ಯಶ್ರಾಮ್ ಲೈಫ್‌ಸ್ಟೈಲ್ ಪೇಟೆಂಟ್ ಪಡೆದ ಸ್ಯಾನಿಟರಿ ಒಳಉಡುಪುಗಳನ್ನು ಆದಿತ್ಯ ಬಿರ್ಲಾ ಫ್ಯಾಷನ್, ತಯಾರಿಕೆ ಅಥವಾ ಮಾರಾಟ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸಂಪೂರ್ಣ ಏಕ ಪಕ್ಷೀಯ ತಾತ್ಕಾಲಿಕ ನಿರ್ಬಂಧಕಾಜ್ಞೆಯನ್ನು ನೀಡಿದೆ. ಆ ಮೂಲಕ ತಾನು ಈ ಹಿಂದೆ ನೀಡಿದ್ದ ಮಧ್ಯಂತರ ತಾತ್ಕಾಲಿಕ ನಿರ್ಬಂಧಕಾಜ್ಞೆಯನ್ನು ಪೂರ್ಣ ತಾತ್ಕಾಲಿಕ ನಿರ್ಬಂಧಕಾಜ್ಞೆಯನ್ನಾಗಿಸಿದೆ. 'ಕಾಟನ್ ಸೆನ್ಸೇಶನ್ ಸ್ಟೇ ಡ್ರೈ ಪೀರಿಯಡ್ ಪ್ಯಾಂಟಿ' ಮತ್ತು 'ಪೀರಿಯಡ್ ಪ್ಯಾಂಟಿ' ಎಂಬ ಹೆಸರಿನಲ್ಲಿ ತಾನು ಪಡೆದಿರುವ ಸ್ಯಾನಿಟರಿ ಒಳ ಉಡುಪುಗಳ ಪೇಟೆಂಟ್ ಆದಿತ್ಯ ಬಿರ್ಲಾ ಫ್ಯಾಷನ್‌ನಿಂದ ಉಲ್ಲಂಘನೆಯಾಗುತ್ತಿದೆ ಎಂದು ಯಶ್ರಾಮ್ ನ್ಯಾಯಾಲಯದ ಮೆಟ್ಟಿಲೇರಿತ್ತು.
ಮೇಲ್ನೋಟಕ್ಕೆ ಪ್ರಕರಣ ಫಿರ್ಯಾದಿಗಳಾದ ಯಶ್ರಾಮ್ ಪರವಾಗಿದೆ ಎಂದ ನ್ಯಾ. ಎಚ್ ಪಿ ಸಂದೇಶ್ ಉಲ್ಲಂಘನೆ ತಡೆಗಟ್ಟದಿದ್ದರೆ ಫಿರ್ಯಾದಿದಾರರಿಗೆ ಕಷ್ಟ ಉಂಟಾಗುತ್ತದೆ. ಏಕೆಂದರೆ ಉತ್ಪನ್ನವನ್ನು ಫಿರ್ಯಾದಿದಾರರು ಅನ್ವೇಷಿಸಿದ್ದು ಭಾರಿ ಬಂಡವಾಳ ಹೂಡಿ ಅದನ್ನು ಮಾರುಕಟ್ಟೆಗೆ ತಂದಿದ್ದಾರೆ. ಫಿರ್ಯಾದುದಾರರು ಇಂಥದ್ದೇ ಬಗೆಯ ಇನ್ನೊಂದು ಪೀರಿಯಡ್ ಪ್ಯಾಂಟಿ ಮಾರಾಟ ಮಾಡುವಂತೆ ಪ್ರತಿವಾದಿಗೆ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂಬುದಾಗಿ ತಿಳಿಸಿದರು.
ʼಕ್ರೈಮ್ ಸ್ಟೋರೀಸ್: ಇಂಡಿಯಾ ಡಿಟೆಕ್ಟೀವ್ಸ್ʼ ವೆಬ್ ಸರಣಿಯ ಮೊದಲ ಕಂತನ್ನು ಪ್ರಸಾರ ಮಾಡದಂತೆ ಕರ್ನಾಟಕ ಹೈಕೋರ್ಟ್ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗೆ ಸೂಚಿಸಿದೆ. ಅರ್ಜಿದಾರರಿಗೆ ಕಿರುಕುಳ ನೀಡುವುದಲ್ಲದೆ ಪೂರ್ವಾಗ್ರಹ ಉಂಟು ಮಾಡುವುದರಿಂದ ವೆಬ್ ಸರಣಿಯ ಮುಂಚೂಣಿ ಕಂತು ಎ ಮರ್ಡರ್ಡ್ ಮದರ್ ಪ್ರಸಾರ ಮಾಡಬಾರದು ಎಂದು ನ್ಯಾ. ಬಿ ಎಂ ಶ್ಯಾಮಪ್ರಸಾದ್ ಆದೇಶಿಸಿದ್ದಾರೆ.
ನಿರ್ಮಲಾ ಚಂದ್ರಶೇಖರ್ ಹತ್ಯೆಯ ಆರೋಪಿಗಳಲ್ಲೊಬ್ಬರಾದ ಬೆಂಗಳೂರಿನ 28 ವರ್ಷದ ಶ್ರೀಧರ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮಹಿಳೆಯ ಪುತ್ರಿ ಅಮೃತಾ ಚಂದ್ರಶೇಖರ್ ಪ್ರಕರಣದ ಇನ್ನೊಬ್ಬ ಆರೋಪಿ. ತನ್ನ ತಾಯಿಯನ್ನು ಕೊಂದು ಮತ್ತು ಸಹೋದರನನ್ನು ಕೊಲ್ಲಲು ಯತ್ನಿಸಿದ ಅಮೃತ ಅರ್ಜಿದಾರನೊಂದಿಗೆ ಅಂಡಮಾನ್ ಮತ್ತು ನಿಕೋಬಾರ್‌ಗೆ ಓಡಿಹೋದಳು ಎಂದು ಆರೋಪಿಸಲಾಗಿತ್ತು. ಈ ಘಟನೆಯೇ ವೆಬ್‌ಸರಣಿಯ ಮೊದಲ ಕಂತಾಗಿ ಮೂಡಿಬಂದಿತ್ತು.