ಹಣಕಾಸು ತೀರ್ಪಿಗೆ ಸಂಬಂಧಿಸಿದಂತೆ ಐವತ್ತು ವರ್ಷಗಳಿಂದ ಕೋರ್ಟ್‌ನಲ್ಲಿರುವ ಹಳೆಯ ಸಿವಿಲ್ ಪ್ರಕರಣವೊಂದು ನಾಗರಿಕ ದಂಡ ಸಂಹಿತೆಯಡಿ (ಸಿಪಿಸಿ) ತೀರ್ಪು ನೀಡುವ ಸಂಬಂಧ ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯವಾಗಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾ. ಹೇಮಂತ್ ಗುಪ್ತಾ ಮತ್ತು ನ್ಯಾ. ವಿ ರಾಮಸುಬ್ರಮಣಿಯಂ ಅವರಿದ್ದ ಪೀಠವು ಐದು ದಶಕಗಳ ಕಾಲ ಸಿವಿಲ್ ಪ್ರಕರಣವೊಂದು ಮುಂದುವರೆದ ರೀತಿಯ ಬಗ್ಗೆ ಹಾಸ್ಯ ಮಿಶ್ರಿತವಾಗಿ ಮೇಲಿನಂತೆ ಹೇಳಿತು.
ರಮಾ ರಾಣಿ ದೇವಿ ಎಂಬುವವರು 1971ರಲ್ಲಿ ಪಶ್ಚಿಮ ಬಂಗಾಳದ ಬೊಂಗಾಂವ್‌ನ ಜಿಲ್ಲಾ ಮುನ್ಸಿಫ್ ನ್ಯಾಯಾಲಯದಲ್ಲಿ, ಸಸಾಧರ್ ಬಿಸ್ವಾಸ್ (ತೀರ್ಪು- ಸಾಲಗಾರ) ಎಂಬುವವರ ವಿರುದ್ಧ ಸಾಲದ ಮರುಪಾವತಿಗಾಗಿ ಮೊಕದ್ದಮೆ ದಾಖಲಿಸಿದ್ದರು. 1974ರಲ್ಲಿ ರಮಾ ಅವರ ಪರವಾಗಿ ತೀರ್ಪು ಬಂದು ಆರು ಸಮಾನ ಕಂತುಗಳಲ್ಲಿ ಸಾಲದ ಹಣ ಮರುಪಾವತಿಸುವಂತೆ ಕೋರಿತ್ತು. ತೀರ್ಪನ್ನು ಗೌರವಿಸದ ಹಿನ್ನೆಲೆಯಲ್ಲಿ ತಮ್ಮ ಪರವಾಗಿ ತೀರ್ಪು ಪಡೆದ ರಮಾ ಅವರು ಪ್ರತಿವಾದಿಗೆ ಸೇರಿದ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ತಮ್ಮ ಹಣವನ್ನು ಮರುಪಾವತಿ ಪಡೆಯಲು ನಿರ್ವಹಣಾ ಅರ್ಜಿ ಸಲ್ಲಿಸಿ ಅದರಲ್ಲಿ ಯಶಸ್ವಿಯಾಗಿದ್ದರು. ಇದರ ಸಂಬಂಧ ಒಮ್ಮೆ ಅಸ್ತಿಯನ್ನು ಹರಾಜು ಹಾಕಿ ಹಣವನ್ನು ಕೋರ್ಟ್‌ಗೆ ಸಂದಾಯ ಮಾಡಲಾಗಿತ್ತಾದರೂ ನಂತರ ಪ್ರತಿವಾದಿಯು (ತೀರ್ಪು ಸಾಲಗಾರ) ಹರಾಜು ಕ್ರಮಬದ್ಧವಾಗಿಲ್ಲ ಎಂದು ಮತ್ತೆ ಕೋರ್ಟ್ ಮೆಟ್ಟಿಲೇರಿದರು. ಪರಿಣಾಮ ಪ್ರಕರಣ ಹಲವು ದಶಕಗಳ ಕಾಲ ಮುಂದುವರೆಯಿತು. ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಇಲ್ಲಿ ಅರ್ಜಿದಾರರು (ತೀರ್ಪು ಸಾಲಗಾರ) ಸಾಲ ನೀಡಲು ಅಗತ್ಯವಿರುವಷ್ಟು ಭೂಮಿಯನ್ನು ಮಾತ್ರವೇ ಮಾರುವಂತೆ ಕೋರಿದ್ದರು. ಈಗ ಅದನ್ನೂ ಸಹ ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಅಂತಿಮವಾಗಿ ಆಸ್ತಿ ಮಾರಿ ಸಾಲ ಮರುಪಾವತಿಸುವ ಸಂಬಂಧ ದಶಕಗಳ ಹಿಂದಿನ ಆದೇಶ ಊರ್ಜಿತವಾಗಿದೆ.
ದೆಹಲಿಯ ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ದೆಹಲಿ ಹೈಕೋರ್ಟ್ ಟ್ವಿಟರ್‌ಗೆ ನೋಟಿಸ್ ನೀಡಿದೆ. ಪ್ರಕರಣದ ಸಂಬಂಧ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾ. ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠವು, “ಮೊದಲು ನೀವು ಪ್ರತಿಕ್ರಿಯಿಸಿ. ನಂತರ ನಾವು ಮುಂದಿನ ಕ್ರಮ ನೋಡುತ್ತೇವೆ” ಎಂದು ಹೇಳಿತು.
ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬವನ್ನು ರಾಹುಲ್ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಈ ವೇಳೆ ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸಂತ್ರಸ್ತೆಯ ಕುಟುಂಬದ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಸೂಕ್ಷ್ಮ ಮಾಹಿತಿಯನ್ನು ಹೊರಹಾಕಿದ್ದಾರೆ ಎಂದು ಆಕ್ಷೇಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ದೆಹಲಿ ಪೊಲೀಸ್ ಕಮಿಷನರ್ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸೂಚಿಸುವಂತೆ ಕೋರಿ ವಕೀಲ ಮಾರ್ಕಾಂಡ್ ಸುರೇಶ್ ಮಾಡ್ಲೇಕರ್ ಎಂಬುವರು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.