ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |01-07-2021

> ಅಖಿಲ್‌ ಗೊಗೊಯ್‌ ವಿರುದ್ಧದ ದೇಶದ್ರೋಹ, ಯುಎಪಿಎ ಪ್ರಕರಣಗಳನ್ನು ಕೈಬಿಟ್ಟ ಎನ್‌ಐಎ ನ್ಯಾಯಾಲಯ > ಬೀದಿ ನಾಯಿಗಳಿಗೆ ಆಹಾರದ ಹಕ್ಕಿದೆ: ದೆಹಲಿ ನ್ಯಾಯಾಲಯ > ನೂತನ ನ್ಯಾಯಾಧಿಕರಣ ನಿಯಮಗಳ ಅಧಿಸೂಚನೆ: ಅನುಭವಿ ವಕೀಲರಿಗೆ ನೇಮಕಾತಿಯಲ್ಲಿ ಅವಕಾಶ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |01-07-2021
Published on

ಅಖಿಲ್‌ ಗೊಗೊಯ್‌ ವಿರುದ್ಧ ದೇಶದ್ರೋಹ, ಯುಎಪಿಎ ಪ್ರಕರಣಗಳನ್ನು ಕೈಬಿಟ್ಟ ಎನ್‌ಐಎ ನ್ಯಾಯಾಲಯ

ಅಸ್ಸಾಂನ ಸಿಬ್‌ಸಾಗರ್ ಕ್ಷೇತ್ರದ ಯುವ ಶಾಸಕ ಅಖಿಲ್‌ ಗೊಗೊಯ್‌ ವಿರುದ್ಧ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಗಳ ವೇಳೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ), ದೇಶದ್ರೋಹ ಕಾಯಿದೆಗಳಡಿ ದಾಖಲಿಸಿದ್ದ ಪ್ರಕರಣಗಳನ್ನು ವಿಶೇಷ ಎನ್‌ಐಎ ನ್ಯಾಯಾಲಯ ಕೈಬಿಟ್ಟಿದೆ. ಗೊಗೊಯ್‌ ವಿರುದ್ಧ ಚಂಡಮಾರಿ ಪ್ರಕರಣದಲ್ಲಿ ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪವನ್ನು ಸಹ ಹೊರಿಸಲಾಗಿತ್ತು. ಇದೀಗ ಎಲ್ಲ ಆರೋಪಗಳಿಂದ ಎನ್‌ಐಎ ನ್ಯಾಯಾಲಯವು ಅವರನ್ನು ಮುಕ್ತಗೊಳಿಸಿದೆ.

Akhil Gogoi and UAPA
Akhil Gogoi and UAPA

ಗೊಗೊಯ್‌ ಅವರನ್ನು ಆರೋಪಮುಕ್ತಗೊಳಿಸಿ ಆದೇಶವನ್ನು ಪ್ರಕಟಿಸಿದ ಗೌಹಾಟಿ ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಪ್ರಂಜಲ್‌ ದಾಸ್‌, ಗೊಗೊಯ್‌ ಅವರು ನೀಡಿದ್ದ ಭಾಷಣದಲ್ಲಿ ಹಿಂಸೆಗೆ ಪ್ರಚೋದಿಸುವ ಯಾವುದೇ ಅಂಶಗಳಿಲ್ಲ ಎಂದರು. “ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅವರ (ಗೊಗೊಯ್) ಭಾಷಣಗಳ ಲಿಪ್ಯಂತರದಲ್ಲಿ ಹಿಂಸೆಗೆ ಪ್ರಚೋದಿಸುವುದಕ್ಕೆ ಬದಲಾಗಿ, ಆರೋಪಿಯು ಜನರನ್ನು ಹಿಂಸೆಯಲ್ಲಿ ತೊಡಗದಂತೆ ಗಂಭೀರವಾಗಿ ಒತ್ತಾಯಿಸುತ್ತಿರುವುದು ಕಂಡುಬರುತ್ತದೆ,” ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಬೀದಿ ನಾಯಿಗಳಿಗೆ ಆಹಾರದ ಹಕ್ಕಿದೆ; ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳಿಗೆ ಇವುಗಳೆಡೆಗೆ ಕರ್ತವ್ಯವಿದೆ: ದೆಹಲಿ ನ್ಯಾಯಾಲಯ

ಬೀದಿನಾಯಿಗಳ ಆರೈಕೆ ಮಾಡುವವರು ಹಾಗೂ ಆಹಾರ ಒದಗಿಸುವವರ ಅನುಪಸ್ಥಿತಿ ಇರುವೆಡೆ ಅವುಗಳಿಗೆ ಆಹಾರ ಮತ್ತು ನೀರು ಒದಗಿಸುವ ಕರ್ತವ್ಯ ಹಾಗೂ ಹೊಣೆಗಾರಿಕೆ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಮುನಿಸಿಪಲ್‌ ಕಾರ್ಪೊರೇಷನ್‌ ಮೇಲಿರಲಿದೆ ಎಂದು ದೆಹಲಿ ನ್ಯಾಯಾಲಯ ಆದೇಶಿಸಿದೆ (ಡಾ. ಮಾಯಾ ಡಿ ಛಬ್ಲಾನಿ ವರ್ಸಸ್‌ ರಾಧಾ ಮಿತ್ತಲ್‌).

Stray dog
Stray dog

ಪ್ರಕರಣದ ಸಂಬಂಧ ಆದೇಶ ನೀಡಿದ ನ್ಯಾ. ಜೆ ಆರ್ ಮಿಧಾ ಅವರಿದ್ದ ಏಕಸದಸ್ಯ ಪೀಠವು, ಬೀದಿ ನಾಯಿಗಳಿಗೆ ಆಹಾರದ ಹಕ್ಕಿದೆ ಹಾಗೂ ಬೀದಿ ನಾಯಿಗಳಿಗೆ ಆಹಾರವನ್ನು ಹಾಕುವ ಹಕ್ಕು ನಾಗರಿಕರಿಗಿದೆ ಎಂದೂ ಹೇಳಿತು. “ಮತ್ತೊಬ್ಬರಿಗೆ ತೊಂದರೆ, ಉಪಟಳ ಆಗದ ಪಕ್ಷದಲ್ಲಿ ಯಾವುದೇ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯನ್ನು ಬೀದಿ ನಾಯಿಗಳಿಗೆ ಆಹಾರ ಪೂರೈಸುವುದರಿಂದ ತಡೆಯುವಂತಿಲ್ಲ,” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ನೂತನ ನ್ಯಾಯಾಧಿಕರಣ ನಿಯಮಗಳ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ: ಅನುಭವಿ ವಕೀಲರಿಗೆ ನೇಮಕಾತಿಯಲ್ಲಿ ಅವಕಾಶ

ನ್ಯಾಯಾಧಿಕರಣಗಳು, ಮೇಲ್ಮನವಿ ನ್ಯಾಯಾಧಿಕರಣಗಳು ಮತ್ತು ಇತರೆ ಪ್ರಾಧಿಕಾರಗಳ (ಸದಸ್ಯರ ಅರ್ಹತೆ, ಅನುಭವ ಮತ್ತು ಇತರೆ ಮಾನದಂಡಗಳು) ನಿಯಮಾವಳಿಗಳು, 2021 ಅನ್ನು ಕೇಂದ್ರ ಸರ್ಕಾರದ ಆರ್ಥಿಕ ಸಚಿವಾಲಯವು ಜೂ.30ರಂದು ಅಧಿಸೂಚನೆ ಹೊರಡಿಸಿದೆ. ಹೊಸ ನಿಯಮಾವಳಿಗಳಡಿ ಅನುಭವಿ ವಕೀಲರು ನ್ಯಾಯಿಕ ಸದಸ್ಯರಾಗಿ ಸೇವೆ ಸಲ್ಲಿಸಬಹುದಾಗಿದೆ.

Ministry of Finance
Ministry of Finance

ನ್ಯಾಯಾಧಿಕರಣಗಳ ಅಧ್ಯಕ್ಷರು, ಮುಖ್ಯಸ್ಥರು ಮತ್ತು ಸದಸ್ಯರ ಅರ್ಹತೆಯ ಕುರಿತಾದ ಮಾನದಂಡಗಳನ್ನು ಸಹ ತಿದ್ದುಪಡಿ ಮಾಡಲಾಗಿದ್ದು ಭಾರತೀಯ ಕಾನೂನು ಸೇವೆಯಲ್ಲಿ ಮೊಕದ್ದಮೆಗಳಡಿ ಹತ್ತು ವರ್ಷಗಳ ಸೇವೆಯ ಅನುಭವ ಹೊಂದಿರುವವರು ಮಾತ್ರವೇ ನ್ಯಾಯಿಕ ಸದಸ್ಯರಾಗಬಹುದು ಎಂದು ತಿಳಿಸಲಾಗಿದೆ.

Kannada Bar & Bench
kannada.barandbench.com