ವಕೀಲರಿಂದ ಧರಣಿ: ಪ್ರತಿಭಟನಾನಿರತ ವಕೀಲರ ವಿರುದ್ಧ ಶಿಸ್ತುಕ್ರಮ ನಿಯಮ ವಾರದಲ್ಲಿ ಅಂತಿಮ; ಸುಪ್ರೀಂಗೆ ಬಿಸಿಐ ವಿವರಣೆ

ಒಂದು ವಾರದ ಒಳಗೆ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್‌ ಮಿಶ್ರಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
Bar Council of India
Bar Council of IndiaA1

ದೇಶಾದ್ಯಂತ ಇರುವ ರಾಜ್ಯ ವಕೀಲರ ಪರಿಷತ್‌ಗಳ ಪದಾಧಿಕಾರಿಗಳು ಕಳೆದ ವಾರ ಸಭೆ ನಡೆಸಿದ್ದು, ಪ್ರತಿಭಟನಾನಿರತ ವಕೀಲರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ತಿಳಿಸಿದೆ [ಕಾಮನ್‌ ಕಾಸ್‌ ವರ್ಸಸ್‌ ಅಭಿಜಿತ್‌ ಮತ್ತು ಇತರರು].

ನ್ಯಾಯಾಲಯದ ಕಲಾಪಕ್ಕೆ ಬಹಿಷ್ಕಾರ ಹಾಕುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸರ್ಕಾರೇತರ ಸಂಸ್ಥೆ ಕಾಮನ್‌ ಕಾಸ್‌ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಮತ್ತು ಸಂಜಯ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬಿಸಿಐ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು “ಒಂದು ವಾರದ ಒಳಗೆ ನಿಯಮಗಳನ್ನು ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದರು.

ಆಗ ಪೀಠವು “ಬಹಳ ಒಳ್ಳೆಯದು. ಅದನ್ನೇ ನಾವು ಕೇಳ ಬಯಸಿದ್ದು. ನೀವು ಅನಿವಾರ್ಯವಾಗಿ ಕ್ರಮಕೈಗೊಳ್ಳುವಂತಹ ಸಂದರ್ಭ ಬಂದಾಗ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು. ಅಲ್ಲದೇ ಪ್ರಕರಣವನ್ನು ಜುಲೈ 17ಕ್ಕೆ ವಿಚಾರಣೆಗೆ ಪಟ್ಟಿ ಮಾಡಿತು.

ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸುವ ವಕೀಲರ ವಿರುದ್ಧ ಶಿಸ್ತುಕ್ರಮ ನಿಯಮಗಳನ್ನು ಅಂತಿಮಗೊಳಿಸದ ಬಿಸಿಐ ವಿರುದ್ಧ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಪ್ರತಿಭಟನಾನಿರತ ವಕೀಲರಿಗೆ ನೇರವಾಗಿ ಶಿಕ್ಷೆ ವಿಧಿಸುವುದನ್ನು ಬಿಟ್ಟು ತಮಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ” ಎಂದಿತ್ತು.

ದೇಶಾದ್ಯಂತ ವಕೀಲರ ಪ್ರತಿಭಟನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಪಷ್ಟವಾದ ಕ್ರಮಕೈಗೊಳ್ಳಲು ತಡ ಮಾಡುತ್ತಿರುವು ಬಿಸಿಐ ವಿರುದ್ಧ ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com