ಸುಪ್ರೀಂ ಕೋರ್ಟ್ ಕಾರ್ಯಚಟುವಟಿಕೆಯನ್ನು ಕಠುವಾಗಿ ವಿಮರ್ಶಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮಾಡಿದ್ದ ಎರಡು ಟ್ವೀಟ್ ಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ಆಗಸ್ಟ್ 14ರಂದು ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಇದಕ್ಕೆ ಪ್ರಮುಖ ಹಿರಿಯ ವಕೀಲರನ್ನೊಳಗೊಂಡ ವಕೀಲರ ಸಮೂಹವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿಗೆ ನಿರಾಸೆ ವ್ಯಕ್ತಪಡಿಸಿದೆ.
ವ್ಯವಸ್ಥೆಯಲ್ಲಿನ ಯಾವುದೇ ನ್ಯೂನತೆಗಳನ್ನು ವಕೀಲರ ಒಕ್ಕೂಟ, ನ್ಯಾಯಾಲಯ ಮತ್ತು ಸಾರ್ವಜನಿಕರ ಗಮನಕ್ಕೆ ತರುವುದು ವಕೀಲರ ಕರ್ತವ್ಯ ಎಂದು ಹೇಳಿಕೆಯಲ್ಲಿ ಸಹಿ ಮಾಡಿರುವ ವಕೀಲರು ಒತ್ತಿ ಹೇಳಿದ್ದಾರೆ.
“ಪ್ರಶಾಂತ್ ಭೂಷಣ್ ಅವರ ಎರಡು ಟ್ವೀಟ್ ಗಳಲ್ಲಿನ ಸಲಹೆ ಮತ್ತು ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಹಲವರು ವಿಭಿನ್ನ ನಿಲುವು ಹೊಂದಿರಬಹುದು. ಆದರೆ, ಭೂಷಣ್ ಅವರ ಟ್ವೀಟ್ ಗಳಲ್ಲಿ ನ್ಯಾಯಾಂಗ ನಿಂದನೆಯಾಗುವಂಥ ಅಂಶಗಳು ಇರಲಿಲ್ಲ ಎಂಬ ಸರ್ವಸಮ್ಮತ ಅಭಿಪ್ರಾಯ ಹೊಂದಿದ್ದೇವೆ” ಎಂದು ಹೇಳಲಾಗಿದೆ.
“ಪ್ರಶಾಂತ್ ಭೂಷಣ್ ಸಾಮಾನ್ಯ ಮನುಷ್ಯರೇನಲ್ಲ. ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ ಹಲವು ಪ್ರಮುಖ ವಕೀಲರಲ್ಲಿ ಒಬ್ಬರಾದ ಅವರು ಸಾಮಾನ್ಯ ಅಭಿಪ್ರಾಯಕ್ಕೆ ವಿರುದ್ಧವಾದದ್ದೇನನ್ನೂ ಹೇಳಿಲ್ಲ. ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಲಯದ ಕಾರ್ಯಚಟುವಟಿಕೆಯ ಬಗ್ಗೆ ಸಾರ್ವಜನಿಕ ವಲಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವುದನ್ನೇ ಪುನರುಚ್ಚರಿಸಿದ್ದಾರೆ” ಎಂದು ವಕೀಲರು ಭೂಷಣ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಕೆಲವು ನಿವೃತ್ತ ನ್ಯಾಯಮೂರ್ತಿಗಳು ಹಿಂದೆ ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಕೀಲರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಭೂಷಣ್ ಪ್ರರಕಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವ ಮುನ್ನ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ ಅವರ ಅಭಿಪ್ರಾಯವನ್ನು ನ್ಯಾಯಾಲಯ ಪಡೆದಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ನ್ಯಾಯಾಂಗ ನಿಂದನೆ ಕಾನೂನಿನಡಿ ಅಟಾರ್ನಿಯವರ ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಿದೆ.
ಕೋವಿಡ್ ಸಾಂಕ್ರಾಮಿಕತೆ ಮುಗಿದ ನಂತರ ಸುಪ್ರೀಂ ಕೋರ್ಟ್‌ನ ಉನ್ನತ ಪೀಠವೊಂದು ಮುಕ್ತ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆಯ ವ್ಯಾಪ್ತಿಯ ವಿಧಿ-ವಿಧಾನಗಳ ಕುರಿತು ಸ್ಪಷ್ಟ ವಿಚಾರಣೆ ನಡೆಸುವವರೆಗೆ ಆಗಸ್ಟ್ 14ರ ತೀರ್ಪನ್ನು ಜಾರಿಗೊಳಿಸಬಾರದು ಎಂದು ಹೇಳಿಕೆಗೆ ಸಹಿ ಹಾಕಿರುವ ವಕೀಲರ ಸಮುದಾಯ ಆಗ್ರಹಿಸಿದೆ.
ಹೇಳಿಕೆಗೆ ಸಹಿ ಹಾಕಿರುವ ವಕೀಲರು, ಬಾರ್‌ನಲ್ಲಿ ನೋಂದಾವಣೆಯಾಗಿರುವ ಇತರ ವಕೀಲರು ಈ ಹೇಳಿಕೆಯೊನ್ನಳೊಂಡ ಗೂಗಲ್ ಫಾರ್ಮ್ ಗೆ ಸಹಿ ಹಾಕಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಪ್ರಶಾಂತ್ ಭೂಷಣ್ ಅವರು 2009ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯ ಕುರಿತು ನ್ಯಾಯಾಂಗ ನಿಂದನೆ ದೂರು ದಾಖಲಾಗಿದ್ದು, ಅದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, “ನ್ಯಾಯಮೂರ್ತಿಯ ವಿರುದ್ಧ ದೂರು ನೀಡುವುದಿದ್ದರೆ ಯಾವ ವಿಧಾನ ಅನುಸರಿಸಬೇಕು? ಯಾವ ಸಂದರ್ಭದಲ್ಲಿ ಇಂಥ ಆರೋಪಗಳನ್ನು ಮಾಡಬಹುದು? ಎಂದು ಕೋರ್ಟ್ ಟೀಕೆಗೆ ಸಂಬಂಧಿಸಿದಂತೆ ಪ್ರಶ್ನಿಸಿತು. ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.