ಥಲಸ್ಸೀಮಿಯಾ ರೋಗಿಗಳಿಗೆ ಕಿಲೇಷನ್ ಔಷಧ, ಸೂಕ್ತವಾದ ರಕ್ತ ಪೂರೈಕೆ ಮತ್ತು ಕೋವಿಡ್ ಲಸಿಕೆಯನ್ನು ತುರ್ತಾಗಿ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಥಲಸ್ಸೀಮಿಯಾ ಮತ್ತು ಸಿಕಲ್ ಸೆಲ್ ಸೊಸೈಟಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠವು ಈ ಕುರಿತು ಆದೇಶ ಮಾಡಿದೆ. ಥಲಸ್ಸೀಮಿಯಾ ರಕ್ತಕ್ಕೆ ಸಂಬಂಧಿಸಿದ ರೋಗವಾಗಿದೆ. ಅಂಗವೈಕಲ್ಯ ಕಾಯಿದೆ ಹಕ್ಕು 2016ರ ವ್ಯಾಪ್ತಿಯಲ್ಲಿ ರೋಗಿಗೆ ಸೌಲಭ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಥಲಸ್ಸೀಮಿಯಾ ಚಿಕಿತ್ಸೆಗೆ ಬಳಸಲಾಗುತ್ತಿದ್ದ ಕಿಲೇಷನ್ ಔಷಧವನ್ನು ಸರ್ಕಾರ ಪೂರೈಸುತ್ತಿತ್ತು. ಆದರೆ, ಇದ್ದಕ್ಕಿದ್ದಂತೆ ಔಷಧ ಪೂರೈಕೆ ಬಂದ್ ಮಾಡಿರುವ ಸರ್ಕಾರವು ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಔಷಧ ಪೂರೈಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಪದೇಪದೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಖಿಲ ಭಾರತ ಅಖಾಡ ಪರಿಷತ್‌ನ ಅಧ್ಯಕ್ಷರಾದ ಮಹಾಂತ ನರೇಂದ್ರ ಗಿರಿಯವರು ಪ್ರಯಾಗ್‌ರಾಜ್‌ನ ಬಾಗಾಂಬರಿ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಿಗೇ ಅವರ ಅನುಮಾನಾಸ್ಪದ ಸಾವಿನ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಯಿಂದ ನಡೆಸುವಂತೆ ಕೋರಿ ಮನವಿ ಪತ್ರವೊಂದನ್ನು ಅಲಾಹಾಬಾದ್ ಹೈಕೋರ್ಟ್‌ಗೆ ಬರೆಯಲಾಗಿದೆ.
ಮಹಾಂತ ಗಿರಿ ಅವರ ಸಾವಿನ ಕುರಿತಾದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ವಿಶೇಷ ತನಿಖಾ ಪಡೆಯ (ಎಸ್ಐಟಿ) ಮೂಲಕ ನಡೆಸಬೇಕು ಎಂದು ಕೋರಿ ಸುನಿಲ್ ಕುಮಾರ್ ಎಂಬುವರು ಹೈಕೋರ್ಟ್‌ಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಪತ್ರದಲ್ಲಿ ಪ್ರಯಾಗ್ ರಾಜ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಪತ್ರವನ್ನು ಅಧರಿಸಿ ಪ್ರಕರಣದ ಸಂಬಂಧ ನ್ಯಾಯಾಲಯವು ಸ್ವಯಂ ಪ್ರೇರಣಾ ಅರ್ಜಿಯನ್ನು ದಾಖಲಿಸಿಕೊಳ್ಳಬೇಕು ಎಂದು ಕೋರಲಾಗಿದೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಮಹಿಳೆಯರಿಗೆ ಪ್ರವಶಾತಿ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುವು ಮಾಡುವ ಅಧಿಸೂಚನೆಯನ್ನು 2022ರ ಮೇ ತಿಂಗಳಿನಲ್ಲಿ ಹೊರಡಿಸುವುದಾಗಿ ಕೇಂದ್ರ ರಕ್ಷಣಾ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಎನ್‌ಡಿಎಯಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಲು ಕೋರಿದ್ದ ಕುಶ್ ಕಲ್ರಾ ವರ್ಸಸ್ ಭಾರತ ಸರ್ಕಾರದ ಅರ್ಜಿ ವಿಚಾರಣೆ ವೇಳೆ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಿದೆ.
ಎನ್‌ಡಿಎಯಲ್ಲಿ ಮಹಿಳಾ ಕೆಡೆಟ್‌ಗಳಿಗೆ ತ್ವರಿತಗತಿಯಲ್ಲಿ ಪಠ್ಯಕ್ರಮ ರೂಪಿಸಲು ತಜ್ಞರನ್ನು ಒಳಗೊಂಡ ರಕ್ಷಣಾ ಸೇವೆಗಳ ಅಧ್ಯಯನ ಗುಂಪನ್ನು ರಚಿಸಲಾಗಿದೆ. ಎನ್‌ಡಿಎಯಲ್ಲಿ ಮಹಿಳಾ ಕೆಡೆಟ್‌ಗಳ ತರಬೇತಿಗಾಗಿ ಭವಿಷ್ಯದ ಯೋಜನೆಯನ್ನು ರೂಪಿಸಲು ಅಧಿಕಾರಿ ಮಂಡಳಿ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಬಿಜೆಪಿ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಕಿರೀಟ್ ಸೋಮಯ್ಯ ವಿರುದ್ಧ ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪಾರಬ್ ಅವರು ₹100 ಕೋಟಿ ಮಾನಹಾನಿ ದಾವೆ ಹೂಡಿದ್ದಾರೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ನಡೆದಿರುವ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸೋಮಯ್ಯ ಅವರು ಜೂನ್‌ನಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಆರೋಪವನ್ನು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಮಾಡಿದ್ದಾರೆ.
ಟ್ವೀಟ್‌ನ ಉದ್ದೇಶವು ಪಾರಬ್ ಅವರು ಕಾನೂನುಬಾಹಿರ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ ಎಂಬುದಾಗಿದೆ. ಆದರೆ, ಪಾರಬ್ ಅವರು ಸೋಮಯ್ಯ ಅವರು ಆರೋಪಿಸಿರುವಂತೆ ನಿರ್ಮಾಣ ಕಾಮಗಾರಿಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.