ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕು: ಸಚಿವ ಮಹದೇವಪ್ಪ

ಸಂವಿಧಾನದ ಆಶಯವನ್ನು ಈಡೇರಿಸುವ ಮುಖಾಂತರ ಭಾರತವು ಸ್ವಾತಂತ್ರ್ಯದ ಹೋರಾಟ ಮತ್ತು ಸಂವಿಧಾನದ ಪರಿಕಲ್ಪನೆಯಿಂದ ಕೂಡಿದ ರಾಮ ರಾಜ್ಯವಾಗಬೇಕು. ಈ ಪರಿಕಲ್ಪನೆಯ ಉದ್ದೇಶಗಳನ್ನು ಜಾರಿಗೊಳಿಸಲು ವಕೀಲರ ಪಾತ್ರ ಅತ್ಯಂತ ಮುಖ್ಯ ಎಂದ ಸಚಿವರು.
ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕು: ಸಚಿವ ಮಹದೇವಪ್ಪ

“ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕಿದೆ” ಸಮಾಜ ಕಲ್ಯಾಣ ಸಚಿವ ಡಾ. ಎಚ್‌ ಸಿ ಮಹದೇವಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ನಗರದ ವಸ್ತು ಪ್ರದರ್ಶನ ಮೈದಾನದಲ್ಲಿ ಭಾನುವಾರ ನಡೆದ ವಕೀಲರ ರಾಜ್ಯ ಮಟ್ಟದ 10ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಪ್ರಜಾಪ್ರಭುತ್ವದ ಆಧಾರ ಸ್ಥಂಭವಾದ ನ್ಯಾಯಾಂಗ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಸಂವಿಧಾನದ ಆಶಯವನ್ನು ಈಡೇರಿಸುವ ಮುಖಾಂತರ ಭಾರತವು ಸ್ವಾತಂತ್ರ್ಯದ ಹೋರಾಟ ಮತ್ತು ಸಂವಿಧಾನದ ಪರಿಕಲ್ಪನೆಯಿಂದ ಕೂಡಿದ ರಾಮ ರಾಜ್ಯವಾಗಬೇಕು. ಈ ಪರಿಕಲ್ಪನೆಯ ಉದ್ದೇಶಗಳನ್ನು ಜಾರಿಗೊಳಿಸಲು ವಕೀಲರ ಪಾತ್ರ ಅತ್ಯಂತ ಮುಖ್ಯ” ಎಂದರು‌.

“ದೇಶದಲ್ಲಿ ಎಲ್ಲಾ ಧರ್ಮದ ಜನರಿದ್ದಾರೆ. ಅನೇಕ ಪುಣ್ಯಕ್ಷೇತ್ರಗಳಿವೆ. ಅವರವರ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಲು ಮುಕ್ತ ಅವಕಾಶವಿದೆ. ಆದರೆ ರಾಜಕೀಯ ಪಕ್ಷಗಳು ಇಲ್ಲದ ಅಧಿಕಾರ ಬಳಸಿ ಒಂದು ಧರ್ಮದ ಆಚಾರ ವಿಚಾರಗಳನ್ನು ಇನ್ನೊಂದು ಧರ್ಮದ ಮೇಲೆ ಹೇರುವುದು ಬಲವಂತದ ಮತಾಂತರಕ್ಕೆ ಸಮ ಎಂದು ಗಾಂಧೀಜಿ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಯಾಕೆ ರಾಜಕಾರಣ ಮಾಡುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ” ಎಂದರು.

“ಈ ರೀತಿಯ ವೈರುಧ್ಯದ ರಾಜಕೀಯ ನಡವಳಿಕೆ ನಮ್ಮ ಸ್ವಾತಂತ್ರ್ಯ, ಸಂವಿಧಾನದ ಆಶಯ ಈಡೇರಿಸಲು ತೊಡಕಾಗಿವೆ. ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ ಮಹಿಳೆಯರ ಮೇಲಿನ ದೌರ್ಬನ್ಯ, ದಲಿತರ ಮೇಲಿನ ಶೋಷಣೆ ಅವಲೋಕಿಸಿದಾಗ ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

“ದೇಶದ ಬೆನ್ನೆಲುಬಾದ ಕೃಷಿ ವ್ಯಾಪಾರೀಕರಣ ಆಗುತ್ತಿದೆ. ಕೈಗಾರಿಕೆಯು ಕೃಷಿಯನ್ನು ಹಿಂದಿಕ್ಕಿದರೆ, ಗ್ರಾಮೀಣ ಪ್ರದೇಶದ ಆರ್ಥಿಕ ಬೆನ್ನೆಲುಬು ಮುರಿಯಲಿದೆ. ಇಂತಹ ಅನೇಕ ರಾಷ್ಟ್ರೀಯ ಸಮಸ್ಯೆಗಳನ್ನು ವಕೀಲರು ಕೈಗೆತ್ತಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು. ವಕೀಲರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ಹಾಗೂ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಚ್‌ ಎಲ್ ವಿಶಾಲ ರಘು ಅಧ್ಯಕ್ಷತೆ ವಹಿಸಿದ್ದರು. ಹಿಮಾಚಲ ಪ್ರದೇಶ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್‌ ನಾರಾಯಣಸ್ವಾಮಿ, ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್‌ ಫಣೀಂದ್ರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ, ವಿಧಾನ ಪರಿಷತ್‌ ಸದಸ್ಯ ಎಸ್‌ ಎಲ್ ಭೋಜೇ ಗೌಡ, ಮೈಸೂರು ಜಿಲ್ಲಾ ಪ್ರಧಾನ ನ್ಯಾಯಾಧೀಶ ಜಿ ಎಸ್‌ ಸಂಗ್ರೇಶಿ, ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್‌ ಬಾನೂತ್‌ ಇದ್ದರು.

ಪ್ರವಾಸಿ ತಾಣಗಳತ್ತ ವಕೀಲರ ಚಿತ್ತ

ಸರಣಿ ರಜೆಗಳ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಸಮಾವೇಶಕ್ಕೆ ಬಂದ ವಕೀಲರು ಸಹ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದರು. ಶ್ರೀರಂಗಪಟ್ಟಣ, ನಂಜನಗೂಡು, ಬಂಡೀಪುರದತ್ತ ಕೆಲವರು ತೆರಳಿದರೆ, ಇನ್ನೂ ಕೆಲವರು ನಗರದಲ್ಲಿನ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ, ಇಲ್ಲಿನ ಹೋಟೆಲ್‌ಗಳಲ್ಲಿನ ಬಗೆಬಗೆಯ ಖಾದ್ಯ ಸವಿದರು. ನಗರದ ಬಹುತೇಕ ಹೋಟೆಲ್‌ಗಳು ಪ್ರವಾಸಿಗರು ಹಾಗೂ ವಕೀಲರಿಂದ ಭರ್ತಿ ಆಗಿದ್ದವು.

Related Stories

No stories found.
Kannada Bar & Bench
kannada.barandbench.com