಿಕಾರ ಎತ್ತಿ ಹಿಡಿಯುವ ಮತ್ತು ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಕುಂದಿಸು ಯತ್ನಗಳನ್ನು ತಡೆಯವ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.