ಪ್ರಸಕ್ತ ಸಾಲಿನ ಶಮ್ನಾದ್ ಬಶೀರ್ 'ಅಕ್ಸೆಸ್ ಟು ಜಸ್ಟಿಸ್ ಸ್ಕಾಲರ್‌ಶಿಪ್' ಸ್ಪರ್ಧೆಯಲ್ಲಿ ಆದಿತ್ಯ ಪನುಗಂಟಿ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿ ವೇತನ ರೂ 4 ಲಕ್ಷ ಮೊತ್ತದ್ದಾಗಿದೆ. ದೇವಾಂಗಿ ದುಬೆ ಮತ್ತು ದಯಾಂತಿಯಾ ಜಿ ಅವರು ರನ್ನರ್ ಅಪ್ ಸ್ಥಾನ ಗಳಿಸಿದರು. ಎಲ್‌ಎಸ್‌ಎಸಿ ಗ್ಲೋಬಲ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯನ್ವಯ ಸ್ಪರ್ಧೆಗೆ ಬಂದಿದ್ದ 260 ಪ್ರಬಂಧಗಳಲ್ಲಿ ಆದಿತ್ಯ ಅವರು 'ಕೃತಕ ಬುದ್ಧಿಮತ್ತೆ ಮತ್ತು ಕಾನೂನು' ಕುರಿತಂತೆ ಬರೆದ ‘ಎಐ ಇನ್ ಲಾ: ಎ ಕೇಸ್ ಆಫ್ ಕಾಶನ್ʼ ಪ್ರಬಂಧ ಪ್ರಥಮ ಸ್ಥಾನಗಳಿಸಿತು.
ಕೃತಕ ಬುದ್ಧಿಮತ್ತೆ (ಎಐ) ಕಾನೂನು ವೃತ್ತಿಯ ಮೇಲೆ ಬೀರಿದ ಪರಿಣಾಮ ಮತ್ತು ಅದು ಸಮಾಜದಲ್ಲಿ ನ್ಯಾಯ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುತ್ತದೆಯೇ ಎಂಬುದು ಈ ವರ್ಷದ ಪ್ರಬಂಧದ ವಿಷಯವಾಗಿತ್ತು. ಭಾರತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಕಾನೂನು ಶಾಲೆಯ ಆಕಾಂಕ್ಷಿಗಳಿಗೆ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ 2020 ರಲ್ಲಿ ಎಲ್ಎಸ್ಎಸಿ ಗ್ಲೋಬಲ್ ಈ ವಿದ್ಯಾರ್ಥಿ ವೇತನವನ್ನು ಸ್ಥಾಪಿಸಿತು.
ಕೋವಿಡ್‌ನಿಂದಾಗಿ ಮರಣಶಯ್ಯೆಯಲ್ಲಿರುವ ಪತಿಯಿಂದ ಮಗು ಪಡೆಯುವ ಇಚ್ಛೆ ವ್ಯಕ್ತಪಡಿಸಿದ ವಿವಾಹಿತ ಮಹಿಳೆಯೊಬ್ಬರು ಮಾಡಿದ ಮನವಿಗೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಪತಿಯ ವೀರ್ಯ ಸಂಗ್ರಹಿಸುವಂತೆ ವಡೋದರಾದ ಖಾಸಗಿ ಆಸ್ಪತ್ರೆಯೊಂದಕ್ಕೆ ನಿರ್ದೇಶಿಸಿದೆ. ಐವಿಎಫ್/ಎಆರ್‌ಟಿ ವಿಧಾನದ ಮೂಲಕ ವೀರ್ಯ ಸಂಗ್ರಹಿಸುವಂತೆ ಅರ್ಜಿದಾರರ ಪರವಾಗಿ ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಮಧ್ಯಂತರ ಆದೇಶ ಹೊರಡಿಸಿದರು. ಪತ್ನಿಯ ಜೊತೆಗೆ ಪತಿಯ ಪೋಷಕರು ಕೂಡ ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.
ಬೆಂಬಲಿತ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) ಮಸೂದೆಯ ಸೆಕ್ಷನ್ 22ರ ಪ್ರಕಾರ ವೀರ್ಯದಾನಿಯ ಸ್ಪಷ್ಟ ಅನುಮತಿ ಅಗತ್ಯ ಎಂದು ಹೇಳಿ ಆಸ್ಪತ್ರೆ ಮೊದಲು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ ತುರ್ತು ಅರ್ಜಿಯ ಅಸಾಮಾನ್ಯ ಸಂದರ್ಭ ಗಮನಿಸಿ ನ್ಯಾಯಾಲಯ ವೀರ್ಯ ಸಂಗ್ರಹಕ್ಕೆ ಅವಕಾಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 23ಕ್ಕೆ ನಿಗದಿಯಾಗಿದೆ.
ಚಿತ್ರ ಸಾಹಿತಿ ಜಾವೇದ್ ಅಖ್ತರ್ ದೂರು ಆಧರಿಸಿ ಮುಂಬೈನ ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆರಂಭಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕ್ರಿಯೆಯನ್ನು ವಜಾ ಮಾಡುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಖ್ತರ್ ದೂರಿನಿಂದಾಗಿ ಮ್ಯಾಜಿಸ್ಟ್ರೇಟ್ ಆರಂಭಿಸಿರುವ ಇಡೀ ಪ್ರಕ್ರಿಯೆಯನ್ನು ವಜಾಗೊಳಿಸುವಂತೆ ರನೌತ್ ಕೋರಿದ್ದಾರೆ. ಮ್ಯಾಜಿಸ್ಟ್ರೇಟ್ ಅವರು ಸುಮ್ಮನೆ ಮುಂಬೈನ ಜುಹು ಪೊಲೀಸರಿಗೆ ತಮ್ಮ ಪರವಾಗಿ ತನಿಖೆಗೆ ಆದೇಶಿಸುವುದಕ್ಕೆ ಬದಲಾಗಿ ಸಿಆರ್‌ಪಿಸಿ ಸೆಕ್ಷನ್ 202ರ ಪ್ರಕಾರ ದೂರಿನಲ್ಲಿ ಉಲ್ಲೇಖಿಸಿರುವ ದೂರುದಾರರು ಮತ್ತು ಸಾಕ್ಷಿಗಳನ್ನು ಪರಿಶೀಲಿಸಬೇಕಿರುತ್ತದೆ. ಹಾಗೆ ಮಾಡುವುದು ಅವರ ಕರ್ತವ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ತನಿಖೆ ನಡೆಸುವ ಸಂಬಂಧ ಮ್ಯಾಜಿಸ್ಟ್ರೇಟ್ ತಮ್ಮ ಅಧಿಕಾರವನ್ನು ಬಳಸಿಲ್ಲ. ಬದಲಿಗೆ ಅವರು ಪೊಲೀಸರ ಮುಖೇನ ನಿರ್ಲಜ್ಜವಾಗಿ ಸಹಿ ಮಾಡಿರುವ ಸಾಕ್ಷ್ಯವನ್ನು ಸಂಗ್ರಹಿಸುವ ಯತ್ನ ಮಾಡಿದ್ದಾರೆ ಎಂದು ಕಂಗನಾ ವಕೀಲ ರಿಜ್ವಾನ್ ಸಿದ್ದಿಕಿ ಹೇಳಿದ್ದಾರೆ.