
ಅತ್ಯಾಚಾರ ಆರೋಪ ಎದುರಿಸುತ್ತಿದ್ದ ವ್ಯಕ್ತಿ ಧಾರ್ಮಿಕ ಪದ್ದತಿ ಪ್ರಕಾರ ವಿವಾಹವಾಗದೆ ಕಾನೂನುಬದ್ಧವಾಗಿ ದೂರುದಾರಳನ್ನು ಮದುವೆಯಾಗಿದ್ದಾನೆ ಎಂಬುದನ್ನು ತಿಳಿದ ಬಾಂಬೆ ಹೈಕೋರ್ಟ್ ಆರೋಪಿಯ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದೆ.
ಇಬ್ಬರೂ ಪಕ್ಷಕಾರರು ಅರಿತು ಕಾನೂನುಬದ್ಧವಾಗಿ ವಿವಾಹವಾಗಿರುವುದನ್ನು ಗಮನಿಸಿದರೆ ಧಾರ್ಮಿಕ ಪದ್ದತಿ ಪ್ರಕಾರ ಮದುವೆಯಾಗುವುದಾಗಿ ಭರವಸೆ ನೀಡಿರುವುದು ಪತಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು ಎನ್ನುವ ಪತ್ನಿಯ ವಾದವನ್ನು ಪುರಸ್ಕರಿಸಲಾಗದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ನಿವೇದಿತಾ ಮೆಹ್ತಾ ಅವರಿದ್ದ ಪೀಠ ತಿಳಿಸಿತು.
ದೂರುದಾರೆಯನ್ನು 26 ವರ್ಷದ ವ್ಯಕ್ತಿಯೊಬ್ಬ ಧಾರ್ಮಿಕ ಪದ್ದತಿ ಬದಲಿಗೆ ಸಿವಿಲ್ ಕಾನೂನಿಂತೆ ವಿವಾಹವಾಗಿದ್ದರು. ಆದರೆ, ಮದುವೆಯ ನಂತರ ತಮ್ಮ ಪತ್ನಿಯ ವಿವಾಹೇತರ ಸಂಬಂಧಗಳನ್ನು ಅರಿತ ಪತಿ ವಿವಾಹ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಪತ್ನಿ, ಧಾರ್ಮಿಕವಾಗಿ ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ದೂರಿದ್ದರು.
ತಾನು ವಿವಾಹ ರದ್ದುಗೊಳಿಸಲು ಮುಂದಾಗಿದ್ದರಿಂದ ಪ್ರತೀಕಾರದ ಕ್ರಮವಾಗಿ ಪತ್ನಿ ಈ ಆರೋಪ ಮಾಡುತ್ತಿದ್ದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ ಕೃತ್ಯಗಳು ಅತ್ಯಾಚಾರ ಅಥವಾ ವಂಚನೆಯ ಅಪರಾಧಗಳಾಗಿಲ್ಲ ಎಂದು ಪತಿ ವಾದಿಸಿದ್ದರು.
ಪತಿಯ ಪರ ತೀರ್ಪು ನೀಡಿದ ನ್ಯಾಯಾಲಯ, ಆಕೆಯನ್ನು ಈಗಾಗಲೇ ಆತ ವಿವಾಹವಾಗಿರುವುದರಿಂದ ಮದುವೆಯಾಗುವ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪವನ್ನು ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿತು.
ಈಗಾಗಲೇ ಅವರಿಬ್ಬರ ವಿವಾಹ ಕಾನೂನುಬದ್ಧವಾಗಿ ನೋಂದಾಯಿತವಾಗಿರುವುದರಿಂದ ಧಾರ್ಮಿಕ ಪದ್ದತಿಗಳ ಪ್ರಕಾರ ಮದುವೆಯಾಗುವುದಾಗಿ ಪತಿ ನೀಡಿದ್ದ ಭರವಸೆಯನ್ನು ಸುಳ್ಳು ಭರವಸೆ ಎಂದು ಅರ್ಥೈಸಲು ಸಾಧ್ಯವಿಲ್ಲ ಎಂದು ಪೀಠ ನುಡಿಯಿತು.
ಅರ್ಜಿದಾರರು ಪತ್ನಿಯ ವಿವಾಹೇತರ ಸಂಬಂಧಗಳ ಬಗ್ಗೆ ತಿಳಿದ ನಂತರ ಧಾರ್ಮಿಕ ಪದ್ಧತಿಗಳ ಪ್ರಕಾರ ಅವರ ವಿವಾಹವಾಗಲು ನಿರಾಕರಿಸಿದ್ದರಿಂದ, ಹೆಚ್ಚೆಂದರೆ ಅವರ ಕ್ರಮಗಳನ್ನು ಧಾರ್ಮಿಕವಾಗಿ ವಿವಾಹದ ಭರವಸೆಯ ಉಲ್ಲಂಘನೆಯಾಗಿಯಷ್ಟೇ ಕಾಣಬಹುದು ಎಂದು ಅದು ಹೇಳಿದೆ.
ಆರೋಪಿ ಮತ್ತು ದೂರುದಾರರು ಲೈಂಗಿಕ ಸಂಭೋಗದ ಸಮಯದಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿರುವುದರಿಂದ ಈ ಆರೋಪಗಳು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅತ್ಯಾಚಾರ ಅಥವಾ ವಂಚನೆಗೆ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ, ನ್ಯಾಯಾಲಯ ಎಫ್ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸಿತು.