ಹೊರದೇಶಗಳಲ್ಲಿ ಹುಟ್ಟಿದ ಭಾರತೀಯರ ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ ಭಾರತದ ಪ್ರಜೆಗಳಿಗಿರುವ ಹಕ್ಕುಗಳು, ಕರ್ತವ್ಯಗಳು, ಸ್ಥಾನಮಾನ ಇರಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಉದ್ದೇಶದಿಂದ ಓಐಸಿ (ಹೊರದೇಶಲ್ಲಿರುವ ಭಾರತೀಯ ಪೌರರು) ಕಾರ್ಡ್ ಹೊಂದಿರುವವರನ್ನು ಭಾರತೀಯ ಪ್ರಜೆಗಳು ಎಂದು ಪರಿಗಣಿಸಬೇಕು ಎಂದು ಹೇಳಿದೆ.
ಈ ನಿಲುವು ಪ್ರಾಚೀನ ಭಾರತದಲ್ಲಿ ವಸುದೈವ ಕುಟುಂಬಕಂ ಅಂದರೆ ಜಗತ್ತೇ ಒಂದು ಕುಟುಂಬ ಎಂಬುದಕ್ಕೆ ಪೂರಕವಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ಕರ್ನಾಟಕ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳ (ಪ್ರವೇಶಾತಿ ಮತ್ತು ಶುಲ್ಕ ನಿಗದಿ ನಿಯಂತ್ರಣ) ಕಾಯಿದೆ 2006ರ ಸೆಕ್ಷನ್ 2(1)(ಎನ್) ಅನ್ನು ಪೀಠವು ರದ್ದುಗೊಳಿಸಿದ್ದು, ಅನಿವಾಸಿ ಭಾರತೀಯರು (ಎನ್‌ಆರ್‌ಐ) ವ್ಯಾಪ್ತಿಗೆ ಹೊರದೇಶಲ್ಲಿರುವ ಭಾರತೀಯ ಪೌರರು ಅಥವಾ ಭಾರತದ ಕಾರ್ಡ್ ಹೊಂದಿರುವ ಹೊರದೇಶದಲ್ಲಿರುವ ಭಾರತೀಯ ಪೌರರು ಎಂಬ ಕಾರ್ಡ್ ಹೊಂದಿರುವವರು ಎಂದು ಸೇರ್ಪಡೆಗೊಳಿಸಿದೆ. ಪ್ರಪಂಚದಾದ್ಯಂತ ಇರುವ ವಲಸಿಗ ಭಾರತೀಯರು ತವರಿನ ಜೊತೆ ಕರುಳಬಳ್ಳಿಯ ಸಂಬಂಧ ಇಟ್ಟುಕೊಳ್ಳಲು ಪೌರತ್ವ ಕಾಯಿದೆಯಿಂದ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣದಲ್ಲಿ ಸಿಲುಕಿರುವ ರಿಪಬ್ಲಿಕ್ ಟಿವಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿಕಾಸ್ ಖಾನ್‌ಚಂದಾನಿ ಅವರಿಗೆ ಮುಂಬೈನ ಎಸ್‌ಪ್ಲೆನೇಡ್ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಮುಂಬೈ ಪೊಲೀಸರಿಂದ ಭಾನುವಾರ ಬಂಧಿಸಲ್ಪಟ್ಟಿದ್ದ ಖಾನ್‌ಚಂದಾನಿ ಅವರಿಗೆ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದೆ. ಬಂಧಿಸಲ್ಪಟ್ಟಿದ್ದ ಖಾನ್‌ಚಂದಾನಿ ಅವರನ್ನು ನ್ಯಾಯಾಲಯವು ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಮಾರನೇಯ ದಿನ ಖಾನ್‌ಚಂದಾನಿ ಅವರ ನಿರೀಕ್ಷಣಾ ಜಾಮೀನು ವಿಚಾರಣೆಗೆ ಬರುವುದಕ್ಕೂ ಮುನ್ನವೇ ಅವರನ್ನು ಬಂಧಿಸಿದ್ದಕ್ಕೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ ಇ ಕೋಥಲಿಕರ್ ಬೇಸರ ವ್ಯಕ್ತಪಡಿಸಿದ್ದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಡಾ. ಎಸ್ ಮುರುಳೀಧರ್ ಸೇರಿದಂತೆ ಐವರು ನ್ಯಾಯಮೂರ್ತಿಗಳನ್ನು ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನಾಗಿ (ಸಿಜೆ) ನೇಮಕ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ನ್ಯಾ. ಮುರುಳೀಧರ್ ಅವರನ್ನು ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ದೆಹಲಿ ಮೂಲದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ತೆಲಂಗಾಣ ಸಿಜೆಯಾಗಿ, ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾದ ಸಂಜೀಬ್ ಬ್ಯಾನರ್ಜಿ ಅವರನ್ನು ಮದ್ರಾಸ್ ಹೈಕೋರ್ಟ್ ಸಿಜೆಯಾಗಿ, ಅಲಾಹಾಬಾದ್ ಹೈಕೋರ್ಟ್ ನ್ಯಾ. ಪಂಕಜ್ ಮಿತ್ತಲ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಸಿಜೆಯಾಗಿ, ಉತ್ತರಾಖಂಡ ಹೈಕೋರ್ಟ್‌ನ ಸುಧಾಂಶು ಧುಲಿಯಾ ಅವರನ್ನು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿದೆ.
ದೇಶದ ವಿವಿಧ ನಾಲ್ಕು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆ) ವರ್ಗಾವಣೆ ಮಾಡುವ ಸಂಬಂಧ ಸೋಮವಾರ ಸುಪ್ರೀಂ ಕೋರ್ಟ್ ಶಿಫಾರಸ್ಸು ಮಾಡಿದೆ. ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾಣ್ ಅವರನ್ನು ಉತ್ತರಾಖಂಡದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಗಿದೆ. ಆಂಧ್ರ ಪ್ರದೇಶ ಮುಖ್ಯ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಅವರನ್ನು ಸಿಕ್ಕಿಂ ಹೈಕೋರ್ಟ್‌ಗೆ, ಅಲ್ಲಿನ ಸಿಜೆ ಎ ಕೆ ಗೋಸ್ವಾಮಿ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ವರ್ಗಾವಣೆ ಮಾಡಲಾಗಿದೆ.
ಆಡಳಿತ ಪಕ್ಷವನ್ನು ಉರುಳಿಸಲು ಆಂಧ್ರಪ್ರದೇಶ ಹೈಕೋರ್ಟ್ ಅನ್ನು ರಾಜಕೀಯ ಎದುರಾಳಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಜಗನ್ ಅವರ ವಿರುದ್ಧ ಸಲ್ಲಿಸಲಾದ ಮನವಿಯು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ರಫೀಕ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ವರ್ಗಾಯಿಸಲಾಗಿದೆ. ಸದ್ಯ ಮಧ್ಯಪ್ರದೇಶ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸಂಜಯ್ ಯಾದವ್ ಇದ್ದಾರೆ.