ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 6-08-2021

>> ತಾಯಿಯ ಉಪನಾಮ ಹೊಂದಲು ಎಲ್ಲ ಮಕ್ಕಳಿಗೂ ಹಕ್ಕಿದೆ >> ನ್ಯಾಯಾಧಿಕರಣಗಳನ್ನ ಮುಚ್ಚಲು ಬಯಸಿದ್ದೀರಾ? ಸುಪ್ರೀಂ ಪ್ರಶ್ನೆ >> ತಳೋಜಾ ಜೈಲಿನ ಬಗ್ಗೆ ದೂರುತ್ತಿದ್ದ ಆರೋಪಿಗಳು ಅಲ್ಲೇ ಉಳಿಯಲು ಬಯಸುತ್ತಿರುವುದೇಕೆ ಎಂದು ಕೇಳಿದ ಬಾಂಬೆ ಹೈಕೋರ್ಟ್
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 6-08-2021

ತಂದೆಯಂದಿರು ಪುತ್ರಿಯರ ಮೇಲೆ ಪಾರುಪತ್ಯ ಹೊಂದಿಲ್ಲ, ತಾಯಿಯ ಉಪನಾಮ ಹೊಂದಲು ಮಕ್ಕಳಿಗೆ ಹಕ್ಕಿದೆ: ದೆಹಲಿ ಹೈಕೋರ್ಟ್‌

ತನ್ನ ತಂದೆ/ತಾಯಿಯ ಹೆಸರನ್ನು ತನ್ನ ಉಪನಾಮವನ್ನಾಗಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಮಕ್ಕಳಿಗಿದೆ ಎಂದು ಶುಕ್ರವಾರ ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. “ತನ್ನ ಹೆಸರನ್ನೇ ಉಪನಾಮವನ್ನಾಗಿ ಬಳಸಬೇಕು ಎಂದು ಆದೇಶಿಸಲು ತಂದೆಯಂದಿರು ಪುತ್ರಿಯರ ಮೇಲೆ ಪಾರುಪತ್ಯ ಹೊಂದಿಲ್ಲ. ತನ್ನ ಉಪನಾಮೆಯ ಬಗ್ಗೆ ಅಪ್ರಾಪ್ತ ಪುತ್ರಿ ತೃಪ್ತಿ ಹೊಂದಿದ್ದರೆ ನಿಮಗೇನು ಸಮಸ್ಯೆ? ಎಂದು ನ್ಯಾಯಮೂರ್ತಿ ರೇಖಾ ಪಲ್ಲಿ ಪ್ರಶ್ನಿಸಿದ್ದು, ಅರ್ಜಿ ವಿಚಾರಣೆಗೆ ನಿರಾಕರಿಸಿದರು.

Delhi High Court
Delhi High Court

ಪುತ್ರಿಯು ಅಪ್ರಾಪ್ತೆಯಾಗಿದ್ದು, ತನ್ನಷ್ಟಕ್ಕೆ ತಾನೇ ಇಂಥ ವಿಚಾರಗಳನ್ನ ನಿರ್ಧರಿಸುವುದಿಲ್ಲ ಎಂದು ಅರ್ಜಿದಾರ ತಂದೆಯ ಪರ ವಕೀಲ ಅನೂಜ್ ಕುಮಾರ್‌ ರಂಜನ್‌ ವಾದಿಸಿದರು. ಪತಿಯನ್ನು ತೊರೆದಿರುವ ಪತ್ನಿಯು ಪುತ್ರಿಯ ಹೆಸರನ್ನು ಶ್ರೀವಾಸ್ತವ ಎಂಬುದರ ಬದಲಿಗೆ ಸೆಕ್ಸೇನಾ ಎಂದು ಬದಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಲಾಯಿತು. ತಂದೆಯ ಉಪನಾಮ ಸೇರಿಸಿ ಎಲ್‌ಐಸಿ ವಿಮೆ ಮಾಡಿಸಲಾಗಿದೆ. ಒಂದೊಮ್ಮೆ ಬಾಲಕಿಯ ಹೆಸರು ಬದಲಿಸಿದರೆ ಅದನ್ನು ಕ್ಲೇಮು ಮಾಡಿಕೊಳ್ಳುವುದು ಕಷ್ಟವಾಗಲಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಅರ್ಜಿಯಲ್ಲಿ ಅರ್ಹತೆಯಿಲ್ಲ ಎಂದ ಪೀಠವು ಪುತ್ರಿಯ ಶಾಲಾ ದಾಖಲಾತಿಯಲ್ಲಿ ತಂದೆಯ ಹೆಸರು ತೋರಿಸಲು ಅವರು ಸ್ವತಂತ್ರರು ಎಂದು ಹೇಳಿ ಮನವಿ ವಜಾ ಮಾಡಿತು.

ನ್ಯಾಯಾಧಿಕರಣಗಳನ್ನು ಮುಂದುವರಿಸಲು ಬಯಸಿದ್ದೀರೋ ಅಥವಾ ಮುಚ್ಚಲು ಬಯಸಿದ್ದೀರೋ? ಸುಪ್ರೀಂ ಕೆಂಡಾಮಂಡಲ

ದೇಶಾದ್ಯಂತ ಇರುವ ನ್ಯಾಯಾಧಿಕರಣಗಳಲ್ಲಿನ ಖಾಲಿ ಸ್ಥಾನ ಭರ್ತಿ ಮಾಡುವುದು ವಿಳಂಬವಾಗುತ್ತಿರುವುದಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ಗಂಭೀರ ಆಕ್ಷೇಪ ಎತ್ತಿದೆ. ಸ್ಥಾನ ಭರ್ತಿ ಮಾಡದಿರುವುದರಿಂದ ಅವುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುತ್ತಿದ್ದು, ಜನರಿಗೆ ಕಾನೂನು ಪರಿಹಾರ ದೊರೆಯುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ತುರ್ತಾಗಿ ಕ್ರಮಕೈಗೊಳ್ಳದಿದ್ದರೆ ಕೇಂದ್ರ ಸರ್ಕಾರದ ಅತ್ಯುನ್ನತ ಅಧಿಕಾರಿಗಳಿಗೆ ಸಮನ್ಸ್‌ ಜಾರಿಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಎಚ್ಚರಿಸಿದರು.

CJI NV Ramana and Justice Surya Kant
CJI NV Ramana and Justice Surya Kant

“ನಿಮ್ಮ ನಿಲುವು ಏನು ಎಂಬುದು ನಮಗೆ ತಿಳಿದಿಲ್ಲ – ನ್ಯಾಯಾಧಿಕರಣ ಮುಂದುವರಿಸಬೇಕೆ ಅಥವಾ ಅವುಗಳನ್ನು ಮುಚ್ಚಬೇಕೆ?” ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಸಿಜೆಐ ಪ್ರಶ್ನಿಸಿದರು. ನ್ಯಾಯಾಧಿಕರಣಗಳ ವಿವರ ಮತ್ತು ಅಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ತುರ್ತಾಗಿ ಕ್ರಮಕೈಗೊಳ್ಳುವಂತೆ ಆದೇಶಿಸಲಾಗಿದೆ. ಇಲ್ಲವಾದರೆ ಸರ್ಕಾರದ ಅತ್ಯುನ್ನತ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕಾಗುತ್ತದೆ ಎಂದು ಸಿಜೆಐ ಹೇಳಿದರು. “ಅದರ ಅಗತ್ಯವಿಲ್ಲ. ನಮಗೆ ಹತ್ತು ದಿನಗಳ ಕಾಲಾವಕಾಶ ನೀಡಿ” ಎಂದು ಮೆಹ್ತಾ ಪೀಠಕ್ಕೆ ಮನವಿ ಮಾಡಿದರು. ವಿಚಾರಣೆಯನ್ನು ಆಗಸ್ಟ್‌ 16ಕ್ಕೆ ಮುಂದೂಡಲಾಗಿದೆ.

ತಳೋಜಾ ಜೈಲಿನ ಬಗ್ಗೆ ದೂರುತ್ತಿದ್ದ ಅರೋಪಿಗಳು ಈಗ ಅಲ್ಲೇ ಉಳಿಯಲು ಬಯಸುತ್ತಿರುವುದೇಕೆ? ಬಾಂಬೆ ಹೈಕೋರ್ಟ್‌ ಪ್ರಶ್ನೆ

ತಳೋಜಾ ಕೇಂದ್ರ ಕಾರಾಗೃಹದಿಂದ ಭೀಮಾ ಕೋರೆಗಾಂವ್ ಆರೋಪಿಗಳನ್ನು ಮುಂಬೈ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸುವ ನಿರ್ಣಯದ ವಿಚಾರವಾಗಿ ಮಧ್ಯಂತರ ಪರಿಹಾರ ಕೋರಿದ್ದ ಆರೋಪಿಗಳ ಮನವಿಯನ್ನು ಆಲಿಸಲು ಬಾಂಬೆ ಹೈಕೊರ್ಟ್‌ ಶುಕ್ರವಾರ ನಿರಾಕರಿಸಿತು. ಸರ್ಕಾರವು ಈ ಸಂಬಂಧ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸದೆ ಮಧ್ಯಂತರ ಪರಿಹಾರ ನೀಡಲಾಗದು ಎಂದು ನ್ಯಾಯಾಲಯ ಹೇಳಿತು.

Anand Teltumbde, Surendra Gadling, Sudhir Dhawale, Bombay High Court
Anand Teltumbde, Surendra Gadling, Sudhir Dhawale, Bombay High Court

ಪ್ರಕರಣದಲ್ಲಿ ಆರೋಪಿಯಾಗಿರುವ ಸಂಶೋಧಕ ಮತ್ತು ಸಾರ್ವಜನಿಕ ಕಾರ್ಯಕರ್ತ ಮಹೇಶ್‌ ರಾವತ್‌ ಮತ್ತು ಡಾ. ಆನಂದ್‌ ತೇಲ್ತುಂಬ್ಡೆ, ಸುರೇಂದ್ರ ಗಾಡ್ಲಿಂಗ್‌ ಮತ್ತು ಸುಧೀರ್‌ ಧವಳೆ ಅವರ ಸಮೀಪದ ಸಂಬಂಧಿಕರು ಸಲ್ಲಿಸಿರುವ ಎರಡು ಮನವಿಗಳ ವಿಚಾರಣೆಯನ್ನು ಪೀಠ ನಡೆಸಿತು. ಒಂದು ಕಡೆ ತಮ್ಮ ವರ್ಗಾವಣೆ ಪ್ರಶ್ನಿಸಿ ಆರೋಪಿಗಳು ಮನವಿ ಸಲ್ಲಿಸಿದ್ದು, ಮತ್ತೊಂದು ಕಡೆ ನಿರಂತರವಾಗಿ ತಳೋಜಾ ಕೇಂದ್ರ ಕಾರಾಗೃಹದಲ್ಲಿನ ಅಧಿಕಾರಿಗಳು ತಮ್ಮನ್ನು ನಡೆಸುಕೊಳ್ಳುವುದರ ಬಗ್ಗೆ ದೂರುತ್ತಾರೆ ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎನ್‌ ಜೆ ಜಮಾದಾರ್‌ ಅವರು ಹೇಳಿದ್ದಾರೆ. “ತಲೋಜಾ ಜೈಲಿನಲ್ಲಿ ಉಳಿಯುವುದರ ಬಗ್ಗೆ ಆರೋಪಿಗಳು ಯಾವಾಗಲೂ ದೂರುತ್ತಾರೆ. ಜೈಲು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂಬ ಆರೋಪ ಮಾಡಲಾಗಿದೆ. ಕೈದಿಗಳ ಪ್ರಮಾಣ ಹೆಚ್ಚಿದೆ ಎನ್ನಲಾಗಿದೆ. ಇಂಥ ಹಲವು ಆರೋಪಗಳನ್ನು ಅಧಿಕಾರಿಗಳ ವಿರುದ್ಧ ಈ ಹಿಂದೆ ಮಾಡಲಾಗಿತ್ತು. ಈಗ ಅಲ್ಲೇ ಉಳಿಯಬೇಕು ಎಂದು ಏಕೆ ಹೇಳುತ್ತಿದ್ದೀರಿ?” ಎಂದು ನ್ಯಾ. ಶಿಂಧೆ ಪ್ರಶ್ನಿಸಿದರು.

Related Stories

No stories found.
Kannada Bar & Bench
kannada.barandbench.com