ದೆಹಲಿಯ ದೇವಸ್ಥಾನದ ಆವರಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ 76 ವರ್ಷದ ಅರ್ಚಕನಿಗೆ ದೆಹಲಿಯ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಸಂತ್ರಸ್ತರು ಮತ್ತು ಸಾರ್ವಜನಿಕರು ಇರಿಸಿದ್ದ ನಂಬಿಕೆ ಮತ್ತು ಗೌರವಕ್ಕೆ ಅರ್ಚಕ ದ್ರೋಹ ಬಗೆದಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಹೀಗೆ ಶಿಕ್ಷೆ ವಿಧಿಸುವಾಗ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವಿಜೇತಾ ಸಿಂಗ್ ರಾವತ್ ಅವರು ಅಮೆರಿಕದ ದಿವಂಗತ ಕವಿ ಮಾಯಾ ಏಜೆಂಲೊ ಅವರು ತಮ್ಮ ಆತ್ಮಚರಿತ್ರೆ ʼಐ ನೋ ವೈ ದ ಕೇಜ್ಡ್ ಬರ್ಡ್ ಸಿಂಗ್ʼ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅತ್ಯಾಚಾರದ ದಾರುಣ ಸಂದರ್ಭವನ್ನು ಆ ಸಾಲುಗಳು ವಿವರಿಸುತ್ತವೆ: Then there was the pain. A breaking and entering when even the senses are torn apart. The act of rape on an eight-year-old body is a matter of the needle giving because the camel can’t. The child gives, because the body can, and the mind of the violator cannot.”
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾ ಎಸಗಿ ಆಕೆಯ ಕುಟುಂಬವನ್ನು ಮತಾಂತರಗೊಳಿಸಲು ಯತ್ನಿಸಿದ್ದ ಅಬ್ದುಲ್ ರೆಹಮಾನ್ ಎಂಬ ವ್ಯಕ್ತಿಗೆ ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ನಿರಾಕರಿಸಿದೆ. ಆರೋಪ ತುಂಬಾ ಗಂಭೀರ ಸ್ವರೂಪದ್ದಾಗಿದ್ದು ಜಾಮೀನು ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ನ್ಯಾಯಮೂರ್ತಿ ಅಜಿತ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.
ಅರ್ಜಿದಾರನ ಮನೆಯೊಳಗೆ ನುಗ್ಗಿ ಅವರ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಆರೋಪಿ ಅತ್ಯಾಚಾರ ಎಸಗಿದ. ಅಷ್ಟು ಮಾತ್ರವಲ್ಲದೆ ಅಪ್ರಾಪ್ತೆಯ ವೀಡಿಯೊ ಚಿತ್ರಿಸಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ. ಅಪ್ರಾಪ್ತೆಯ ಕುಟುಂಬ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರಷ್ಟೇ ವೀಡಿಯೊ ಡಿಲೀಟ್ ಮಾಡುವುದಾಗಿ ತಿಳಿಸಿದ ಎಂದು ಅರ್ಜಿದಾರರು ಆರೋಪಿಸಿದ್ದರು.
ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬಿಯನ್ಸ್ ಮಾಲ್ ಮಾಲೀಕ ರಾಜ್ ಸಿಂಗ್ ಗೆಹಲೋತ್‌ಗೆ ದೆಹಲಿಯ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಹಗರಣವನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡಿತ್ತು.
ಕ್ರಿಮಿನಲ್ ಪಿತೂರಿ ಮತ್ತು ಹೋಟೆಲ್ ನಿರ್ಮಾಣಕ್ಕಾಗಿ ಮಂಜೂರಾದ ಸಾಲ ವಂಚಿಸಿದ ಆರೋಪ ಅವರ ಮೇಲಿದೆ. ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಅವರು ಹಣವನ್ನು ದೋಚಿ ಸಹವರ್ತಿ ಕಂಪೆನಿಗಳ ಜಾಲದ ಮೂಲಕ ಹರಿಬಿಟ್ಟರು ಎಂದು ಆರೋಪಿಸಲಾಗಿದೆ.