ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ವೇಳೆ ಸಂಭವಿಸಿರುವ ಕೊಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ಸಂಸ್ಥೆಗೆ ನಿರ್ದೇಶಿಸಿರುವ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಮನವಿಯ ವಿಚಾರಣಾ ಸಂಖ್ಯೆಯನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ನಿರ್ಧರಿಸಬೇಕಿದೆ. ತನಿಖೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ರಾಜ್ಯ ಸರ್ಕಾರವು ಸಿಬಿಐಗೆ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇತರ ಪ್ರಕರಣ ವಿಚಾರಣೆಯ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್ ವಹಿಸಿದ್ದು, ತನಿಖೆಗೆ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ದೇಶದ್ರೋಹ ಆರೋಪ ಎದುರಿಸುತ್ತಿರುವ ಶರ್ಜೀಲ್ ಇಮಾಮ್ ವಿರುದ್ಧ ಬುಧವಾರ ಪಾಸಿಕ್ಯೂಷನ್ ವಾದ ಮಂಡಿಸಿದ್ದು, ಇಮಾಮ್ ಭಾಷಣಕ್ಕೂ ಮುನ್ನ 'ಅಸಲಾಂ-ಅಲೈಕುಮ್' ಬಳಕೆಯು ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿದ್ದಾಗಿದೆಯೇ ಹೊರತು ವಿಸ್ತೃತ ನೆಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿದ್ದಾಗಿರಲಿಲ್ಲ ಎಂದು ಹೇಳಿದೆ.
ಶರ್ಜೀಲ್ ಇಮಾಮ್ ಅವರು ಜಾಮೀಯಾ ಮಿಲಿಯಾ ಇಸ್ಲಾಮಿಯಾ ಮತ್ತು ಕಳೆದ ವರ್ಷದ ಜನವರಿಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಾಡಿರುವ ಭಾಷಣವು ನಿರ್ದಿಷ್ಟ ಸಮುದಾಯವನ್ನು ಕೇಂದ್ರೀಕರಿಸಿ ಮಾಡಿದ್ದಾಗಿತ್ತು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಎದುರು ವಿಶೇಷ ಸರ್ಕಾರಿ ಅಭಿಯೋಜಕ ಅಮಿತ್ ಪ್ರಸಾದ್ ಹೇಳಿದ್ದಾರೆ. “ಇಮಾಮ್ ಏನು ಹೇಳುತ್ತಾರೆ, ಏನು ಮಾಡುತ್ತಾರೆ ಎಂಬುದು ಅಮುಖ್ಯವಾಗಲು ಅವರೇನು ಸಣ್ಣ ಜೇಬುಗಳ್ಳ ಅಥವಾ ಮಾದಕ ದ್ರವ್ಯ ಮಾರಾಟಗಾರರಲ್ಲ… ಅವರಿಗೆ ಐದು ಭಾಷೆಗಳು ಗೊತ್ತಿದೆ. ಅದ್ಭುತ ಮಾತುಗಾರಿಕಾ ಕೌಶಲವಿದೆ. ಅವರು ಏನು ಹೇಳುತ್ತಾರೋ ಅದನ್ನು ಜನರು ನಂಬುತ್ತಾರೆ. ಈ ದೃಷ್ಟಿಯಲ್ಲಿ ಅವರ ಭಾಷಣವನ್ನು ನೋಡಬೇಕಿದೆ” ಎಂದು ಪ್ರಾಸಿಕ್ಯೂಷನ್ ವಾದಿಸಿದೆ.