ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |15-07-2021

>> ಕೇರಳ ವಿಧಾನಸಭೆ ದಾಂಧಲೆ ಪ್ರಕರಣ - ತೀರ್ಪು ಕಾಯ್ದಿರಿಸಿದ ಸುಪ್ರೀಂ >> ಸಿಎಪಿಎಫ್ ಅಭ್ಯರ್ಥಿ ಅನರ್ಹತೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್ >> ಯುಎಪಿಎ ಪ್ರಕರಣಗಳೆಲ್ಲವನ್ನೂ ಎನ್‌ಐಎ ನ್ಯಾಯಾಲಯ ಆಲಿಸಬೇಕಿಲ್ಲ: ಮಹಾ ಸರ್ಕಾರ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |15-07-2021

[ಕೇರಳ ವಿಧಾನಸಭೆಯಲ್ಲಿ ದಾಂದಲೆ] ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿನ ವಸ್ತುಗಳನ್ನು ಹಾನಿಗೊಳಿಸುವುದು ನ್ಯಾಯದ ಹಿತಾಸಕ್ತಿಯಾಗುತ್ತದೆಯೇ? ತೀರ್ಪು ಕಾಯ್ದಿರಿಸಿದ ಸುಪ್ರೀಂ

ತಾನು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ 2015ರಲ್ಲಿ ಕೇರಳದ ವಿಧಾನಸಭೆಯಲ್ಲಿ ನಡೆದಿದ್ದ ದಾಂದಲೆಯಲ್ಲಿ ಭಾಗಿಯಾಗಿದ್ದ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಆಡಳಿತರೂಢ ಭಾರತೀಯ ಕಮ್ಯುನಿಸ್ಟ್‌ ಪಕ್ಷವು ಅನುಮತಿ ಕೋರಿ ಸಲ್ಲಿಸಿದ್ದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ. “ಇದು ಕಳವಿಗೆ ಸಂಬಂಧಿಸಿದ್ದಲ್ಲ. ಆದರೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವುದಾಗಿದೆ. ಈ ಆಸ್ತಿಯ ರಕ್ಷಕ ಸರ್ಕಾರವಾಗಿದೆ” ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ನೇತೃತ್ವದ ಪೀಠ ಹೇಳಿದೆ.

Justices DY Chandrachud and MR Shah, Kerala 2015 Assembly Chaos
Justices DY Chandrachud and MR Shah, Kerala 2015 Assembly Chaos

“ನ್ಯಾಯಾಲಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ನ್ಯಾಯಾಲಯದಲ್ಲಿ ವಕೀಲರು ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಒಬ್ಬರನ್ನೊಬ್ಬರು ವಿರೋಧಿಸುತ್ತಾರೆ. ಹಾಗೆಂದು ನ್ಯಾಯಾಲಯದ ಆಸ್ತಿಗೆ ಹಾನಿ ಮಾಡುವುದನ್ನು ಸಮರ್ಥಿಸಲಾಗುತ್ತದೆಯೇ?” ಎಂದು ನ್ಯಾ. ಚಂದ್ರಚೂಡ್‌ ಪ್ರಶ್ನಿಸಿದರು. “ಆಡಳಿತರೂಢರೂ ಸಮಾನವಾಗಿ ತಪ್ಪೆಸಗಿದ್ದಾರೆ. ಇದು ಎರಡು ಪಕ್ಷಗಳ ನಡುವಿನ ಕಲಹವಾಗಿದೆ” ಎಂದು ಹಿರಿಯ ವಕೀಲ ರಂಜಿತ್‌ ಕುಮಾರ್‌ ಹೇಳಿದರು. ಆಗ ನ್ಯಾ. ಚಂದ್ರಚೂಡ್‌ ಅವರು “ಪ್ರಜಾಪ್ರಭುತ್ವದ ಗರ್ಭಗುಡಿಯಲ್ಲಿ ವಸ್ತುಗಳನ್ನು ಹಾನಿಗೊಳಿಸುವುದು ನ್ಯಾಯದ ಹಿತಾಸಕ್ತಿಯಾಗುತ್ತದೆಯೇ?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಒಂದು ವೃಷಣ ರೂಪುಗೊಳ್ಳದಿರುವುದು ಅಂಗವೈಕಲ್ಯವೇ ಎಂದು ಪ್ರಶ್ನಿಸಿದ ದೆಹಲಿ ಹೈಕೋರ್ಟ್‌: ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸೂಚನೆ

ಒಂದು ವೃಷಣ ರೂಪಗೊಳ್ಳದಿರುವುದರಿಂದ ವೈದ್ಯಕೀಯವಾಗಿ ಅನರ್ಹರು ಎಂದು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ಅಭ್ಯರ್ಥಿಯೊಬ್ಬರನ್ನು ತಿರಸ್ಕರಿಸಿರುವ ಸಂಬಂಧ ದೆಹಲಿ ಹೈಕೋರ್ಟ್‌ ಗುರುವಾರ ಕೇಂದ್ರದ ಪ್ರತಿಕ್ರಿಯೆ ಕೇಳಿದೆ. ವೃಷಣದ ಒಂದು ಭಾಗ ರಚನೆಯಾಗಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ವೈದ್ಯಕೀಯವಾಗಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಿಎಪಿಎಫ್‌ ಉದ್ಯೋಗಾಕಾಂಕ್ಷಿಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Delhi High Court
Delhi High Court

ನಿಯಮಾವಳಿಗಳ ಪ್ರಕಾರ ವೃಷಣ ರೂಪುಗೊಳ್ಳದಿರುವುದು ಅಂಗವೈಕಲ್ಯವಲ್ಲ. ಅವರ ಉಮೇದುವಾರಿಕೆಯನ್ನು ತಿರಸ್ಕರಿಸಬಾರದು ಎಂದು ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ರಾಜೀವ್‌ ಸಹಾಯ್‌ ಎಂಡ್ಲಾ ಮತ್ತು ಅಮಿತ್‌ ಬನ್ಸಾಲ್‌ ಅವರಿದ್ದ ಪೀಠ ಚರ್ಮದ ಚೀಲದ ಸೂಕ್ತ ಸ್ಥಳಕ್ಕೆ ವೃಷಣ ಚಲಿಸದೇ ಇರುವುದನ್ನು ನಿಯಮಾವಳಿಗಳಲ್ಲಿ ಅಂಗವೈಕಲ್ಯ ಎನ್ನುತ್ತಾರೆ. ಆದರೆ ವೃಷಣ ರೂಪುಗೊಳ್ಳದೇ ಇರುವುದರ ಬಗ್ಗೆ ನಿಯಮಗಳು ಏನನ್ನೂ ಹೇಳುವುದಿಲ್ಲ ಎಂದಿತು.

ಯುಎಪಿಎ ಅಪರಾಧಗಳನ್ನು ಎನ್‌ಐಎ ನ್ಯಾಯಾಲಯಗಳಲ್ಲೇ ವಿಚಾರಣೆ ಮಾಡಬೇಕು ಎನ್ನುವ ನ್ಯಾಯತತ್ವ ಇಲ್ಲ: ಮಹಾರಾಷ್ಟ್ರ ಸರ್ಕಾರ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯಿದೆಯಡಿ ರಚಿಸಲಾದ ವಿಶೇಷ ನ್ಯಾಯಾಲಯಗಳು ಎನ್‌ಐಎಯಿಂದ ತನಿಖೆಗೆ ಒಳಪಟ್ಟಿರುವ ಪ್ರಕರಣಗಳನ್ನು ಮಾತ್ರವೇ ವಿಚಾರಣೆ ನಡೆಸಲು ರೂಪುಗೊಂಡಿದ್ದು ಉಳಿದಂತೆ ಅಕ್ರಮ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಬರುವ ಪ್ರಕರಣಗಳನ್ನು ಸಾಮಾನ್ಯ ನ್ಯಾಯಾಲಯಗಳು ಸಹ ಆಲಿಸಬಹುದು ಎಂದು ಮಹಾರಾಷ್ಟ್ರ ಸರ್ಕಾರವು ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

Sudha Bharadwaj, Bombay High Court
Sudha Bharadwaj, Bombay High Court

ಭೀಮಾಕೋರೆಗಾಂವ್ ಪ್ರಕರಣದಲ್ಲಿ ಆರೋಪಿಯಾಗಿರುವ ಸುಧಾ ಭಾರಧ್ವಜ್‌ ಅವರು ಪುಣೆ ಸೆಷನ್ಸ್‌ ನ್ಯಾಯಾಲಯವು ನೀಡಿರುವ ಎರಡು ಆದೇಶಗಳು ಆ ನ್ಯಾಯಾಲಯದ ನ್ಯಾಯಿಕ ವ್ಯಾಪ್ತಿಯಿಂದ ಹೊರತಾಗಿವೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಸೆಷನ್ಸ್‌ ನ್ಯಾಯಾಲಯವು ಎನ್‌ಐಎ ಕಾಯಿದೆ ಅಡಿ ಬರುವ ವಿಶೇಷ ನ್ಯಾಯಾಲಯವಾಗಿಲ್ಲದೆ ಇರುವುದರಿಂದ ಅದರ ಆದೇಶಗಳು ಪ್ರಸಕ್ತ ಪ್ರಕರಣದಲ್ಲಿ ವ್ಯಾಪ್ತಿಯನ್ನು ಮೀರಿವೆ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಇದಕ್ಕೆ ಉತ್ತರಿಸಿದ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್‌ ಅಶುತೋಷ್‌ ಕುಂಭಕೋಣಿ ಅವರು ಅರ್ಜಿದಾರರ ವಾದವು ತಪ್ಪು. ಎನ್‌ಐಎ ವಿಶೇಷ ನ್ಯಾಯಾಲಯಗಳು ಎನ್‌ಐಎ ತನಿಖೆ ನಡೆಸುವ ಅನುಸೂಚಿತ ಅಪರಾಧಗಳನ್ನು ಅಲಿಸಲು ಮಾತ್ರ ರಚಿತವಾಗಿವೆ. ಯುಎಪಿಎ ಪ್ರಕರಣಗಳೆಲ್ಲವನ್ನೂ ಎನ್‌ಐಎ ವಿಶೇಷ ನ್ಯಾಯಾಲಯಗಳೇ ಆಲಿಸಬೇಕು ಎನ್ನುವ ಹೊಸ ನ್ಯಾಯತತ್ವವನ್ನು ತರುವುದು ಬೇಡ. ಕಾಯಿದೆಯ ಅನುಸೂಚಿತ ಅಪರಾಧಗಳಡಿ ಎನ್ಐಎ ಸಂಸ್ಥೆಯ ಹೊರತಾಗಿಯೂ ತನಿಖೆ ನಡೆಯಬಹುದು. ರಾಜ್ಯ ತನಿಖಾ ಸಂಸ್ಥೆಗಳ ಜೊತೆಗೂಡಿ ಎನ್‌ಐಎಯೂ ತನಿಖೆ ನಡೆಸಬಹುದು. ಅದೇ ರೀತಿ ತನಿಖೆಯೊಂದನ್ನು ಎನ್‌ಐಎ ರಾಜ್ಯದ ಸಂಸ್ಥೆಯಿಂದ ಕೈಗೆತ್ತಿಕೊಂಡು ಅದನ್ನು ರಾಜ್ಯಕ್ಕೇ ಮತ್ತೆ ನೀಡಬಹುದು. ಯುಎಪಿಎ ಪ್ರಕರಣಗಳೆಲ್ಲವನ್ನೂ ಎನ್‌ಐಎ ನ್ಯಾಯಾಲಯವೇ ಆಲಿಸಬೇಕು ಎಂದೇನೂ ಇಲ್ಲ, ಸಾಮಾನ್ಯ ನ್ಯಾಯಾಲಯಗಳೂ ಆಲಿಸಬಹುದು ಎಂದು ವಿವರಿಸಿದರು.

Related Stories

No stories found.
Kannada Bar & Bench
kannada.barandbench.com