ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |17-07-2021

>> ಸುಪ್ರೀಂ ಕೋರ್ಟ್‌ ಕಲಾಪವನ್ನು ಲೈವ್‌ ಸ್ಟ್ರೀಮ್‌ ಮಾಡುವ ಉತ್ಸುಕತೆ ವ್ಯಕ್ತಪಡಿಸಿದ ಸಿಜೆಐ >> ದೆಹಲಿ ಪೊಲೀಸರ ವಿಶೇಷ ಸರ್ಕಾರಿ ಅಭಿಯೋಜಕರ ಪಟ್ಟಿ ತಿರಸ್ಕರಿಸಿದ ದೆಹಲಿ ಸರ್ಕಾರ >> ಪತ್ರಕರ್ತ ರಾಜೀವ್‌ ಶರ್ಮಾಗೆ ಜಾಮೀನು ನಿರಾಕರಣೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |17-07-2021

ಸುಪ್ರೀಂ ಕೋರ್ಟ್‌ ಕಲಾಪವನ್ನು ಲೈವ್‌ ಸ್ಟ್ರೀಮ್‌ ಮಾಡುವ ಉತ್ಸುಕತೆ ವ್ಯಕ್ತಪಡಿಸಿದ ಸಿಜೆಐ ಎನ್‌ ವಿ ರಮಣ

ಸರ್ವೋಚ್ಚ ನ್ಯಾಯಾಲಯದ ಕೆಲ ಪೀಠಗಳ ಕಲಾಪವನ್ನಾದರೂ ಶೀಘ್ರದಲ್ಲೇ ಲೈವ್‌ಸ್ಟ್ರೀಮ್‌ ಮಾಡುವ ಸೂಚನೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೀಡಿದ್ದಾರೆ. ಈ ಸಂಬಂಧ ಅಗತ್ಯ ಸೌಲಭ್ಯದ ಬಗ್ಗೆ ಸುಪ್ರೀಂ ಕೋರ್ಟ್‌ ಕಾರ್ಯಪ್ರವೃತ್ತವಾಗಿದ್ದು, ಅದಕ್ಕಾಗಿ ಪೂರ್ಣ ಪೀಠದ ಸಹಮತ ಪಡೆಯಲು ಯತ್ನಿಸುತ್ತಿರುವುದಾಗಿ ತಿಳಿಸಿದರು.

CJI NV Ramana and Supreme Court
CJI NV Ramana and Supreme Court

“ಸುಪ್ರೀಂ ಕೋರ್ಟ್‌ನ ಕೆಲ ಪೀಠಗಳ ಕಲಾಪವನ್ನಾದರೂ ಲೈವ್‌ ಸ್ಟ್ರೀಮ್‌ ಮಾಡುವ ಉತ್ಸುಕತೆ ನಮಗಿದೆ. ಅದಕ್ಕೆ ಬೇಕಾದ ವ್ಯವಸ್ಥೆ ಮತ್ತು ಪೂರ್ಣಪೀಠದ ಸಹಮತ ಪಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಆಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ವ್ಯವಸ್ಥೆ ಕಲ್ಪಿಸಬಹುದು ಎಂಬುದು ನನಗೆ ಅರ್ಥವಾಗಿದೆ” ಎಂದು ಗುಜರಾತ್‌ ಹೈಕೋರ್ಟ್‌ನ ಕಲಾಪ ಲೈವ್‌ ಸ್ಟ್ರೀಮಿಂಗ್‌ಗೆ ಅಧಿಕೃತ ಚಾಲನೆ ನೀಡುವ ಸಮಾರಂಭದಲ್ಲಿ ಸಿಜೆಐ ಹೇಳಿದರು

ಕೆಂಪು ಕೋಟೆ ಮೇಲಿನ ದಾಳಿ ಪ್ರಕರಣ: ದೆಹಲಿ ಪೊಲೀಸರ ವಿಶೇಷ ಸರ್ಕಾರಿ ಅಭಿಯೋಜಕರ ಪಟ್ಟಿಯನ್ನು ತಿರಸ್ಕರಿಸಿದೆ ದೆಹಲಿ ಸರ್ಕಾರ

ಗಣರಾಜ್ಯೋತ್ಸವ ದಿವಸದಂದು ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್‌ ರ್ಯಾಲಿ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ದೆಹಲಿ ಸರ್ಕಾರವನ್ನು ಸರ್ಕಾರಿ ವಕೀಲರೇ ಪ್ರತಿನಿಧಿಸಲಿದ್ದಾರೆ ಎಂದು ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್‌ ಸಿಸೋದಿಯಾ ತಿಳಿಸಿದ್ದಾರೆ.

Manish Sisodia
Manish Sisodia

ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ನೇಮಿಸುವ ವಕೀಲರು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯಾಲಯದಲ್ಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸುವಂತೆ ದೆಹಲಿ ಪೊಲೀಸರು ಪ್ರಸ್ತಾಪಿಸಿರುವ ಪಟ್ಟಿಯನ್ನು ವಜಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಹೇಳಿಕೆ ತಿಳಿಸಿದೆ. ಆಧಾರರಹಿತವಾದ ಮತ್ತು ಅನಗತ್ಯ ಪ್ರಕರಣವನ್ನು ಪ್ರತಿನಿಧಿಸಲು ದೆಹಲಿ ಪೊಲೀಸರು ಬೇಡಿಕೆ ಇಟ್ಟಿರುವ ವಕೀಲರನ್ನು ನೇಮಿಸಲಾಗದು. ಹಾಲಿ ಇರುವ ಸರ್ಕಾರಿ ಅಭಿಯೋಜಕರ ಬಗ್ಗೆ ಸರ್ಕಾರ ಸಂತೃಪ್ತಿ ವ್ಯಕ್ತಪಡಿಸಿದ್ದು, ಹಾಲಿ ವಕೀಲರ ಬಗ್ಗೆ ಯಾವುದೇ ದೂರುಗಳಿಲ್ಲ ಎಂದು ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಪತ್ರಕರ್ತ ರಾಜೀವ್‌ ಶರ್ಮಾಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಚೀನಾದ ಕಂಪೆನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಟ್ಟಿರುವ ಪತ್ರಕರ್ತ ರಾಜೀವ್‌ ಶರ್ಮಾ ಅವರಿಗೆ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ನಿರಾಕರಿಸಿದೆ. ಶರ್ಮಾ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತನಿಖೆಯು ಮಹತ್ವ ಹಂತದಲ್ಲಿದೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಹೇಳಿದ್ದಾರೆ.

Jail
Jail

“ಹಣದ ವರ್ಗಾವಣೆಯ ಮೂಲ ಪತ್ತೆ ಹಚ್ಚಬೇಕಿದ್ದು, ಆರೋಪಿಯನ್ನು ಈಗ ಬಿಡುಗಡೆ ಮಾಡುವುದರಿಂದ ನ್ಯಾಯದಾನಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಆರೋಪಿಗೆ ಜಾಮೀನು ದೊರೆತರೆ ಅವರು ಪ್ರಕರಣದ ದಿಕ್ಕುತಪ್ಪಿಸುವುದಲ್ಲದೇ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com