ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-09-2021

>> ದೇವರ ದಯೆ, ಕೇಂದ್ರ ಸರ್ಕಾರಕ್ಕೆ ಕಠಿಣ ಪ್ರಶ್ನೆ ಕೇಳುವ ಸಿಜೆಐ ಈಗ ಇದ್ದಾರೆ: ಸಂಸದೆ ಮೊಹುವಾ ಮೊಯಿತ್ರಾ >> ಐಐಟಿ ಆವರಣದಲ್ಲಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದ ಮದ್ರಾಸ್ ಹೈಕೋರ್ಟ್
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-09-2021

ದೇವರ ದಯೆ, ಕೇಂದ್ರ ಸರ್ಕಾರಕ್ಕೆ ಕಠಿಣ ಪ್ರಶ್ನೆ ಕೇಳುವ ಸಿಜೆಐ ಈಗ ಇದ್ದಾರೆ: ಸಂಸದೆ ಮೊಹುವಾ ಮೊಯಿತ್ರಾ

“ಲಜ್ಜೆಗೇಡಿತನ ಇಂದು ಸಾಮಾನ್ಯವಾಗಿಬಿಟ್ಟಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳಿಗೆ ತಲೆಕೆಡಿಸಿಕೊಳ್ಳದಷ್ಟು ನಮ್ಮ ನಾಯಕರು ಸಂವೇದನಾಶೂನ್ಯರಾಗಿದ್ದಾರೆ. ಅಧಿಕಾರಗಳ ಪ್ರತ್ಯೇಕೀಕರಣದ ಪ್ರಾಮುಖ್ಯತೆಯನ್ನು ಅರ್ಥೈಸಿಕೊಂಡಿರುವ, ಕೇಂದ್ರ ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳುವ ಮುಖ್ಯ ನ್ಯಾಯಮೂರ್ತಿಯನ್ನು ನಾವು ಹೊಂದಿರುವುದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು” ಎಂದು ತೃಣಮೂಲ ಕಾಂಗ್ರೆಸ್‌ ಲೋಕಸಭಾ ಸದಸ್ಯೆ ಮೊಹುವಾ ಮೊಯಿತ್ರಾ ಮಾರ್ಮಿಕವಾಗಿ ನುಡಿದಿದ್ದಾರೆ.

TMC MP, Mahua Moitra
TMC MP, Mahua Moitra

ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ ಅವರು ಸಿಜೆಐ ಎನ್‌ ವಿ ರಮಣ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. “ಪೆಗಸಸ್‌ ಹಗರಣವು ಅನಿಯಂತ್ರಿತ ಅಧಿಕಾರ ವಿನಾಶಕ್ಕೆ ನಾಂದಿ ಎಂಬುದನ್ನು ನೆನಪಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸಂಸತ್‌ ಮತ್ತು ನ್ಯಾಯಾಲಯದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದರೂ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ಹೊಣೆಗಾರಿಕೆಯನ್ನು ನಿರಾಕರಿಸುತ್ತಿದೆ” ಎಂದು ಹೇಳಿದರು. ಪೆಗಸಸ್‌ ಪ್ರಕರಣದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ರಾಜ್ಯಸಭೆಗೆ ಬಿಜೆಪಿಯಿಂದ ನಾಮನಿರ್ದೇಶನಗೊಂಡಿದ್ದರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ತಮ್ಮನ್ನು ಆಹ್ವಾನಿಸಿದ್ದಕ್ಕೆ ಮೊಯಿತ್ರಾ ಅವರು ರಾಮ್‌ ಜೇಠ್ಮಲಾನಿ ಅವರ ಪುತ್ರ, ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಅವರಿಗೆ ಧನ್ಯವಾದ ಅರ್ಪಿಸಿದರು.

ಐಐಟಿ ಆವರಣದಲ್ಲಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ಮದ್ರಾಸ್ ಹೈಕೋರ್ಟ್

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆವರಣದಲ್ಲಿ ಬೀದಿ ಬದಿಯ ನಾಯಿಗಳು ಮತ್ತು ಮಾಲೀಕರು ಬಿಟ್ಟು ಹೋದ ನಾಯಿಗಳ ಸಂಖ್ಯೆಯನ್ನು ಸುಮಾರು ಐವತ್ತಕ್ಕೆ ಇಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ. ಸಂಸ್ಥೆಯ ಆವರಣ ನಾಯಿ ಉದ್ಯಾನ ಅಥವಾ ಮೃಗಾಲಯವಲ್ಲ, ಐಐಟಿ ದ್ವಾರದಲ್ಲಿ ನಾಯಿಗಳು ಸೇರಿದಂತೆ ಮಾಲೀಕರು ತೊರೆದ ಹೋದ ಸಾಕು ಪ್ರಾಣಿಗಳನ್ನು ಕಾಪಾಡಲು ತನ್ನ ಶಕ್ತಿ ಅಥವಾ ಸಂಪನ್ಮೂಲ ವಿನಿಯೋಗಿಸುವುದು ಐಐಟಿಯ ಪ್ರಧಾನ ಕೆಲಸವಲ್ಲ ಎಂದು ನ್ಯಾಯಾಲಯ ಹೇಳಿದೆ.

Stray dog
Stray dog Representative image

ಕೋವಿಡ್‌ ಹಿನ್ನೆಲೆಯಲ್ಲಿ ಚೆನ್ನೈ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳ ಒಳಿತಿಗೆ ಕಳಕಳಿ ವ್ಯಕ್ತಪಡಿಸಿ ಪೀಪಲ್‌ ಫಾರ್‌ ಕ್ಯಾಟಲ್‌ ಇನ್‌ ಇಂಡಿಯಾ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ ಆದಿಕೇಶವುಲು ಅವರಿದ್ದ ಪೀಠ ನಡೆಸಿತು. ಕ್ಯಾಂಪಸ್‌ನಲ್ಲಿ ನೂರಕ್ಕಿಂತ ಹೆಚ್ಚು ನಾಯಿಗಳು ಇರುವುದನ್ನು ತಿಳಿಸಿದ ನ್ಯಾಯಾಲಯ ಅಲ್ಲಿ ಜಿಂಕೆ ಕೃಷ್ಣಮೃಗಗಳಂತಹ ಪ್ರಾಣಿಗಳೂ ಇದ್ದು ನಾಯಿಗಳ ಸಂಖ್ಯೆಯನ್ನು 50ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಸಬೇಕು ಎಂದು ಪೀಠ ತಿಳಿಸಿದೆ. ಅರ್ಜಿದಾರ ಸಂಸ್ಥೆ, ರಾಜ್ಯ ಅಧಿಕಾರಿಗಳು ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಒಗ್ಗೂಡಿ ಐಐಟಿ ಆವರಣವನ್ನು ನಾಯಿಗಳ ಹಾವಳಿಯಿಂದ ತಪ್ಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಬೇಕು ಎಂದು ನ್ಯಾಯಾಲಯ ಸೂಚಿಸಿದ್ದು ರೋಗಗ್ರಸ್ತ ನಾಯಿಗಳ ಆರೈಕೆ ಸಂಬಂಧ ವಿವಿಧ ನಿರ್ದೇಶನಗಳನ್ನು ನೀಡಿದೆ. ಪ್ರಕರಣವನ್ನು ನವೆಂಬರ್‌ 19ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com