ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |11-1-2021

>> ವಕೀಲರ ಮೇಲೆ ಹಲ್ಲೆ: ದಾಖಲೆ ರೂಪದಲ್ಲಿ ವರದಿ ಸ್ವೀಕರಿಸಿದ ಅಲಾಹಾಬಾದ್‌ ಹೈಕೋರ್ಟ್ >> ಬಾಲ್ಯ ವಿವಾಹ ಅಸಿಂಧು, ಆಪ್‌ ಸರ್ಕಾರಕ್ಕೆ ನೋಟಿಸ್‌ ಜಾರಿ >> ಒಂದು ವರ್ಷದ ಎಲ್ಎಲ್ಎಂ ರದ್ದುಗೊಳಸಿದ ಬಿಸಿಐ ನಿರ್ಧಾರ ಪ್ರಶ್ನಿಸಿ ಸುಪ್ರೀಂನಲ್ಲಿ ಮನವಿ
Court collage
Court collage
Published on

ಎಟಾದಲ್ಲಿ ವಕೀಲರ ಮೇಲೆ ಹಲ್ಲೆ ಪ್ರಕರಣ: ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಆಗ್ರಹಿಸಿದ ಉತ್ತರ ಪ್ರದೇಶ ವಕೀಲರ ಪರಿಷತ್‌

ಉತ್ತರ ಪ್ರದೇಶದ ಎಟಾದ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ಮತ್ತು ಉತ್ತರ ಪ್ರದೇಶ ವಕೀಲರ ಪರಿಷತ್‌ ಸಲ್ಲಿಸಿದ ವರದಿಗಳನ್ನು ದಾಖಲೆಯ ರೂಪದಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಸ್ವೀಕರಿಸಿದೆ. ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಮತ್ತು ನ್ಯಾಯಮೂರ್ತಿ ಸೌರಭ್‌ ಶ್ಯಾಮ್‌ ಶಂಶೇರಿ ಅವರು ಪ್ರಕರಣದ ವಿಚಾರಣೆಯನ್ನು ಜನವರಿ 19ಕ್ಕೆ ನಿಗದಿಗೊಳಿಸಿದ್ದಾರೆ.

Visuals of the assault on the lawyer at Etah
Visuals of the assault on the lawyer at EtahImage source: Sabrang India

ಮುಚ್ಚಿದ ಲಕೋಟೆಯಲ್ಲಿ ವಕೀಲರ ಪರಿಷತ್ತು ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ. ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ದಳ ಅಥವಾ ಅಪರಾಧ ತನಿಖಾ ವಿಭಾಗದಿಂದ ತನಿಖೆ ನಡೆಸುವಂತೆ ಆಗ್ರಹಿಸಿದೆ. ಕೆಲವು ಫೋಟೊಗಳು ಮತ್ತು ಸಿಡಿಯ ಜೊತೆಗೆ ಕೆಲವು ದಾಖಲೆಗಳನ್ನು ಹೆಚ್ಚುವರಿಯಾಗಿ ಪರಿಷತ್ತು ನ್ಯಾಯಾಲಯಕ್ಕೆ ಸಲ್ಲಿಸಿದೆ. ಎಟಾದ ಸಿಜೆಎಂ ಸಲ್ಲಿಸಿರುವ ತನಿಖಾ ವರದಿಯ ಪ್ರತಿಯನ್ನು ರಾಜ್ಯ ವಕೀಲರ ಪರಿಷತ್‌ ಪ್ರತಿನಿಧಿಸುವ ವಕೀಲರು, ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ಪರಿಷತ್‌ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರಿಗೆ ನಾಳೆಯೊಳಗೆ ಸಲ್ಲಿಸುವಂತೆ ಪೀಠ ಸೂಚಿಸಿದೆ.

ಬಾಲ್ಯ ವಿವಾಹ ಆರಂಭದಿಂದಲೂ ಅಸಿಂಧು: ಆಪ್‌ ಸರ್ಕಾರದ ನಿಲುವು ಕೇಳಿದ ದೆಹಲಿ ಹೈಕೋರ್ಟ್‌

ರಾಷ್ಟ್ರ ರಾಜಧಾನಿಯಲ್ಲಿ ನಡೆಸಲಾದ ಬಾಲ್ಯ ವಿವಾಹಗಳು ಆರಂಭದಿಂದಲೂ ಅಸಿಂಧು ಎಂದು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಸೋಮವಾರ ದೆಹಲಿ ಸರ್ಕಾರ ಹಾಗೂ ಮಹಿಳಾ ಆಯೋಗಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿಗೊಳಿಸಿದೆ.

daughter
daughter

ಅರ್ಜಿದಾರೆ ಐಶಾ ಕುಮಾರಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಬಾಲ್ಯ ವಿವಾಹ ನಿಷೇಧ ಕಾಯಿದೆ-2006ರ ಸೆಕ್ಷನ್‌ 3(1) ಅಡಿ ಬಾಲ್ಯ ವಿವಾಹ ಅನೂರ್ಜಿತವಾಗಿದ್ದು, ಸಂವಿಧಾನದ 21ನೇ ವಿಧಿಯಡಿ ಅಧಿಕಾರದ ವ್ಯಾಪ್ತಿ ಮೀರಿದೆ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ. ಫೆಬ್ರವರಿ 12ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಒಂದು ವರ್ಷದ ಎಲ್‌ಎಲ್‌ಎಂ ರದ್ದುಗೊಳಸಿದ ಬಿಸಿಐ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆ

ಒಂದು ವರ್ಷದ ಎಲ್‌ಎಲ್‌ಎಂ ಕೋರ್ಸ್‌ ರದ್ದತಿ ಮತ್ತು ವಿದೇಶದಲ್ಲಿ ಪಡೆಯಲಾದ ಎಲ್‌ಎಲ್ಎಂ ಪದವಿಯವನ್ನು ಅಮಾನ್ಯಗೊಳಿಸಿರುವ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ವಿದ್ಯಾರ್ಥಿಯಾದ ತಮನ್ನಾ ಚಂದನ್‌ ಚಚ್ಲಾನಿ ಅವರು ಮನವಿ ಸಲ್ಲಿಸಿದ್ದಾರೆ.

BCI and Supreme Court
BCI and Supreme Court

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) 2013ರಲ್ಲಿ ರೂಪಿಸಿದ್ದ ಒಂದು ವರ್ಷದ ಕಾನೂನು ಸ್ನಾತಕೋತ್ತರ ಪದವಿ - ಎಲ್‌ಎಲ್‌ಎಂ ರದ್ದುಪಡಿಸಲು ಭಾರತೀಯ ವಕೀಲರ ಪರಿಷತ್ತು ನಿರ್ಧರಿಸಿತ್ತು. ನಾಲ್ಕು ಸೆಮಿಸ್ಟರ್‌ನ ಎರಡು ವರ್ಷಗಳ ಅವಧಿಗೆ ಕೋರ್ಸ್‌ ವಿಸ್ತರಿಸಲಾಗಿದೆ ಎಂದು ಬಿಸಿಐನ 2020ರ ಕಾನೂನು ಶಿಕ್ಷಣ (ಸ್ನಾತಕೋತ್ತರ, ಡಾಕ್ಟೋರಲ್‌, ಎಕ್ಸಿಕ್ಯುಟೀವ್‌, ವೊಕೇಷನಲ್‌, ಕ್ಲಿನಿಕಲ್‌ ಮತ್ತಿತರ ನಿರಂತರ ಶಿಕ್ಷಣ) ನಿಯಮಾವಳಿಗಳಲ್ಲಿ ತಿಳಿಸಲಾಗಿತ್ತು. ಅಲ್ಲದೆ ಎಲ್‌ಎಲ್‌ಎಂಗೆ ಪ್ರವೇಶ ಪಡೆಯಲು ಮೂರು ವರ್ಷ ಮತ್ತು ಐದು ವರ್ಷದ ಎಲ್‌ಎಲ್‌ಬಿ ಪದವಿ ಪಡೆದಿರುವುದು ಕಡ್ಡಾಯ ಎಂದು ಕೂಡ ಅದು ತಿಳಿಸಿತ್ತು.

Kannada Bar & Bench
kannada.barandbench.com