ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |30-3-2021

>> ʼಕೇರಳದ ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿಯೇ ಮೂರು ರಾಜ್ಯಸಭಾ ಸ್ಥಾನಗಳಿಗೂ ಚುನಾವಣೆʼ >> ದೇಶಮುಖ್‌ ವಿರುದ್ಧದ ಪರಮ್‌ ಅರ್ಜಿ ನಾಳೆ ವಿಚಾರಣೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |30-3-2021

ಕೇರಳದ ಪ್ರಸಕ್ತ ವಿಧಾನಸಭೆಯ ಅವಧಿಯಲ್ಲಿಯೇ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಕೇರಳ ಹೈಕೋರ್ಟ್‌ಗೆ ಚುನಾವಣಾ ಆಯೋಗ ಆಶ್ವಾಸನೆ

ಕೇರಳದ ಮೂರು ರಾಜ್ಯಸಭಾ ಸ್ಥಾನಗಳ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಆ ಸ್ಥಾನಗಳ ಚುನಾವಣೆಯನ್ನು 14ನೇ ಕೇರಳ ವಿಧಾನಸಭೆ ಅವಧಿಯಲ್ಲಿಯೇ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಕೇರಳ ಹೈಕೋರ್ಟ್‌ಗೆ ಮಂಗಳವಾರ ಆಶ್ವಾಸನೆ ನೀಡಿತು. ತಾನು ಶಾಸನಬದ್ಧ ವೇಳಾಪಟ್ಟಿ ಪಾಲಿಸುವುದಾಗಿ ನಿಗದಿತ ಸಮಯದೊಳಗೆ ರಾಜ್ಯಸಭಾ ಚುನಾವಣೆ ನಡೆಸುವುದಾಗಿ ಸೋಮವಾರ ನ್ಯಾ. ಪಿ ವಿ ಆಶಾ ಅವರಿದ್ದ ಪೀಠಕ್ಕೆ ಆಯೋಗ ಅಫಿಡವಿಟ್‌ ಸಲ್ಲಿಸಿತು. ಕೇರಳ ವಿಧಾನಸಭೆಗೆ ಏಪ್ರಿಲ್‌ 6ರಂದು ಚುನಾವಣೆ ನಡೆಯಲಿದೆ.

Justice PV Asha and Kerala High Court
Justice PV Asha and Kerala High Court

ರಾಜ್ಯಸಭಾ ಚುನಾವಣೆ ಕೈಬಿಡುವ ನಿರ್ಧಾರ ಪ್ರಶ್ನಿಸಿ ಕೇರಳ ವಿಧಾನಸಭೆ ಕಾರ್ಯದರ್ಶಿ ಮತ್ತು ಶಾಸಕ ಎಸ್‌ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ರಜಾದಿನವಾಗಿದ್ದು ಪ್ರಸಕ್ತ ಕೇರಳ ವಿಧಾನಸಭೆ ಅವಧಿಯೊಳಗೆ ರಾಜ್ಯಸಭಾ ಚುನಾವಣೆ ನಡೆಸಬೇಕಾದರೆ ಮಂಗಳವಾರ ಅಥವಾ ಬುಧವಾರದೊಳಗೆ ಅಧಿಸೂಚನೆ ಹೊರಡಿಸಬೇಕೆಂದು ಅರ್ಜಿದಾರರ ಪರ ವಕೀಲರಾದ ಎನ್ ಎನ್ ಸುಗುಣಪಾಲನ್ ಮತ್ತು ಸಿ ಎಸ್ ವೈದ್ಯನಾಥನ್ ವಾದಿಸಿದರು. ಐಯುಎಂಎಲ್‌ ಪಕ್ಷದ ಅಬ್ದುಲ್ ವಹಾಬ್, ಸಿಪಿಎಂನ ಕೆ ಕೆ ರಾಗೇಶ್ ಮತ್ತು ಕಾಂಗ್ರೆಸ್‌ನ ವಯಲರ್ ರವಿ ಅವರ ಅಧಿಕಾರಾವಧಿ ಮುಗಿಯುವುದರಿಂದ ಏಪ್ರಿಲ್ 21ಕ್ಕೆ ಈ ಸ್ಥಾನಗಳು ತೆರವಾಗಲಿವೆ.

ಮಹಾರಾಷ್ಟ್ರ ಗೃಹ ಸಚಿವ ದೇಶಮುಖ್‌ ವಿರುದ್ಧ ಸಿಬಿಐ ತನಿಖೆಗೆ ಪೊಲೀಸ್‌ ಅಧಿಕಾರಿ ಪರಮ್‌ ಬೀರ್‌ ಸಿಂಗ್‌ ಅರ್ಜಿ: ನಾಳೆ ವಿಚಾರಣೆ ನಡೆಸಲಿರುವ ಬಾಂಬೆ ಹೈಕೋರ್ಟ್‌

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಎಸಗಿದ್ದಾರೆ ಎನ್ನಲಾದ ಅಕ್ರಮಗಳ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಮುಂಬೈ ನಗರ ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ನಡೆಯಲಿದೆ. ಸಿಬಿಐ ತನಿಖೆಗೆ ಆಗ್ರಹಿಸುವುದು ಮಾತ್ರವಲ್ಲದೆ ರಾಜಕಾರಣಿಗಳಿಗೆ ಲಾಭ ಮಾಡಿಕೊಡುವ ಕಾರಣಕ್ಕೆ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ/ ನೇಮಕಾತಿ ನಡೆಸದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೂಡ ಪರಮ್‌ ಕೋರಿದ್ದಾರೆ. ಅಲ್ಲದೆ ಸಾಕ್ಷ್ಯ ನಾಶ ತಪ್ಪಿಸಲು ದೇಶಮುಖ್‌ ಅವರ ನಿವಾಸದ ಎಲ್ಲಾ ಸಿಸಿಟಿವಿ ದೃಶ್ಯವಳಿಗಳನ್ನು ಸುಪರ್ದಿಗೆ ಪಡೆಯಬೇಕೆಂದು ಪ್ರಾರ್ಥಿಸಿದ್ದಾರೆ.

Param Bir Singh
Param Bir Singh

ಪ್ರಕರಣವನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕೆಂದು ಹಿರಿಯ ನ್ಯಾಯವಾದಿ ವಿಕ್ರಮ್‌ ನಂಕಣಿ ಅವರು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿದರು. ಅರ್ಜಿಯಲ್ಲಿ ಮಾಡಲಾದ ಮನವಿ ಹೇಗೆ ಪಿಐಎಲ್‌ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಆಗ ಉತ್ತರಿಸಿದ ನಂಕಣಿ, ಇದಕ್ಕೆ ವಿಚಾರಣೆ ವೇಳೆ ನ್ಯಾಯಾಲಯ ಒಪ್ಪುವಂತಹ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

Related Stories

No stories found.
Kannada Bar & Bench
kannada.barandbench.com