ಬೆಂಗಳೂರು ವಕೀಲರ ಸಂಘವು ವಕೀಲರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೋವಿಡ್ ಲಸಿಕೆ ವಿಶೇಷ ಅಭಿಯಾನ ಆರಂಭಿಸಿದೆ. ಇದೇ ಏ. 9 ಮತ್ತು 10ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 45 ವರ್ಷದ ತುಂಬಿದ ಸಂಘದ ಸದಸ್ಯರಾಗಿದ್ದು ವೃತ್ತಿ ನಿರತರಾಗಿರುವ ವಕೀಲರಿಗೆ ಕೋವಿಡ್ ಲಸಿಕೆ ನೀಡುವ ವಿಶೇಷ ಅಭಿಯಾನವನ್ನು ಹೈಕೋರ್ಟ್ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಇಂದಿರಾ ನಗರದಲ್ಲಿರುವ ಸರ್ ಸಿ ವಿ ರಾಮನ್ ಜನರಲ್ ಆಸ್ಪತ್ರೆ, ಮಲ್ಲೇಶ್ವರಂನಲ್ಲಿರುವ ಕೆ ಸಿ ಜನರಲ್ ಆಸ್ಪತ್ರೆ, ಯಲಹಂಕದಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಸಂಘದ ಸದಸ್ಯರು ಆಧಾರ್ ಕಾರ್ಡ್, ಸಂಘದ ಗುರುತಿನ ಚೀಟಿಯೊಂದಿಗೆ ಮೇಲೆ ಸೂಚಿಸಿದ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಬೆಂಗಳೂರು ವಕೀಲರ ಸಂಘವು ತಿಳಿಸಿದೆ.
ಪತಿ ಹಾಗೂ ಉತ್ತರ ಪ್ರದೇಶದ ಶಾಸಕ ಮುಖ್ತಾರ್ ಅನ್ಸಾರಿ ವಿರುದ್ಧದ ಕ್ರಿಮಿನಲ್ ಆರೋಪಗಳಲ್ಲಿ "ಉಚಿತ ಮತ್ತು ನ್ಯಾಯಯುತ ವಿಚಾರಣೆ" ದೊರೆಯುವಂತೆ ನೋಡಿಕೊಳ್ಳಬೇಕು ಹಾಗೂ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡದಂತೆ ಖಾತರಿಪಡಿಸುವ ಸಂಬಂಧ ಉತ್ತರ ಪ್ರದೇಶ ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅನ್ಸಾರಿ ಪತ್ನಿ ಅಫ್ಶಾನ್ ಅನ್ಸಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ತನ್ನ ಪತಿಯನ್ನು ಬಂಡಾ ಜೈಲಿಗೆ ಸ್ಥಳಾಂತರಿಸಿದಾಗ, ಅಲ್ಲಿಂದ ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಅವರಿಗೆ ಭದ್ರತೆ ಮತ್ತು ರಕ್ಷಣೆ ನೀಡುವಂತೆ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮನವಿಯಲ್ಲಿ ಅಫ್ಶಾನ್ ಅನ್ಸಾರಿ ಉಲ್ಲೇಖಿಸಿದ್ದಾರೆ. ಅಡ್ವೊಕೇಟ್-ಆನ್-ರೆಕಾರ್ಡ್‌ನ ಪಾರುಲ್ ಶುಕ್ಲಾ ಮೂಲಕ ಸಲ್ಲಿಸಿದ್ದ ಮನವಿಯಲ್ಲಿ ಅನ್ಸಾರಿ ಅವರ ಜೀವಕ್ಕೆ ಅಪಾಯವಿದೆ ಎಂದು ಉಲ್ಲೇಖಿಸಲಾಗಿದೆ.
ದೆಹಲಿ ಹೈಕೋರ್ಟ್ ಹೊರಡಿಸಿರುವ ನೋಟಿಸ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗುತ್ತಿರುವ ನೋಟಿಸ್ ತನ್ನ ಅಧಿಕೃತ ನೋಟಿಸ್ ಅಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆ ನೋಟಿಸ್‌ನಲ್ಲಿರುವಂತೆ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ವರ್ಚುವಲ್ ವಿಚಾರಣೆ ನಡೆಸಲಾಗುವುದು ಎಂಬ ನಿರ್ಧಾರವನ್ನು ತಾನು ಕೈಗೊಂಡಿಲ್ಲ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
“ವಿಶೇಷ ವರ್ಚುವಲ್ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಯಾವುದೇ ನೋಟಿಸ್ ಹೊರಡಿಸಿಲ್ಲ. ನಾವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ” ಎಂದು ದೆಹಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮನೋಜ್ ಕುಮಾರ್ ಜೈನ್ ಅವರು 'ಬಾರ್ ಅಂಡ್ ಬೆಂಚ್'ಗೆ ತಿಳಿಸಿದ್ದಾರೆ. ಹಂಚಿಕೆಯಾಗುತ್ತಿರುವ ನೋಟಿಸ್ ಅನ್ನು ಪಟ್ನಾ ಹೈಕೋರ್ಟ್ ಹೊರಡಿಸಿದೆ. ವರ್ಷದ ಬಳಿಕ ಮಾರ್ಚ್ 15ರಿಂದ ಭೌತಿಕ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ವರ್ಚುವಲ್ ವಿಚಾರಣೆಯನ್ನು ನ್ಯಾಯಾಲಯವು ಒಂದು ಆಯ್ಕೆಯಾಗಿ ಮಾತ್ರ ಇರಿಸಿದೆ.
ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಹೂಡಿಕೆ ಹಿಂತೆಗೆತದ ಕುರಿತಾದ ಪ್ರಕರಣದಲ್ಲಿ ಮಾಜಿ ಅಟಾರ್ಜಿ ಜನರಲ್ ಮುಕುಲ್ ರೋಹಟ್ಗಿ ಕುರಿತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೂಸ್ತಾನ್ ಜಿಂಕ್ ಲಿಮಿಟೆಡ್‌ನಲ್ಲಿ ಸರ್ಕಾರಿ ಷೇರುಗಳ ಹೂಡಿಕೆ ಹಿಂತೆಗೆತವನ್ನು ಪ್ರಶ್ನಿಸಿ ಕೇಂದ್ರ ಸಾರ್ವಜನಿಕ ವಲಯದ ರಾಷ್ಟ್ರೀಯ ಅಧಿಕಾರಿಗಳ ಸಂಸ್ಥೆಗಳ ಒಕ್ಕೂಟ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ನಡೆಸುತ್ತಿರುವಾಗ ತುಷಾರ್ ಮೆಹ್ತಾ ಅವರು ಕಟುವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅಧಿಕಾರಿಗಳ ಶಿಫಾರಸ್ಸಿನ ಹೊರತಾಗಿಯೂ ಪ್ರಕರಣವನ್ನು ಏಕೆ ಸಾಮಾನ್ಯ ಪ್ರಕರಣವನ್ನಾಗಿಸಲಾಗಿಲ್ಲ ಎಂದು ಅರ್ಜಿದಾರ ಪರ ವಕೀಲ ಭೂಷಣ್ ಪ್ರಶ್ನಿಸಿದರು. “ಹಿಂದಿನ ಅಟಾರ್ನಿ ಜನರಲ್ ಅವರು ಅದರ ಅವಶ್ಯಕತೆ ಇಲ್ಲ ಎಂದು ವಾದಿಸಿದ್ದರು. ಆ ನಂತರ ತಿಳಿದ ವಿಚಾರವೇನೆಂದರೆ ಅವರು ವೇದಾಂತವನ್ನು ಪ್ರತಿನಿಧಿಸುತ್ತಿದ್ದರು” ಎಂದು ಭೂಷಣ್ ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ತುಷಾರ್ ಮೆಹ್ತಾ ಅವರು ಭೂಷಣ್ ಅವರು ನ್ಯಾಯಾಲಯದ ಹೃದಯ ವೈಶಾಲ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಹೇಳಿಕೆಗಳನ್ನು ನೀಡದಂತೆ ಅವರನ್ನು ನಿರ್ಬಂಧಿಸಬೇಕು ಎಂದರು. “ಘನತೆವೆತ್ತ ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಲಾಗಿದೆ. ನಿಮ್ಮ ಹೃದಯ ವೈಶಾಲ್ಯತೆಯು ಅವರಲ್ಲಿ ಮತ್ತಷ್ಟು ಧೈರ್ಯ ತುಂಬಿದೆ. ನೀವು (ಭೂಷಣ್) ಪ್ರತಿಯೊಂದು ಸಂಸ್ಥೆ ಅಥವಾ ವ್ಯಕ್ತಿಯನ್ನು ನಿಂದಿಸಬೇಡಿ. ಘನತೆವೆತ್ತ ನ್ಯಾಯಾಧೀಶರು ಅವರನ್ನು ನಿರ್ಬಂಧಿಸಬೇಕು. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ಧ ದೂರುವುದನ್ನು ಅವರು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ಅವರು ಸಾರ್ವಜನಿಕ ವೇದಿಕೆ ಅಥವಾ ಸಮಾವೇಶದಲ್ಲಿ ಇಲ್ಲ” ಎಂದು ಮೆಹ್ತಾ ಪೀಠದ ಮುಂದೆ ತಮ್ಮ ಬೇಸರ ಹೊರಹಾಕಿದರು.