ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-09-2021

>> ಕೋವಿಡ್‌ ಲಸಿಕೆಗೆ ವಿರೋಧ ಸಲ್ಲ >> ಸ್ಥಳೀಯ ರಾಸುಗಳನ್ನೇ ಜಲ್ಲಿಕಟ್ಟು ಸ್ಪರ್ಧೆಗೆ ಬಳಸುವಂತೆ ತೀರ್ಪು >> ಆನಂದ್‌ ದಾಗ, ಎಸ್‌ಐ ಅಭಿಷೇಕ್‌ ತಿವಾರಿಯನ್ನು ಎರಡು ದಿನಗಳು ಸಿಬಿಐ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-09-2021

ಕೋವಿಡ್‌ ಲಸಿಕೆಗೆ ವಿರೋಧ ಸಲ್ಲ; ವಿಶೇಷ ಪೀಠಕ್ಕೆ ಮನವಿ ವರ್ಗಾಯಿಸಿದ ಕರ್ನಾಟಕ ಹೈಕೋರ್ಟ್‌

ಕೋವಿಡ್‌ ಲಸಿಕೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮಾನವ ಕುಲದ ಉಳಿವಿಗಾಗಿ ಲಸಿಕೆ ಕಂಡುಹಿಡಿಯಲಾಗಿದೆ. ಇದೇ ರೀತಿ ಪೊಲೀಯೊ ಲಸಿಕೆಗೆ ವಿರೋಧಿಸಿದ್ದ ದೇಶಗಳು ಇನ್ನೂ ಪೋಲಿಯೊ ಮುಕ್ತವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿತು.

Acting Chief Justice Satish Chandra Sharma
Acting Chief Justice Satish Chandra Sharma

ಆಯುರ್ವೇದ ಕಾಲೇಜಿನಲ್ಲಿ ಲಸಿಕೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಡಾ. ಶ್ರೀನಿವಾಸ ಕಕ್ಕಿಲಾಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಕೋವಿಡ್‌ ಸಂಬಂಧಿತ ಮನವಿಗಳ ವಿಚಾರಣೆಗೆ ರಚಿಸಲಾಗಿರುವ ವಿಶೇಷ ಪೀಠಕ್ಕೆ ವರ್ಗಾಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರು ಎಲ್ಲಾ ಮನವಿಗಳನ್ನು ಒಟ್ಟಿಗೆ ಆಲಿಸುವುದಾಗಿ ಹೇಳಿದರು. “ವೈದ್ಯರಾಗಿರುವ ನೀವೇ ಇಂಥ ಪಿಐಎಲ್‌ ಹಾಕಿರುವುದು ಸರಿಯಲ್ಲ. ವಿಶ್ವಸಂಸ್ಥೆಯ ಪೋಲಿಯೊ ಲಸಿಕೆಗೆ ಕೆಲವು ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಆ ದೇಶಗಳಲ್ಲಿ ಇನ್ನೂ ಪೊಲೀಯೊ ಇದೆ ಎಂದ ವಿಭಾಗೀಯ ಪೀಠವು ಲಸಿಕೆ ಹಾಕಿಸಿಕೊಂಡು ಶಾಲೆಗೆ ಹಾಜರಾಗುವಂತೆ ಮಕ್ಕಳಿಗೆ ಸಲಹೆ ನೀಡಿತು. ಇದೇ ವೇಳೆ ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರನ್ನು “ನೀವು ಲಸಿಕೆ ಹಾಕಿಸಿಕೊಂಡಿದ್ದೀರಲ್ಲವೇ” ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿತು.

ಜಲ್ಲಿಕಟ್ಟು: ಕೇವಲ ಸ್ಥಳೀಯ ಹೋರಿಗಳಿಗೆ ಅನುಮತಿಸಿ, ಕೃತಕ ಗರ್ಭಧಾರಣೆ ತಪ್ಪಿಸಿ ಎಂದ ಮದ್ರಾಸ್ ಹೈಕೋರ್ಟ್

ಜಲ್ಲಿಕಟ್ಟು ಸ್ಪರ್ಧೆಯಲ್ಲಿ ವಿದೇಶಿ ಅಥವಾ ಕಸಿ ಮಾಡಿದ ತಳಿಗಳನ್ನು ಬಳಸುವಂತಿಲ್ಲ ಮತ್ತು ತಮಿಳುನಾಡು ಕಾನೂನಿನ ಪ್ರಕಾರ ಸ್ಥಳೀಯ ತಳಿಯ ಗೂಳಿಗಳನ್ನು ಮಾತ್ರ ಬಳಸಬಹುದಾಗಿದೆ ಎಂದು ಮದ್ರಾಸ್‌ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. 'ಜಲ್ಲಿಕಟ್ಟು' ಉದ್ದೇಶಕ್ಕಾಗಿ ಸ್ಥಳೀಯ ಗೂಳಿಗಳನ್ನು ಸಂರಕ್ಷಿಸುವ 2017ರ ತಮಿಳುನಾಡು ಕಾನೂನಿನಲ್ಲಿ , ಮಿಶ್ರತಳಿಗಳು ಅಥವಾ ಆಮದು ಮಾಡಿದ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Jallikattu, Image for representative
Jallikattu, Image for representative purposeswall.alphacoders.com

ಪಶು ತಜ್ಞರು ಎತ್ತುಗಳಿಗೆ ಸ್ಥಳೀಯತೆಯ ಪ್ರಮಾಣಪತ್ರ ನೀಡಬೇಕು. ಅಲ್ಲದೆ ಹಸು ಮತ್ತು ಗೂಳಿಗಳ ಮಿಲನದ ಆನಂದವನ್ನು ಹಾಳುಗೆಡವುವ ಕೃತಕ ಗರ್ಭಧಾರಣೆಯನ್ನು ತಪ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಎನ್‌ ಕಿರುಬಕರನ್‌ ಮತ್ತು ಪಿ ವೇಲ್ಮುರುಗನ್‌ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಜಲ್ಲಿಕಟ್ಟುವಿನಂಥ ಕ್ರೀಡೆಗಳಲ್ಲಿ ವಿದೇಶಿ ತಳಿಯ ಎತ್ತುಗಳನ್ನು ಬಳಸುತ್ತಿರುವುದರಿಂದ ಸ್ಥಳೀಯ, ದೇಶೀಯ ತಳಿ ಹೋರಿಗಳನ್ನು ಸಾಕುತ್ತಿರುವ ರೈತರಿಗೆ ನಷ್ಟವಾಗುತ್ತಿದೆ. ಅದಕ್ಕೂ ಮಿಗಿಲಾಗಿ ನಮ್ಮ ಸ್ಥಳೀಯ ಪ್ರಬೇಧಗಳಿಗೆ ಆದ್ಯತೆ ದೊರೆಯುವುದಿಲ್ಲ ಎಂದು ಅರ್ಜಿದಾರ ಸೇಷನ್​ ಬೇಸರ ವ್ಯಕ್ತಪಡಿಸಿದ್ದರು.

ದೇಶಮುಖ್‌ ಪ್ರಕರಣದಲ್ಲಿ ದಾಖಲೆ ಸೋರಿಕೆ: ಆನಂದ್‌ ದಾಗ, ಎಸ್‌ಐ ಅಭಿಷೇಕ್‌ ತಿವಾರಿ ಎರಡು ದಿನ ಸಿಬಿಐ ವಶಕ್ಕೆ

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಂಬೈನ ವಕೀಲ ಆನಂದ್‌ ದಾಗ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಅಭಿಷೇಕ್‌ ತಿವಾರಿ ಅವರನ್ನು ಗುರುವಾರ ದೆಹಲಿ ನ್ಯಾಯಾಲಯವು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಿದೆ.

CBI
CBI

ದಾಖಲೆಗಳನ್ನು ಸೋರಿಕೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ ಕಳೆದ ರಾತ್ರಿ ದಾಗ ಮತ್ತು ತಿವಾರಿ ಅವರನ್ನು ಬಂಧಿಸಿತ್ತು. ಕಾನೂನುಬಾಹಿರವಾಗಿ ಲಾಭ ಪಡೆದು ದಾಖಲೆ ಸೋರಿಕೆ ಮಾಡಲಾಗುತ್ತಿತ್ತು ಎಂದು ಸಿಬಿಐ ಆರೋಪಿಸಿದೆ. ಉಭಯ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಧೀಶ ವಿಮಲ್‌ ಕುಮಾರ್‌ ಯಾದವ್‌ ಅವರ ಪೀಠದ ಮುಂದೆ ಹಾಜರುಪಡಿಸಿದ ಸಿಬಿಐ, ಏಳುದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಿತು. ವಾದ-ಪ್ರತಿವಾದ ಆಲಿಸಿದ ಪೀಠವು ಆರೋಪಿಗಳನ್ನು ಎರಡು ದಿನ ಕಾಲ ಸಿಬಿಐ ವಶಕ್ಕೆ ನೀಡಿದೆ.

Related Stories

No stories found.
Kannada Bar & Bench
kannada.barandbench.com