ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿರುವ ಸಂತ್ರಸ್ತೆಯ ಪೋಷಕರು ತಮಗೆ ಹಾಗೂ ಪ್ರಕರಣದ ಸಾಕ್ಷಿಗಳಿಗೆ ರಕ್ಷಣೆ ಒದಗಿಸುವಂತೆ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಇದೇ ವೇಳೆ, ಘಟನೆಯ ಸಂಬಂಧ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆಸಲು ಸಹ ಅರ್ಜಿದಾರರಾದ ಪೋಷಕರು ಕೋರಿದ್ದಾರೆ.
ತಾವು ಸಮಾಜದ ಅತಿ ಬಡ ವರ್ಗದಿಂದ ಬಂದಿದ್ದು ಸಂತ್ರಸ್ತೆಯು ತಮ್ಮ ಒಬ್ಬಳೇ ಮಗಳು ಎಂದು ಪೋಷಕರು ಅರ್ಜಿಯಲ್ಲಿ ತಿಳಿಸಿದ್ದಾರೆ. ಆರೋಪಿಗಳು ಘಟನೆಯ ಸಂಬಂಧ ಪೊಲೀಸರಿಗೆ ತಿಳಿಸದಂತೆ ಬೆದರಿಕೆಯೊಡ್ಡಿದ್ದಲ್ಲದೆ, ರೂ.20 ಸಾವಿರ ಹಣವನ್ನು ನೀಡಲು ಮುಂದಾದರು ಎಂದು ವಿವರಿಸಲಾಗಿದೆ. ಅಲ್ಲದೆ, ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಾಗ ಅವರ ಸಂಪೂರ್ಣ ಗಮನವು ಪ್ರಕರಣವನ್ನು ಮುಚ್ಚಿಡುವುದರತ್ತ ಇತ್ತೇ ಹೊರತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದರೆಡೆಗಲ್ಲ ಎಂದು ಹೇಳಲಾಗಿದೆ.
ಇ ಕಾಮರ್ಸ್ ವೇದಿಕೆ ಅಮೆಜಾನ್ ಮೂಲಕ ಆರ್ಡರ್ ಮಾಡಲಾದ ವಸ್ತುವೊಂದು ಬಾರದ ಪರಿಣಾಮ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಮಿತ್ ಅಗರ್‌ವಾಲ್ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು ಥಾಣೆಯ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿದೆ. ಅಮೆಜಾನ್ ಉಪಾಧ್ಯಕ್ಷರ ವಿರುದ್ಧ ದೂರು ದಾಖಲಿಸಿರುವ ಮುಂಬೈ ಮೂಲದ ವಕೀಲ ಅಮೃತ್‌ಪಾಲ್ ಸಿಂಗ್ ಖಲ್ಸಾ ಅವರು ತಾವು ಅಮೆಜಾನ್ ಮುಖಾಂತರ ಆರ್ಡರ್ ಮಾಡಿದ್ದ ವಸ್ತುವು ತಮಗೆ ತಲುಪಿಲ್ಲ. ಈ ಬಗ್ಗೆ ಸಂಸ್ಥೆಗೆ ಇಮೇಲ್ ಮುಖೇನ ದೂರು ನೀಡಲಾಯಿತಾದರೂ ಸಮರ್ಪಕ ಪ್ರತಿಕ್ರಿಯೆ ದೊರೆಯಲಿಲ್ಲ ಎಂದಿದ್ದಾರೆ.
ಪ್ರಕರಣದ ಸಂಬಂಧ ತಮ್ಮ ದೂರನ್ನು ಸ್ವೀಕರಿಸಲು ಉಲ್ಲಾಸ್‌ನಗರ್‌ನ ಪೊಲೀಸ್ ಠಾಣೆಯಲ್ಲಿ ನಿರಾಕರಿಸಲಾಯಿತು. ಒಂದು ವೇಳೆ ಹೀಗೆ ಬಿಟ್ಟರೆ ಆರೋಪಿಗಳು ಇಂಥದ್ದೇ ಅಪರಾಧಗಳನ್ನು ಮಾಡುವ ಸಾಧ್ಯತೆ ಇದೆ ಎನ್ನುವ ಭಾವನೆ ತಮ್ಮಲ್ಲಿ ಮೂಡಿದೆ. ಹೀಗಾಗಿ, ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶಿಸುವಂತೆ ಅವರು ನ್ಯಾಯಾಲಯವನ್ನು ಕೋರಿದ್ದರು. ಕೋರ್ಟ್ ನಿರ್ದೇಶನದಂತೆ ದೂರು ದಾಖಲಿಸಿರುವ ಉಲ್ಲಾಸ್‌ನಗರ್ ಪೊಲೀಸ್ ಠಾಣೆಯ ಅಧಿಕಾರಿಗಳು ಅಗರ್‌ವಾಲ್ ಹಾಗೂ ಅಮೆಜಾನ್ ಮೂಲಕ ವಸ್ತುವನ್ನು ಮಾರಾಟ ಮಾಡಿದ್ದ ಮೂರನೇ ಪಕ್ಷಕಾರ ಸಂಸ್ಥೆಗೆ ಸಮನ್ಸ್ ಜಾರಿಗೊಳಿಸಿದ್ದಾರೆ.