ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 08-12-2020

>> ಚೆನ್ನೈ-ಸೇಲಂ ಅಷ್ಟಪಥ ಹೆದ್ದಾರಿ ನಿರ್ಮಾಣ ಕಾಮಗಾರಿ >> ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹಂಗಾಮಿ ಸಿಜೆ ನೇಮಕ >> ಭೀಮಾ ಕೋರೆಗಾಂವ್ ಪ್ರಕರಣ >> ಭೂಗಳ್ಳರಿಂದ ನಕಲಿ ದಾಖಲೆ ಸೃಷ್ಟಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 08-12-2020

ಚೆನ್ನೈ-ಸೇಲಂ ಅಷ್ಟಪಥ ಹೆದ್ದಾರಿಗೆ ಸುಪ್ರೀಂ ಕೋರ್ಟ್‌ ಭಾಗಶಃ ಸಮ್ಮತಿ

ಚೆನ್ನೈ-ಸೇಲಂ ಅಷ್ಟಪಥ ಹೆದ್ದಾರಿ ನಿರ್ಮಾಣ ಕಾಮಗಾರಿಯ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಚಾಲನೆ ನೀಡಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಆದರೆ, ಇದೇ ವೇಳೆ ಪರಿಸರ ಪರವಾನಗಿಗೆ ಸಂಬಂಧಿಸಿದ ಸರಿತಪ್ಪಿನ ಬಗ್ಗೆ ತಾನು ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

Supreme Court
Supreme Court

ಚೆನ್ನೈ-ಸೇಲಂ ಅಷ್ಟಪಥ ಹೆದ್ದಾರಿಯು ರೂ.10 ಸಾವಿರ ಕೋಟಿಯ ಯೋಜನೆಯಾಗಿದ್ದು ಪರಿಸರ ಸಂಬಂಧಿ ಆಕ್ಷೇಪಗಳ ಹಿನ್ನೆಲೆಯಲ್ಲಿ ಮದ್ರಾಸ್‌ ಹೈಕೋರ್ಟ್‌ ಯೋಜನೆಯನ್ನು 2019ರಲ್ಲಿ ಬದಿಗೆ ಸರಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು. ಇದೀಗ ಯೋಜನೆಗೆ ಸಂಬಂಧಿಸಿದಂತೆ ಭೂ ವಶಪಡಿಸಿಕೊಳ್ಳುವಿಕೆಗೆ ಕೇಂದ್ರ ಸರ್ಕಾರಕ್ಕೆ ಅನುಮತಿ ದೊರೆತಿದೆ. ಆದರೆ, ತನ್ನ ಸಮ್ಮತಿಯು ಪರಿಸರ ಪರವಾನಗಿಯ ಕುರಿತ ಸರಿತಪ್ಪುಗಳ ಅಭಿಪ್ರಾಯವಲ್ಲ. ಪರಿಸರ ಸಂಬಂಧಿ ವಿಚಾರವಾಗಿ ಸೂಕ್ತ ವೇದಿಕೆಯಲ್ಲಿ ಸಂಬಂಧಪಟ್ಟವರು ಮನವಿ ಮಾಡುವ ಸ್ವಾತಂತ್ರ್ಯವಿದೆ ಎನ್ನುವ ಇಂಗಿತ ವ್ಯಕ್ತಪಡಿಸಿತು.

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಾಜೇಶ್ ಬಿಂದಾಲ್‌ ಅವರ ನೇಮಕ

ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಳಿಸಲಾಗಿದೆ. ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೀತಾ ಮಿತ್ತಲ್‌ ಅವರು ಇಂದು ನಿವೃತ್ತಿ ಹೊಂದಿದ್ದು ಅವರ ಜಾಗಕ್ಕೆ ನ್ಯಾ.ರಾಜೇಶ್‌ ಬಿಂದಾಲ್‌ ಅವರ ನೇಮಕವಾಗಿದೆ.

Rajesh Bindal
Rajesh Bindal

ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಅತಿ ಹಿರಿಯ ನ್ಯಾಯಮೂರ್ತಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳೆರಡಕ್ಕೂ ಇರುವ ಸಾಮಾನ್ಯ ಹೈಕೋರ್ಟ್‌ ಇದಾಗಿದೆ.

ಉದ್ದೇಶಪೂರ್ವಕ ಮತ್ತು ವಿಕೃತ ಕ್ರೌರ್ಯದ ನಡವಳಿಕೆ: ಗೌತಮ್‌ ನವಲಾಖ ಅವರಿಗೆ ಕನ್ನಡಕ ನಿರಾಕರಣೆ - ಸಂಗಾತಿ ಸಬಾ ಹುಸೈನ್‌ ಹೇಳಿಕೆ

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿತರಾಗಿ ಬಂಧಿತರಾಗಿರುವ ಗೌತಮ್‌ ನವಲಾಖ ಅವರಿಗೆ ಕಳುಹಿಸಿಕೊಡಲಾಗಿದ್ದ ಕನ್ನಡಕದ ಪಾರ್ಸಲ್‌ ಅನ್ನು ಸ್ವೀಕರಿಸಲು ತಲೋಜಾ ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ನವಲಾಖ ಅವರ ಸಂಗಾತಿ ಸಬಾ ಹುಸೈನ್‌ ಆರೋಪಿಸಿದ್ದಾರೆ.

Gautam Navlakha
Gautam Navlakha

2020ರ ಮೇನಲ್ಲಿ ಬಂಧಿತರಾಗಿರುವ ನವಲಾಖ ಅವರ ಹಳೆಯ ಕನ್ನಡಕ ಜೈಲಿನಲ್ಲಿ ಕಳವಾಗಿದೆ. "ಜೈಲು ವಾತಾರವರಣದ ಬಗ್ಗೆ ಅಧಿಕಾರಿಗಳು ನೀಡುವ ಹೇಳಿಕೆಗಳು ಮತ್ತು ಕೈದಿಗಳ ಹಕ್ಕುಗಳ ಕುರಿತ ಸಾಂವಿಧಾನಿಕ ನಿರ್ದೇಶನಗಳು ಇವೆಲ್ಲವನ್ನೂ ಅಣಕಿಸುವಂತೆ ಜೈಲು ಅಧಿಕಾರಿಗಳ ಉದ್ದೇಶಪೂರ್ವಕವಾದ, ವಿಕೃತ ಕ್ರೌರ್ಯವಿದೆ” ಎಂದು ಹುಸೈನ್‌ ಹೇಳಿದ್ದಾರೆ. 70 ವರ್ಷದ ನವಲಾಖ ಅವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರ ಕನ್ನಡಕವನ್ನು ನವೆಂಬರ್‌ 27ರಂದು ಕಳವು ಮಾಡಲಾಗಿದೆ. “ಕನ್ನಡಕವಿಲ್ಲದೆ ಅವರು ಬಹುತೇಕವಾಗಿ ದೃಷ್ಟಿಹೀನರೇ ಸರಿ,” ಹಾಗಾಗಿ, ಇದನ್ನು ತುರ್ತುಪರಿಸ್ಥಿತಿ ಎಂದು ಪರಿಗಣಿಸಲು ಹುಸೈನ್‌ ಹೇಳಿದ್ದಾರೆ.

ಭೂಮಿ ಕಬಳಿಸಲು ವಕೀಲರು ಎಂದುಕೊಂಡ ಕೆಲವರು “ಹಣಪಡೆದ ಗೂಂಡಾ”ಗಳ ರೀತಿ ವರ್ತಿಸುತ್ತಿರುವುದು ದುರದೃಷ್ಟಕರ: ಮದ್ರಾಸ್‌ ಹೈಕೋರ್ಟ್‌

ತಮಿಳುನಾಡಿನಲ್ಲಿ ಭೂಮಿ ಕಬಳಿಸುವ ಉದ್ದೇಶದಿಂದ ವಕೀಲರು ಎಂದುಕೊಂಡ ಕೆಲವರು ಹಣಪಡೆದ ಗೂಂಡಾಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಬೇಸರ ವ್ಯಕ್ತಪಡಿಸಿದೆ.

Madras High Court, land grabbing
Madras High Court, land grabbing

ಕಾನೂನುವಿರೋಧಿ ಶಕ್ತಿಗಳ ಜೊತೆಗೆ ವಕೀಲರೆಂದು ಕರೆದುಕೊಳ್ಳುವ ಕೆಲವರು ಬಿಳಿ ಮತ್ತು ಕಪ್ಪು ಧಿರಿಸಿನೊಂದಿಗೆ ಕೈಜೋಡಿಸಿ "ಹಣಪಡೆದಿರುವ ಗೂಂಡಾಗಳಂತೆ" ವರ್ತಿಸುತ್ತಿರುವುದು ದುರದೃಷ್ಟಕರ ಎಂದು ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಮತ್ತು ಬಿ ಪುಗಳೇಂದಿ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿತು. ಕಳೆದ ಮೂರು ದಶಕಗಳಲ್ಲಿ ಭೂಕಬಳಿಕೆಗೆ ಸಂಬಂಧಿಸಿದ ಪ್ರಕರಣಗಳು ಏರುಗತಿಯಲ್ಲಿದ್ದು, ಇದನ್ನು ನಿಯಂತ್ರಿಸುವ ಸಂಬಂಧ ಆಂಧ್ರ ಪ್ರದೇಶ, ಗುಜರಾತ್‌, ಕರ್ನಾಟಕ, ಒಡಿಶಾ ಮತ್ತು ಗುಜರಾತ್‌ನಲ್ಲಿ ಜಾರಿಗೊಳಿಸಲಾಗಿರುವಂತೆ ವಿಶೇಷ ಕಾನೂನು ಜಾರಿಗೊಳಿಸುವ ಅಗತ್ಯವಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ತಮ್ಮ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂವಂಚಕರು ಕಬಳಿಸಿದ್ದಾರೆ ಎಂದು 90 ವರ್ಷದ ಮುತ್ತಯ್ಯ ಎಂಬುವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠವು ನಡೆಸಿತ್ತು.

Related Stories

No stories found.
Kannada Bar & Bench
kannada.barandbench.com