ರಾಜ್ಯ ಬಜೆಟ್‌ನಲ್ಲಿ ವಕೀಲರ ಸಮುದಾಯ ನಿರ್ಲಕ್ಷ್ಯ ಆರೋಪ: ಬೆಂಗಳೂರು ವಕೀಲರ ಸಂಘದ ಖಂಡನೆ

ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ನಿಯಂತ್ರಿಸುವ ಸಂಬಂಧ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವ ಕುರಿತು ಬಜೆಟ್‌ ಪ್ರತಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಬೆಂಗಳೂರು ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
Lawyers
Lawyers
Published on

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ರಾಜ್ಯದ ಆಯವ್ಯಯದಲ್ಲಿ ವಕೀಲರ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘ ಬೇಸರ ವ್ಯಕ್ತಪಡಿಸಿದೆ.

ವಕೀಲರಿಗೆ ನೀಡುವ ಪ್ರೋತ್ಸಾಹಧನವನ್ನು 2,000 ರೂಪಾಯಿಗಳಿಂದ 5,000 ರೂಪಾಯಿಗಳಿಗೆ ಹೆಚ್ಚಿಸಲು ಹಾಗೂ ಅವಧಿಯನ್ನು ಎರಡು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಲು ಮತ್ತು ವಾರ್ಷಿಕ ಆದಾಯದ ಮಿತಿಯನ್ನು 40,000 ರೂಪಾಯಿಯಿಂದ 4 ಲಕ್ಷ ರೂಪಾಯಿಗೆ ಏರಿಸಲು ಕೋರಿ ಸಂಘವು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿಲ್ಲ. ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಸಮುದಾಯಕ್ಕೆ 100 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂಬ ಮನವಿಯನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ವಕೀಲ ಸಂಘದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ನಿಯಂತ್ರಿಸುವ ಸಂಬಂಧ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವ ಕುರಿತು ಬಜೆಟ್‌ ಪ್ರತಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Also Read
ವಕೀಲರಿಗಷ್ಟೇ ಅಲ್ಲ, ವಕೀಲರ ಗುಮಾಸ್ತರಿಗೂ ಆರ್ಥಿಕ ನೆರವು ನೀಡಿದೆವು: ಎ ಪಿ ರಂಗನಾಥ್‌

ವಕೀಲರ ಸಮುದಾಯವನ್ನು ನಿರ್ಲಕ್ಷಿಸಿ ಜಾತಿಯಾಧಾರಿತ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡಲಾಗಿದೆ. ವಕೀಲರು ನ್ಯಾಯಾಲಯದ ಅಧಿಕಾರಿಗಳಾಗಿದ್ದಾರೆ. ಸಮಾಜದ ಮುಖ್ಯ ವಾಹಿನಿಯಲ್ಲಿ ವಕೀಲರ ಸಮುದಾಯ ಕೆಲಸ ಮಾಡುತ್ತಿದ್ದು, ಅವರ ಹಿತಾಸಕ್ತಿ ಕಾಯುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ಸರ್ಕಾರಗಳು ವಕೀಲರ ಸಮುದಾಯದ ಕೋರಿಕೆಗಳನ್ನು ಮನ್ನಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸಿವೆ. ಹೀಗಾಗಿ ತಾವು ಇಂದಿನ ಪರಿಸ್ಥಿತಿಯನ್ನು ಅರಿತು ಪೂರಕ ಬಜೆಟ್‌ನಲ್ಲಿ ವಕೀಲರ ಕೋರಿಕೆಗಳನ್ನು ಪರಿಗಣಿಸಬೇಕು ಎಂದು ಮಾಧ್ಯಮ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ.

Kannada Bar & Bench
kannada.barandbench.com