ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 25-09-2021

>> ಪ್ರಕರಣಗಳನ್ನು ದಾಖಲಿಸಲು ನೀಡಲಾಗಿದ್ದ ಕಾಲಮಿತಿಯ ಅವಧಿಯ ವಿಸ್ತರಣೆ ಅಕ್ಟೋಬರ್‌ 2, 2021ಕ್ಕೆ ಅಂತ್ಯ: ಸುಪ್ರೀಂ ಕೋರ್ಟ್‌ >> ಲೋಕಜನಶಕ್ತಿ ಸಂಸದ ಪ್ರಿನ್ಸ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಿದ ದೆಹಲಿ ನ್ಯಾಯಾಲಯ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 25-09-2021

ಪ್ರಕರಣಗಳನ್ನು ದಾಖಲಿಸಲು ನೀಡಲಾಗಿದ್ದ ಕಾಲಮಿತಿಯ ಅವಧಿಯ ವಿಸ್ತರಣೆ ಅಕ್ಟೋಬರ್‌ 2, 2021ಕ್ಕೆ ಅಂತ್ಯ: ಸುಪ್ರೀಂ ಕೋರ್ಟ್‌

ಕೋವಿಡ್‌ ಸಾಂಕ್ರಾಮಿಕತೆಯ ಕಾರಣದಿಂದಾಗಿ ಪ್ರಕರಣಗಳನ್ನು ದಾಖಲಿಸಲು ಇರುವ ಕಾಲಮಿತಿಯನ್ನು ವಿಸ್ತರಿಸಿದ್ದ ಸುಪ್ರೀಂ ಕೋರ್ಟ್‌ ಇದೀಗ ಆ ವಿಸ್ತರಣೆಯನ್ನು ಅಕ್ಟೋಬರ್‌ 2, 2021ಕ್ಕೆ ಅಂತ್ಯಗೊಳಿಸಲು ಮುಂದಾಗಿದೆ. ಇದರಿಂದಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಮೇಲ್ಮನವಿ ಸಲ್ಲಿಸಬೇಕಿರುವ ಪ್ರಕರಣಗಳು, ಆದೇಶಗಳು, ಅರ್ಜಿಗಳಿಗೆ ಸಂಬಂಧಿಸಿದ ಕಾಲಮಿತಿಯು ಅಕ್ಟೋಬರ್‌ 3, 2021ರಿಂದ ಮತ್ತೆ ಚಾಲನೆಯಾಗಲಿದೆ.

ಕಾಲಮಿತಿಯೊಳಗೆ ಸಲ್ಲಿಸಬೇಕಿರುವ ಪ್ರಕರಣಗಳ ಕಾಲಾವಧಿಯನ್ನು ಲೆಕ್ಕ ಮಾಡುವಾಗ ಮಾರ್ಚ್‌ 15, 2020 ರಿಂದ ಅಕ್ಟೋಬರ್ 2, 2021ರ ವರೆಗಿನ ಅವಧಿಯನ್ನು ಹೊರಗಿರಿಸಲಾಗುವುದು. ಈ ಅವಧಿಯನ್ನು ಹೊರಗಿರಿಸಿದ ನಂತರ ಮಾರ್ಚ್ 15, 2020ಕ್ಕೆ ಇದ್ದಂತೆ ಕಾಲಮಿತಿಯೇನಾದರೂ ಉಳಿದಿದ್ದರೆ ಅದು ಅಕ್ಟೋಬರ್‌ 3, 2021ರಿಂದ ಲಭ್ಯವಾಗಲಿದೆ. ಒಂದೊಮ್ಮೆ ಈ ಮಿತಿಯು 90 ದಿನಗಳಿಗಿಂತ ಕಡಿಮೆ ಇದ್ದರೆ 90 ದಿನದ ಕಾಲಾವಕಾಶವು ಪ್ರಕರಣ ದಾಖಲಿಕೆಗೆ ಸಿಗಲಿದೆ. ಅದಕ್ಕಿಂತ ಹೆಚ್ಚೇನಾದರೂ ಇದ್ದ ಪಕ್ಷದಲ್ಲಿ ಎಷ್ಟು ಮಿತಿಯು ಬಾಕಿ ಉಳಿದಿರುತ್ತದೋ ಅಷ್ಟು ಲಭ್ಯವಾಗಲಿದೆ.

ಲೋಕಜನಶಕ್ತಿ ಸಂಸದ ಪ್ರಿನ್ಸ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಬಿಹಾರದ ಸಮಸ್ತಿಪುರ ಕ್ಷೇತ್ರದ ಸಂಸದ ಪ್ರಿನ್ಸ್ ರಾಜ್‌ ಅವರಿಗೆ ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡುವ ವೇಳೆ ವಿಶೇಷ ನ್ಯಾಯಾಧೀಶ ವಿಕಾಸ್‌ ಧುಲ್‌ ಅವರು ರಾಜ್‌ ಅವರು “ಅಪರಾಧರಹಿತ ಹಿನ್ನೆಲೆ”ಯನ್ನು ಹೊಂದಿದ್ದಾರೆ. ಅಲ್ಲದೆ, ಅವರು ಸಂಸದರಾಗಿರುವುದರಿಂದ ಸಮಾಜದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದು ನ್ಯಾಯಿಕ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟರು.

LJP MP Prince Raj and Rouse Avenue Court
LJP MP Prince Raj and Rouse Avenue Court

ದೂರುದಾರೆಯು ಸಂಸದರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಅಸಹಜವೆನಿಸುವಷ್ಟು ವಿಳಂಬ ಮಾಡಿರುವುದನ್ನು ಸಹ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಸಂಸದರನ್ನು ದೂರುದಾರೆಯು ಸುಳ್ಳು ಆರೋಪದಲ್ಲಿ ಸಿಲುಕಿಸಲು ಪ್ರಯತ್ನಿಸಿರಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಸಂಸದರು ದೂರುದಾರೆಯ ವಿರುದ್ಧ ಮೊದಲು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ದೂರುದಾರೆಯು ಸಂಸದರ ವಿರುದ್ಧ ಪ್ರತಿದೂರು ದಾಖಲಿಸಿ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿರಬಹುದಾದ ಸಾಧ್ಯತೆಯನ್ನೂ ನ್ಯಾಯಾಲಯವು ಪರಿಗಣಿಸಿತು.

Related Stories

No stories found.
Kannada Bar & Bench
kannada.barandbench.com