

ಕಕ್ಷಿದಾರರಿಗೆ ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ (ಇ ಡಿ) ರೀತಿಯ ತನಿಖಾ ಸಂಸ್ಥೆಗಳು ಸಮನ್ಸ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಭಾರತೀಯ ಸಾಕ್ಷ್ಯ ಅಧಿನಿಯಮ, 2023 (ಬಿಎಸ್‌ಎ) ಸೆಕ್ಷನ್ 132ರ ಅಡಿಯಲ್ಲಿ ಉಲ್ಲೇಖಿಸಲಾದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಕೀಲರಿಗೆ ಸಮನ್ಸ್ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ತಿಳಿಸಿದೆ.
ವಕೀಲರು ತಮ್ಮ ಕಕ್ಷಿದಾರರೊಂದಿಗೆ ಗೌಪ್ಯ ಸಂವಹನಗಳನ್ನು ಬಹಿರಂಗಪಡಿಸದಂತೆ ಬಿಎಸ್‌ಎ ಸೆಕ್ಷನ್ 132 ನಿಷೇಧಿಸುತ್ತದೆ. ಆದರೆ ಕಾನೂನುಬಾಹಿರ ವಿಚಾರವಾಗಿ ಮಾಹಿತಿ ವಿನಿಮಯಗೊಂಡಿದ್ದರೆ ಇಲ್ಲವೇ ವಕೀಲರೇ ಅಪರಾಧ ಅಥವಾ ವಂಚನೆಯಲ್ಲಿ ತೊಡಗಿದ್ದಾಗ ಮಾತ್ರ ಅಂತಹ ಮಾಹಿತಿ ಬಹಿರಂಗಕ್ಕೆ ವಿನಾಯಿತಿ ಇರುತ್ತದೆ.
ಆರೋಪಿತರ ಪರ ವಾದಿಸುವ ವಕೀಲರಿಗೆ ಯಾವುದೇ ಸಂದರ್ಭದಲ್ಲಿ ತನಿಖಾಧಿಕಾರಿಗಳು ಸಮನ್ಸ್ ನೀಡಬಾರದು. ವಕೀಲರಿಗೆ ಸಮನ್ಸ್ ನೀಡಬೇಕೆಂದಿದ್ದರೆ ಯಾವ ಕಾರಣಕ್ಕೆ ಸಮನ್ಸ್ ನೀಡಲಾಗಿದೆ ಎಂದು ಸಮನ್ಸ್ ನೋಟಿಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಅಲ್ಲದೆ ವಕೀಲರಿಂದ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದರೆ ಸಂಬಂಧಪಟ್ಟ ಕ್ರಿಮಿನಲ್ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಜೊತೆಗೆ ವಕೀಲರು ಮತ್ತು ಸಂಬಂಧಪಟ್ಟ ಇತರ ಪಕ್ಷಕಾರರ ಸಮ್ಮುಖದಲ್ಲಿ ಮಾತ್ರವೇ ತೆರೆಯಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವೊಂದರಲ್ಲಿ ತಮ್ಮ ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಮಾಧ್ಯಮ ವರದಿಗಳು ಪ್ರಕಟವಾದ ನಂತರ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದಾತಾರ್ ಹಾಗೂ ಇನ್ನಿತರರಿಗೆ ನೀಡಿದ್ದ ಸಮನ್ಸ್‌ಅನ್ನು ಕೂಡ ರದ್ದುಗೊಳಿಸಿದೆ.