ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ಹೈಕೋರ್ಟ್‌ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದ ವಕೀಲರು

ಬೆಳಿಗ್ಗೆ 10.30ಕ್ಕೆ ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂಭಾಗದಲ್ಲಿ ಕುಳಿತು ಶಾಂತಿಯುತ ಪ್ರತಿಭಟನೆ ಆರಂಭಿಸಿದ ವಕೀಲರು ಸಂಜೆಯವರೆಗೆ ಪ್ರತಿಭಟನೆ ಮುಂದುವರಿಸಿದರು.
ನ್ಯಾಯಮೂರ್ತಿಗಳ ವರ್ಗಾವಣೆ ವಿರೋಧಿಸಿ ಹೈಕೋರ್ಟ್‌ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದ ವಕೀಲರು
Published on

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್‌, ಕೆ ನಟರಾಜನ್‌, ಎನ್‌ ಎಸ್‌ ಸಂಜಯಗೌಡ ಮತ್ತು ಹೇಮಂತ ಚಂದನಗೌಡರ್‌ ಅವರನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೈಗೊಂಡಿರುವ ಶಿಫಾರಸ್ಸು ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿ ಹೈಕೋರ್ಟ್‌ ವಕೀಲರು ಬುಧವಾರದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿಯೂ ವಕೀಲರು ಕಲಾಪಕ್ಕೆ ಗೈರಾಗುವ ಮೂಲಕ ಪ್ರತಿಭಟನೆ ದಾಖಲಿಸಿದರು.

ಬೆಳಗ್ಗೆ 10.30ಕ್ಕೆ ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂಭಾಗದಲ್ಲಿ ಕುಳಿತು ಶಾಂತಿಯುತ ಪ್ರತಿಭಟನೆ ಆರಂಭಿಸಿದರು. ಬೆಂಗಳೂರು ವಕೀಲರ ಸಂಘದ (ಎಎಬಿ) ಪದಾಧಿಕಾರಿಗಳು, ರಾಜ್ಯ ವಕೀಲರ ಪರಿಷತ್‌ ಮಾಜಿ ಅಧ್ಯಕ್ಷ ಎಚ್‌ ಎಲ್‌ ವಿಶಾಲ ರಘು, ಹೈಕೋರ್ಟ್‌ನ ಹಿರಿಯ ಹಾಗೂ ಕಿರಿಯ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಯಾವುದೇ ಹಿರಿ–ಕಿರಿಯ ವಕೀಲರು ಕಲಾಪಗಳಿಗೆ ಹಾಜರಾಗದಂತೆ ಕೋರ್ಟ್ ಪ್ರವೇಶಿಸುವ ವಕೀಲರಿಗೆ ಮನವಿ ಮಾಡಿದರು. ಇದರಿಂದಾಗಿ ದಿನದ ಕೋರ್ಟ್‌ ಕಲಾಪಗಳು ನಡೆಯಲಿಲ್ಲ.

ಹಲವು ವಕೀಲರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕೆಂಪು ಪಟ್ಟಿ ಧರಿಸಿ, ನ್ಯಾಯಾಧೀಶರ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೊಲಿಜಿಯಂ ನಿರ್ಧಾರದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಅವಲೋಕನ ನಡೆಸಿದರು. ಸಾಕಷ್ಟು ವಕೀಲರು ಕಲಾಪ ಮತ್ತು ಪ್ರತಿಭಟನೆಯಿಂದ ದೂರ ಉಳಿದಿದ್ದರು.

Also Read
ಭಾಷಾ ನೀತಿ ಮತ್ತು ವರ್ಗಾವಣೆ ನಡುವಿನ ಸಂಬಂಧವನ್ನು ಸುಪ್ರೀಂ ಕೊಲಿಜಿಯಂ, ಕೇಂದ್ರ ಅರಿಯಲಿ: ಹಿರಿಯ ವಕೀಲ ಬಿ ವಿ ಆಚಾರ್ಯ

ಇನ್ನು, ಎಎಬಿ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸಿದಂತೆ ಕೇಂದ್ರ ಕಾನೂನು ಸಚಿವರನ್ನು ಭೇಟಿ ಮಾಡಿ, ನ್ಯಾಯಮೂರ್ತಿಗಳ ವರ್ಗಾವಣೆ ಶಿಫಾರಸ್ಸಿಗೆ ಒಪ್ಪಿಗೆ ನೀಡದಂತೆ ಮನವಿ ಮಾಡಲು ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್‌ ವಿ ಪ್ರವೀಣ್‌ ಗೌಡ, ಹಿರಿಯ ವಕೀಲ ಕೆ ಎನ್‌ ಫಣೀಂದ್ರ ದೆಹಲಿ ಹೋಗಿದ್ದಾರೆ.

ಪ್ರತಿಭಟನೆಯಲ್ಲಿ ಸಕ್ರಿಯರಾಗಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಎಎಬಿ ಸರ್ವಸದಸ್ಯರ ಸಭೆಯಲ್ಲಿ ಬುಧವಾರ ಮಾತ್ರ ಕಲಾಪ ಬಹಿಷ್ಕರಿಸಲು ನಿರ್ಧರಿಸಲಾಗಿತ್ತು. ಅಂತೆಯೇ ನ್ಯಾಯಾಲಯದ ನಿರ್ಣಯದಂತೆ ಎಎಬಿ ಪದಾಧಿಕಾರಿಗಳು ಮತ್ತು ಆಯ್ದ ಹಿರಿಯ ವಕೀಲರು ದೆಹಲಿಯಲ್ಲಿ ಸಂಬಂಧಿತರನ್ನು ಭೇಟಿ ಮಾಡಲು ತೆರಳಿದ್ದಾರೆ. ಇಲ್ಲಿನ ಬೆಳವಣಿಗೆ ಆಧರಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು” ಎಂದು ತಿಳಿಸಿದ್ದಾರೆ.

Kannada Bar & Bench
kannada.barandbench.com