ಕೇಂದ್ರ ಸರ್ಕಾರಕ್ಕೆ ಸಾಲಿಸಿಟರ್ ಜನರಲ್ ನೀಡುವ ಕಾನೂನು ಸಲಹೆಗೆ ಆರ್‌ಟಿಐ ಕಾಯಿದೆಯಿಂದ ವಿನಾಯಿತಿ: ದೆಹಲಿ ಹೈಕೋರ್ಟ್

ಸಾಲಿಸಿಟರ್ ಜನರಲ್ ಮತ್ತು ಭಾರತ ಸರ್ಕಾರದ ನಡುವಿನ ಸಂಬಂಧ ವಿಶ್ವಸ್ತ ಹಾಗೂ ಫಲಾನುಭವಿ ನಡುವಿನ ಸಂಬಂಧವಾಗಿದೆ ಎಂದು ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅಭಿಪ್ರಾಯಪಟ್ಟರು.
ದೆಹಲಿ ಹೈಕೋರ್ಟ್ ಮತ್ತು ಆರ್ಟಿಐ ಕಾಯ್ದೆ
ದೆಹಲಿ ಹೈಕೋರ್ಟ್ ಮತ್ತು ಆರ್ಟಿಐ ಕಾಯ್ದೆ

ಭಾರತ ಸರ್ಕಾರ ಹಾಗೂ ಇತರ ಸರ್ಕಾರಿ ಇಲಾಖೆಗಳಿಗೆ ಭಾರತದ ಸಾಲಿಸಿಟರ್ ಜನರಲ್ ನೀಡುವ ಕಾನೂನು ಸಲಹೆಯನ್ನು ಮಾಹಿತಿ ಹಕ್ಕು ಕಾಯಿದೆ- 2005ರ (ಆರ್‌ಟಿಐ ಕಾಯಿದೆ) ಸೆಕ್ಷನ್ 8 (1) (ಇ)  ಅಡಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. 

ಕಾನೂನು ಅಧಿಕಾರಿ (ಸೇವಾ ಷರತ್ತು) ನಿಯಮಾವಳಿ- 1987 ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳ ಪ್ರಕಾರ, ಸಾಲಿಸಿಟರ್ ಜನರಲ್ ಮತ್ತು ಭಾರತ ಸರ್ಕಾರದ ನಡುವಿನ ಸಂಬಂಧ ವಿಶ್ವಸ್ತ ಮತ್ತು ಫಲಾನುಭವಿ ನಡುವಿನ ಸಂಬಂಧವಾಗಿದೆ ಎಂದು ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅಭಿಪ್ರಾಯಪಟ್ಟರು.

ಸಾಲಿಸಿಟರ್ ಜನರಲ್ ಅವರ ಮೇಲೆ ಫಲಾನುಭವಿ (ಕೇಂದ್ರ ಸರ್ಕಾರ) ನಂಬಿಕೆ ಇರಿಸಿದ್ದು ಅವಲಂಬಿತವಾಗಿರುತ್ತದೆ. ಹೀಗಿರುವಾಗ ಕೇಂದ್ರ ಹಾಗೂ ಉಳಿದ ಇಲಾಖೆಗಳ ಉಪಯೋಗಕ್ಕಾಗಿ ಸದ್ಭಾವನೆಯಿಂದ ಕೆಲಸ ಮಾಡಲು ಸಾಲಿಸಿಟರ್ ಜನರಲ್ ಬದ್ಧರಾಗಿರುತ್ತಾರೆ ಎಂದು ನ್ಯಾಯಾಲಯ ಒತ್ತಿಹೇಳಿತು.

"ಭಾರತ ಸರ್ಕಾರ ಮತ್ತಿತರ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಾಲಿಸಿಟರ್ ಜನರಲ್ ಅವರು ವಿಶ್ವಸನೀಯ ರೂಪದಲ್ಲಿ ಸಲಹೆ ನೀಡುತ್ತಾರೆ. ಆದ್ದರಿಂದ ಆರ್‌ಟಿಐ ಕಾಯಿದೆಯ ಸೆಕ್ಷನ್ 8 (1) (ಇ) ಅನ್ವಯಿಸಲಾಗಿದೆ ಎಂದು ಅರ್ಜಿದಾರರ (ಕೇಂದ್ರ ಸರ್ಕಾರ) ಪರ ವಕೀಲರು ಮಂಡಿಸಿದ ವಾದದಲ್ಲಿ ನ್ಯಾಯಾಲಯಕ್ಕೆ ಯಾವುದೇ ನ್ಯೂನತೆ ಕಾಣುತ್ತಿಲ್ಲ" ಎಂದು ನ್ಯಾ. ಪ್ರಸಾದ್ ತಿಳಿಸಿದರು.

"ಆರ್‌ಟಿಐ ಕಾಯಿದೆಯ ಸೆಕ್ಷನ್‌ 8(2) ಅನ್ನು ಅನ್ವಯಿಸಲು ಅಗತ್ಯವಾದ ಸಾರ್ವಜನಿಕ ಹಿತಾಸಕ್ತಿ ಯಾವುದು ಎನ್ನುವುದನ್ನು ವಿವರಿಸುವಲ್ಲಿ ಅರ್ಜಿದಾರರು ಸೋತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಅನುಪಸ್ಥಿತಿಯಲ್ಲಿ ಪ್ರತಿವಾದಿಗಳಿಂದ ಕೋರಲಾಗಿರುವ ಮಾಹಿತಿಯು ಆರ್‌ಟಿಐ ಕಾಯಿದೆ ಸೆಕ್ಷನ್‌ 8(1) ಅಡಿ ವಿನಾಯಿತಿಗೆ ಒಳಪಟ್ಟಿದೆ. ಹಾಗಾಗಿ, ಈ ನ್ಯಾಯಾಲಯವು ಆರ್‌ಟಿಐ ಕಾಯಿದೆಯ ಸೆಕ್ಷನ್‌ 8(2) ಅಡಿಯ ಅವಕಾಶವನ್ನು ಬಳಸಲು ಉತ್ಸುಕವಾಗಿಲ್ಲ" ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತು.

ಸುಭಾಷ್ ಚಂದ್ರ ಅಗರ್ವಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯುಕ್ತರು (ಸಿಐಸಿ) 2011ರ ಡಿಸೆಂಬರ್ 5ರಂದು ಹೊರಡಿಸಿದ್ದ ಆದೇಶ ತಳ್ಳಿಹಾಕಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಹಿಂದಿನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ದೂರಸಂಪರ್ಕ ಇಲಾಖೆಗೆ ಆಗಿನ ಸಾಲಿಸಿಟರ್ ಜನರಲ್ ನೀಡಿದ 2007ರ ಟಿಪ್ಪಣಿ / ಅಭಿಪ್ರಾಯದ ಪ್ರತಿಯನ್ನು ಒದಗಿಸುವಂತೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ (ಸಿಪಿಐಒ) ನಿರ್ದೇಶಿಸಿದ್ದ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿತ್ತು.

ಟೆಲಿಕಾಂ ವ್ಯಾಜ್ಯಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್ಎಟಿ) ಮತ್ತು ದೆಹಲಿ ಹೈಕೋರ್ಟ್‌ನಲ್ಲಿ 2 ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಲ್ಲಿಸಿದ್ದ ವಿವಿಧ ಅರ್ಜಿಗಳ ಕುರಿತಾದ ಮಾಹಿತಿಯನ್ನು ಕೇಳಲಾಗಿತ್ತು.

ವಾದ ಪುರಸ್ಕರಿಸಿದ ನ್ಯಾಯಮೂರ್ತಿ ಪ್ರಸಾದ್, ಆರ್‌ಟಿಐ ಕಾಯಿದೆಯ ಸೆಕ್ಷನ್ 8 (2)ರಡಿ ವಿನಾಯಿತಿ ಪಡೆದ ಮಾಹಿತಿಯು ವ್ಯಕ್ತಿಗಳ ಖಾಸಗಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಪರಿಣಾಮ ಹೊಂದಿದ್ದರೆ, ಆಗ ಅದನ್ನು ಒದಗಿಸಬಹುದು. ಈ ಪ್ರಕರಣದಲ್ಲಿ ಇಂತಹ ಪರಿಹಾರಕ್ಕೆ ಒತ್ತಾಯಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟರು.

ಸಾಲಿಸಿಟರ್ ಜನರಲ್ ಅವರ ಸಲಹೆಯ ವಿವರಗಳನ್ನು ಸಂಗ್ರಹಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಏನು ಎಂಬುದನ್ನು ಪ್ರದರ್ಶಿಸಲು ಅಗರ್‌ವಾಲ್‌ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.ಈ ಹಿನ್ನೆಲೆಯಲ್ಲಿ ಸಿಐಸಿ ಆದೇಶವನ್ನು ಬದಿಗಿಟ್ಟ ಪೀಠ ಮನವಿಯನ್ನು ವಿಲೇವಾರಿ ಮಾಡಿತು.

[ತೀರ್ಪಿನ ಪ್ರತಿ ಇಲ್ಲಿ ಲಭ್ಯ]

Attachment
PDF
Union of India and Anr v Subhash Chandra Agrawal.pdf
Preview

Related Stories

No stories found.
Kannada Bar & Bench
kannada.barandbench.com