ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-08-2021

>> ಶೂಟರ್‌ ನರೇಶ್‌ ಕುಮಾರ್‌ ಶಿಫಾರಸ್ಸಿಗೆ ಪ್ಯಾರಾಲಿಂಪಿಕ್ಸ್‌ ಸಮಿತಿಗೆ ಸುಪ್ರೀಂ ನಿರ್ದೇಶನ >> ನ್ಯಾಯಾಧಿಕರಣ ಸುಧಾರಣಾ ಮಸೂದೆ ಮಂಡನೆ; ಸುಪ್ರೀಂ ತೀರ್ಪಿಗೆ ವಿರುದ್ಧ ನಿಲುವು >> ಕುಂದ್ರಾ ಜಾಮೀನು ಮನವಿ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-08-2021

ಟೋಕಿಯೊ ಪ್ಯಾರಾಲಿಂಪಿಕ್ಸ್‌ಗೆ ಶೂಟರ್‌ ನರೇಶ್‌ ಕುಮಾರ್‌ ಶರ್ಮಾ; ಪ್ಯಾರಾಲಿಂಪಿಕ್ಸ್‌ ಸಮಿತಿಗೆ ನಿರ್ದೇಶಿಸಿದ ಸುಪ್ರೀಂ

ಪ್ರಸಕ್ತ ವರ್ಷದ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ 50 ಮೀಟರ್‌ ಶೂಟಿಂಗ್‌ ಸ್ಪರ್ಧೆಗೆ ನರೇಶ್‌ ಕುಮಾರ್‌ ಶರ್ಮಾ ಅವರನ್ನು ಹೆಚ್ಚುವರಿ ಕ್ರೀಡಾಪಟುವಾಗಿ ತಕ್ಷಣ ಶಿಫಾರಸ್ಸು ಮಾಡುವಂತೆ ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಗೆ ಸೋಮವಾರ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

Naresh Kumar Sharma, Supreme Court
Naresh Kumar Sharma, Supreme Court

“ಸದ್ಯ ಮೇಲ್ನೋಟಕ್ಕೆ ಪ್ರತಿವಾದಿ ಸಮಿತಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ಯಶಸ್ವಿಯಾಗಿದ್ದಾರೆ… ಈ ಸಂಬಂಧ ಅರ್ಜಿದಾರರನ್ನು ಪ್ಯಾರಾಲಿಂಪಿಕ್‌ನ 50 ಮೀಟರ್‌ ಶೂಟಿಂಗ್‌ ವಿಭಾಗದಲ್ಲಿ ಹೆಚ್ಚುವರಿ ಆಟಗಾರ ಅಥವಾ ಹೆಚ್ಚುವರಿ ಪ್ರವೇಶಾರ್ಥಿ ಎಂದು ತಕ್ಷಣ ಶಿಫಾರಸ್ಸು ಮಾಡುವಂತೆ ಸಮಿತಿಗೆ ನಿರ್ದೇಶನ ನೀಡಲಾಗುತ್ತಿದ್ದು, ಈ ಸಂಬಂಧ ಅನುಪಾಲನಾ ವರದಿಯನ್ನು ಮಂಗಳವಾರ ಸಲ್ಲಿಸಬೇಕು” ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ಬಿ ಆರ್‌ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಆದೇಶ ಮಾಡಿದೆ.

ನ್ಯಾಯಾಧಿಕರಣ ಸುಧಾರಣಾ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ; ಮತ್ತೆ ಸುಪ್ರೀಂ ತೀರ್ಪಿಗೆ ವಿರುದ್ಧವಾದ ಅಧಿಕಾರಾವಧಿ, ಅರ್ಹತಾ ವಯಸ್ಸು

ಅಧಿಕಾರಾವಧಿ ಸೇರಿದಂತೆ ನ್ಯಾಯಾಧಿಕರಣದ ಸದಸ್ಯರ ಸೇವಾ ಷರತ್ತುಗಳನ್ನು ಒಳಗೊಂಡ ನೂತನ ನ್ಯಾಯಾಧಿಕರಣ ಸುಧಾರಣ ಮಸೂದೆ 2021 ಅನ್ನು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಿದೆ. ನ್ಯಾಯಾಧಿಕರಣ ಸದಸ್ಯರ ಅಧಿಕಾರಾವಧಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಮಸೂದೆಯ ವಿವಿಧ ನಿಬಂಧನೆಗಳು ವಿರುದ್ಧವಾಗಿವೆ.

North and South Block
North and South Block

ಹಣಕಾಸು ಕಾಯಿದೆ 2017ಕ್ಕೆ ನೂತನವಾಗಿ ಸೆಕ್ಷನ್‌ 184 ಅನ್ನು ಸೇರಿಸಿ ಸದಸ್ಯರ ಅಧಿಕಾರಾವಧಿ ನಿರ್ಧರಿಸಿ, ಅಧ್ಯಕ್ಷರ ಅಧಿಕಾರಾವಧಿಯನ್ನು ನಾಲ್ಕು ವರ್ಷಗಳಿಗೆ ನಿಗದಿಗೊಳಿಸಿ ತಿದ್ದುಪಡಿ ಮಾಡಲಾಗಿದ್ದ ನ್ಯಾಯಾಧಿಕರಣ ಸುಧಾರಣಾ (ನೇರ್ಪಡಿಸುವಿಕೆ ಮತ್ತು ಸೇವಾ ಷರತ್ತುಗಳು) ಸುಗ್ರೀವಾಜ್ಞೆಯನ್ನು ಜುಲೈ 14ರಂದು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಸದಸ್ಯರಿಗೆ ನಾಲ್ಕು ವರ್ಷ ಅಧಿಕಾರಾವಧಿ ನಿಗದಿಗೊಳಿಸಿರುವ ಹಣಕಾಸು ಕಾಯಿದೆಯು ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರವನ್ನು ಪ್ರತ್ಯೇಕಿಸುವ ತತ್ವಗಳಿಗೆ ಎರವಾಗಿಯೂ, ಕಾನೂನು, ಸಂವಿಧಾನದ 14ನೇ ವಿಧಿ ಹಾಗೂ ಮದ್ರಾಸ್‌ ವಕೀಲರ ಪರಿಷತ್‌ನ ಮೂರನೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ವಿರುದ್ಧವಾಗಿಯೂ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸುವಂತೆ (ವಯೋಮಾನ ಕ್ರಮವಾಗಿ 70 ಮತ್ತು 67 ಮೀರದಂತೆ) ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

[ಅಶ್ಲೀಲ ಚಿತ್ರ ಪ್ರಕರಣ] ಪೊಲೀಸ್‌ ಕಸ್ಟಡಿಗೆ ನೀಡಿದ್ದನ್ನು ಪ್ರಶ್ನಿಸಿದ್ದ ಕುಂದ್ರಾ ಅರ್ಜಿಯ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್‌

ಅಶ್ಲೀಲ ಚಿತ್ರ ದಂಧೆಗೆ ಸಂಬಂಧಿಸಿದಂತೆ ತಮ್ಮನ್ನು ಪೊಲೀಸ್‌ ವಶಕ್ಕೆ ನೀಡಿರುವುದು ಮತ್ತು ಆನಂತರದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆದೇಶಗಳನ್ನು ಪ್ರಶ್ನಿಸಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸೋಮವಾರ ಬಾಂಬೆ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

Raj Kundra, Bombay High Court
Raj Kundra, Bombay High Court

ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಮನವಿಯು ಬಾಕಿ ಇದ್ದು, ಅದನ್ನು ಪರಿಗಣಿಸುವಂತೆ ತಮ್ಮ ಮನವಿಯಲ್ಲಿ ಕುಂದ್ರಾ ಕೋರಿದ್ದಾರೆ. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿ ಎ ಎಸ್‌ ಗಡ್ಕರಿ ಅವರಿದ್ದ ಏಕಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ. ಜುಲೈ 28ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜಾಮೀನು ಮನವಿಯನ್ನು ತಿರಸ್ಕರಿಸಿತ್ತು.

Related Stories

No stories found.
Kannada Bar & Bench
kannada.barandbench.com