ಹೈಕೋರ್ಟ್‌ಗಳು ತಮ್ಮ ರಿಟ್ ವ್ಯಾಪ್ತಿ ಬಳಸಿ ಮಾಹಿತಿ ಆಯುಕ್ತರು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆ ಅಡಿ ಹೊರಡಿಸುವ ಆದೇಶಗಳಿಗೆ ನಿರಂತರವಾಗಿ ತಡೆ ನೀಡುತ್ತಿರುವುದನ್ನು ಆಕ್ಷೇಪಿಸಿ ಹದಿನೈದು ಹಾಲಿ ಮತ್ತು ನಿವೃತ್ತ ಮಾಹಿತಿ ಆಯುಕ್ತರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರವನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ನಿರ್ದೇಶನಗಳನ್ನು ನೀಡುವ ಮೂಲಕ ಆರ್‌ಟಿಐ ಅನ್ನು ಸಂವಿಧಾನ ರೀತ್ಯಾ ಸಬಲಗೊಳಿಸುವಂತೆ ಮಾಹಿತಿ ಆಯುಕ್ತರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆರ್‌ಟಿಐ ಕಾಯಿದೆಯ ಸೆಕ್ಷನ್ 23ರ ಪ್ರಕಾರ ಯಾವುದೇ ನ್ಯಾಯಾಲಯವು ಈ ಕಾಯಿದೆಯ ಅಡಿ ಯಾವುದೇ ದೂರು, ಮನವಿ ಅಥವಾ ಪ್ರಕ್ರಿಯೆಯನ್ನು ಪರಿಗಣಿಸಬಾರದು ಎಂದು ಹೇಳುತ್ತದೆ. ಇದೇ ಕಾಯಿದೆ ಅಡಿ ಮೇಲ್ಮನವಿ ಸಲ್ಲಿಸದ ಹೊರತು ಆದೇಶವನ್ನು ಪ್ರಶ್ನಿಸಿಬಾರದು ಎಂದಿರುವುದಾಗಿ ಪತ್ರದಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ರೂಪಿಸಿರುವ ನಿಯಮಾವಳಿಗಳ ಅಡಿ ಕೊರೊನಾ ಸೋಂಕು ತಗುಲಿದ್ದರಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ ನೀಡುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.
ಪರಿಹಾರ ನೀಡುವುದರಿಂದ ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಹೊರಗಿಡುವುದಕ್ಕೆ ನಮ್ಮ ಒಮ್ಮತವಿಲ್ಲ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರಿದ್ದ ವಿಭಾಗೀಯ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿತು. ಕೋವಿಡ್‌ನಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡುವ ಸಂಬಂಧ ನಿಯಮಾವಳಿ ರೂಪಿಸಲು ಎನ್‌ಡಿಎಂಎಗೆ ಜೂನ್ 30ರಂದು ಸರ್ವೋಚ್ಚ ನ್ಯಾಯಾಲಯವು ಆರು ವಾರಗಳ ಕಾಲಾವಕಾಶ ನೀಡಿತ್ತು.