ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ದೆಹಲಿ ಗಲಭೆ ಪ್ರಕರಣದಲ್ಲಿ ಬಂದಿತರಾಗಿದ್ದ ಐವರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈ ವೇಳೆ ನ್ಯಾಯಾಲಯವು ಪ್ರತಿಭಟನೆಯನ್ನು ಮಾಡುತ್ತಿದ್ದರು ಎನ್ನುವ ಕಾರಣವೊಂದನ್ನೇ ಆರೋಪಿಗಳನ್ನು ಜೈಲಿನಲ್ಲಿರಿಸಲು ಬಳಸಲಾಗದು. ಪ್ರತಿಭಟನೆ ಮಾಡುವ ಹಕ್ಕನ್ನು ಆರೋಪಿಗಳು ಬಳಸಿದ್ದಾರೆ ಎಂದಿತು.
ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾ. ಸುಬ್ರಮೊಣಿಯಮ್ ಪ್ರಸಾದ್ ಅವರ ಪೀಠವು, “ಪ್ರತಿಭಟಿಸುವ ಹಕ್ಕು ಹಾಗೂ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವಿಕೆಯು ಪ್ರಜಾಪ್ರಭುತ್ವ ರಾಜಕಾರಣದ ಮೂಲ ಅಂಶವಾಗಿದೆ” ಎಂದು ಅಭಿಪ್ರಾಯಪಟ್ಟಿತು. ಮುಂದುವರೆದು, “ಪ್ರಭುತ್ವದ ಅಧಿಕಾರ ದುರ್ಬಳಕೆಯು ವೈಯಕ್ತಿಕ ಸ್ವಾತಂತ್ರ್ಯವನ್ನು ಮನಸ್ಸಿಗೆ ಬಂದಂತೆ ನಿರ್ಬಂಧಿಸದೆ ಇರುವುದನ್ನು ಖಾತರಿಪಡಿಸಿಕೊಳ್ಳುವುದು ನ್ಯಾಯಾಲಯದ ಸಾಂವಿಧಾನಿಕ ಕರ್ತವ್ಯವಾಗಿದೆ,” ಎಂದಿತು.
ವಿದೇಶಿ ನೇರ ಹೂಡಿಕೆಯ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ತಮಗೆ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಭಾರತದ ಇ ಕಾಮರ್ಸ್ ದೈತ್ಯ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಸಚಿನ್ ಬನ್ಸಲ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. 2009-14 ರ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ ನೀತಿಯನ್ನು ಉಲ್ಲಂಘಿಸಲಾಗಿದೆ ಎನ್ನುವ ಆರೋಪವನ್ನು ಫ್ಲಿಪ್‌ಕಾರ್ಟ್ ವಿರುದ್ಧ ಮಾಡಲಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ, 1999ರ ಸೆಕ್ಷನ್ 16ರ ಅಡಿ ಫ್ಲಿಪ್‌ಕಾರ್ಟ್ ವಿರುದ್ಧ ನ್ಯಾಯಿಕ ವಿಚಾರಣೆಯನ್ನು ಆರಂಭಿಸಿ ನೋಟಿಸ್ ನೀಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಫ್ಲಿಫ್‌ಕಾರ್ಟ್ ವಿದೇಶಿ ನೇರ ಹೂಡಿಕೆ ನೀತಿ - 2010ರ ಅನುಪಾಲನೆಯನ್ನು ಮಾಡಿಲ್ಲ ಎನ್ನುವುದು ಜಾರಿ ನಿರ್ದೇಶನಾಲಯದ ಆರೋಪವಾಗಿದೆ. ಪ್ರಕರಣವು 2012-13ರಷ್ಟು ಹಳೆಯದಾಗಿದ್ದು ಈ ಕುರಿತ ನೋಟಿಸ್ ಅನ್ನು ಆ.5, 2021ರಂದು ನೀಡಲಾಗಿದೆ ಎಂದಿರುವ ಬನ್ಸಲ್ ಈ ಸುದೀರ್ಘ ವಿಳಂಬವನ್ನು ಪ್ರಶ್ನಿಸಿದ್ದಾರೆ.