ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-11-2021

>> ಸಿಬಿಐ, ಇ ಡಿ ನಿರ್ದೇಶಕರ ಅಧಿಕಾರಾವಧಿ ವಿಸ್ತರಿಸಿ ಸುಗ್ರೀವಾಜ್ಞೆ >> ನ್ಯಾಯಮೂರ್ತಿಗಳು ಸರಳ ಭಾಷೆಯಲ್ಲಿ ತೀರ್ಪು ಬರೆಯಲು ಸಿಜೆಐ ಸಲಹೆ >> ʼಮಧ್ಯಸ್ಥಿಕೆ ವೇಳೆ ಪಕ್ಷಕಾರರು ಏಕಪಕ್ಷೀಯವಾಗಿ ಮಧ್ಯಸ್ಥಿಕೆದಾರರನ್ನು ನೇಮಿಸಿಕೊಳ್ಳುವಂತಿಲ್ಲʼ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-11-2021

ಸಿಬಿಐ, ಇ ಡಿ ನಿರ್ದೇಶಕರ ಅಧಿಕಾರಾವಧಿ 5 ವರ್ಷಗಳವರೆಗೆ ವಿಸ್ತರಿಸಿ ಸುಗ್ರೀವಾಜ್ಞೆ ಹೊರಡಿಸಿದ ರಾಷ್ಟ್ರಪತಿ

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರ ಅಧಿಕಾರಾವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಗರಿಷ್ಠ ಐದು ವರ್ಷಗಳವರೆಗೆ ಅನ್ವಯವಾಗುವಂತೆ ವರ್ಷಕ್ಕೆ ಒಂದು ಬಾರಿಗೆ ಅಧಿಕಾರಾವಧಿ ವಿಸ್ತರಣೆ ಮಾಡಬಹುದಾಗಿದೆ.

CBI, ED
CBI, ED

ಕಾಮನ್‌ ಕಾಸ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಕುಮಾರ್ ಮಿಶ್ರಾ ಅವರ ನೇಮಕಾತಿ ಆದೇಶದಲ್ಲಿ ಪೂರ್ವಾನ್ವಯವಾಗುವಂತೆ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಕೇಂದ್ರ ಸರ್ಕಾರಕ್ಕೆ ಪೂರ್ವಾನ್ವಯವಾಗುವಂತೆ ಬದಲಾವಣೆಗಳನ್ನು ಮಾಡುವ ಅಧಿಕಾರವಿದೆ. ಆದರೆ ಅದನ್ನು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿತ್ತು. ಇದೇ ತಿಂಗಳು ಮುಕ್ತಾಯಗೊಳ್ಳಲಿರುವ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲ ಎಂದು ಕೂಡ ನ್ಯಾಯಾಲಯ ಹೇಳಿತ್ತು. ಅದರ ಬೆನ್ನಿಗೇ ಸುಗ್ರೀವಾಜ್ಞೆ ಹೊರಬಿದ್ದಿದೆ.

ನ್ಯಾಯಮೂರ್ತಿಗಳು ಸರಳ ಭಾಷೆಯಲ್ಲಿ ತೀರ್ಪು ಬರೆಯಬೇಕು: ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ

ಹೆಚ್ಚು ಪರಿಣಾಮ ಬೀರಬೇಕಿದ್ದು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಿರುವುದರಿಂದ ನ್ಯಾಯಾಧೀಶರು ತೀರ್ಪು ಬರೆಯುವಾಗ ಸರಳ ಭಾಷೆಯನ್ನು ಬಳಸಬೇಕು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಭಾನುವಾರ ತಿಳಿಸಿದ್ದಾರೆ. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ನಾಲ್ಸಾ) ಆಯೋಜಿಸಿದ್ದ ರಾಷ್ಟ್ರವ್ಯಾಪಿ ಕಾನೂನು ಅರಿವು ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

CJI NV Ramana
CJI NV Ramana

ಸಾಂವಿಧಾನಿಕ ನ್ಯಾಯಾಲಯಗಳಾದ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ಗಳು ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೂಡ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಕೂಡ ಉಪಸ್ಥಿತರಿದ್ದರು.

ಮಧ್ಯಸ್ಥಿಕೆ ವೇಳೆ ಪಕ್ಷಕಾರರು ಏಕಪಕ್ಷೀಯವಾಗಿ ಮಧ್ಯಸ್ಥಿಕೆದಾರರನ್ನು ನೇಮಿಸಿಕೊಳ್ಳುವಂತಿಲ್ಲ: ದೆಹಲಿ ಹೈಕೋರ್ಟ್‌

ನಿಷ್ಪಕ್ಷಪಾತ ತೀರ್ಪಿನ ಉದ್ದೇಶಕ್ಕೆ ಹಿನ್ನಡೆ ಉಂಟಾಗುವುದರಿಂದ ಮಧ್ಯಸ್ಥಿಕೆ ಸಂದರ್ಭದಲ್ಲಿ ಯಾವುದೇ ಪಕ್ಷಕಾರರು ಏಕಪಕ್ಷೀಯವಾಗಿ ಮಧ್ಯಸ್ಥಿಕೆದಾರರನ್ನು ನೇಮಿಸಿಕೊಳ್ಳುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. (ಶಿವಾನ್ಷ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಪ್ರೈ. ಲಿಮಿಟೆಡ್ ಮತ್ತು ಸೇನಾ ಕಲ್ಯಾಣ ಗೃಹ ಸಂಘಟನೆ ನಡುವಣ ಪ್ರಕರಣ).

Arbitration and Conciliation
Arbitration and Conciliation

ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ 1996ರ ಅಡಿಯಲ್ಲಿ ಏಕಮಾತ್ರ ಮಧ್ಯಸ್ಥಗಾರರನ್ನು ನೇಮಿಸುವಂತೆ ಕೋರಿ ನಿರ್ಮಾಣ ಕಂಪನಿ ಸಲ್ಲಿಸಿದ ಮಧ್ಯಸ್ಥಿಕೆ ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿತು. ಇದೇ ವೇಳೆ ಕಕ್ಷಿದಾರರ ನಡುವಿನ ವಿವಾದವನ್ನು ನಿರ್ಣಯಿಸಲು ನಿವೃತ್ತ ನ್ಯಾಯಮೂರ್ತಿ ಬಿ ಡಿ ಅಹ್ಮದ್ ಅವರನ್ನು ಏಕ ಮಧ್ಯಸ್ಥಗಾರರನ್ನಾಗಿ ನ್ಯಾಯಾಲಯ ನೇಮಿಸಿತು.

Related Stories

No stories found.
Kannada Bar & Bench
kannada.barandbench.com