ದಿನ ಬಿಟ್ಟು ದಿನ ಶೇ. 50ರಷ್ಟು ವಿಶೇಷಚೇತನರು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರವನ್ನು ರಾಜ್ಯ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ಎ, ಬಿ, ಸಿ ಮತ್ತು ಡಿ ನೌಕರರು ಶೇ. 100 ಉದ್ಯೋಗಕ್ಕೆ ಹಾಜರಾಗಬೇಕು ಎಂದು 2020ರ ಮೇ 18ರಂದು ಹೊರಡಿಸಿರುವ ಸರ್ಕಾರದ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಅಂಧರ ಒಕ್ಕೂಟವು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ನಡೆಸಿದ್ದು, ವಿವೇಚನೆ ಬಳಸದೇ ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಿದೆ.
“ವಿವೇಚನೆ ಬಳಸದೇ ಜನವರಿ 5ರಂದು ಸುತ್ತೋಲೆ ಹೊರಡಿಸಲಾಗಿದೆ. 2020ರ ನವೆಂಬರ್ 26ರ ಆದೇಶಕ್ಕೆ ಪೂರಕವಾಗಿ ಅನುಸರಣಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತಿದ್ದೇವೆ. ಸರ್ಕಾರಿ ನೌಕರರು ಅದರಲ್ಲೂ ಅಂಧ ಉದ್ಯೋಗಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶ ಹೊರಡಿಸಿದ್ದನ್ನು ಪುನರ್ ಪರಿಗಣಿಸುವಂತೆ ಹಿಂದಿನ ಆದೇಶದಲ್ಲಿ ನ್ಯಾಯಾಲಯ ಆದೇಶಿಸಿತ್ತು” ಎಂದು ನ್ಯಾಯಾಲಯ ನೆನೆಪಿಸಿದೆ. 2021ರ ಜನವರಿ 5ರ ಸುತ್ತೋಲೆಯನ್ನು ಪ್ರಸ್ತುತಪಡಿಸಲಾಗಿದೆ. 2020ರ ಮೇ 17ರಂದು ಭಾರತ ಸರ್ಕಾರ ಹೊರಡಿಸಿರುವ ಹೊರಡಿಸಿರುವ ಆದೇಶವನ್ನು ಸುತ್ತೋಲೆಯಲ್ಲಿ ಪರಿಗಣಿಸಲಾಗಿದೆ. ವಿಶೇಷಚೇತನರು ಮತ್ತು ಗರ್ಭಿಣಿಯರು ಮುಂದಿನ ಆದೇಶದವರೆಗೆ ಮನೆಯಲ್ಲೇ ಕೆಲಸ ಮುಂದುವರಿಸುವಂತೆ 2020ರ ಅಕ್ಟೋಬರ್‌ನಲ್ಲಿ ಭಾರತ ಸರ್ಕಾರ ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಉಲ್ಲೇಖಿಸಿಯೂ ಇಲ್ಲ ಹಾಗೂ ಅದನ್ನು ಪರಿಗಣಿಸಿಲ್ಲ,” ಎಂದು ಹೇಳಿದೆ.
ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಹಗರಣದಲ್ಲಿ (ಟಿಆರ್‌ಪಿ) ಬಂಧಿತರಾಗಿರುವ ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪಾರ್ಥೊ ದಾಸ್‌ಗುಪ್ತ ಅವರ ಜಾಮೀನು ಅರ್ಜಿಯನ್ನು ಬುಧವಾರ ಮುಂಬೈ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಡಿಸೆಂಬರ್ 24ರಂದು ಮುಂಬೈ ಪೊಲೀಸರು ದಾಸ್‌ಗುಪ್ತ ಅವರನ್ನು ಬಂಧಿಸಿದ್ದರು. ಬಳಿಕ ಅವರನ್ನು ಡಿಸೆಂಬರ್ 31ರ ವರೆಗೆ ಪೊಲೀಸ್ ವಶಕ್ಕೆ ನೀಡಲಾಗಿತ್ತು. ತದನಂತರ ಎರಡು ವಾರಗಳಿಗೆ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ದಾಸ್‌ಗುಪ್ತ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಶಿಶಿರ್ ಹಿರೆ ವಾದಿಸಿದರು.
ಆಧಾರ್ ಯೋಜನೆಯ ಸಾಂವಿಧಾನಿಕತೆ ಎತ್ತಿಹಿಡಿದಿದ್ದ 2018ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಎ ಎಮ್ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಜೀರ್ ಮತ್ತು ಬಿಆರ್ ಗವಾಯಿ ಅವರ ನ್ಯಾಯಪೀಠ ಗೌಪ್ಯ ವಿಚಾರಣೆ ವೇಳೆ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ ನ್ಯಾ. ಚಂದ್ರಚೂಡ್ ಬಹುಮತದ ತೀರ್ಪಿಗೆ ಭಿನ್ನವಾದ ನಿಲುವು ತಳೆದರು.
ಸುಪ್ರೀಂ ಕೋರ್ಟ್‌ನ ಮತ್ತೊಂದು ಸಾಂವಿಧಾನಿಕ ಪೀಠ 2017ರ ಹಣಕಾಸು ಕಾಯಿದೆ ಮಾನ್ಯತೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವಾಗ (ರೋಜರ್ ಮ್ಯಾಥ್ಯೂ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ನಡುವಣ ಪ್ರಕರಣ) ವಿಸ್ತೃತ ಪೀಠದ ತೀರ್ಪು ಬರುವವರೆಗೆ ಈ ಅರ್ಜಿಗಳನ್ನು ಬಾಕಿ ಇರಿಸಬೇಕು ಎಂದು ಚಂದ್ರಚೂಡ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್, 2016 ರ ಆಧಾರ್ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದರು. ಆದರೂ ನ್ಯಾಯಾಲಯ ಗೌಪ್ಯ ವಿಚಾರಣೆಗೆ ಮುಂದಾಯಿತು.
ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಭೌತಿಕ ವಿಚಾರಣೆ ಆರಂಭಿಸುವ ಕುರಿತ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಲೇವಾರಿ ಮಾಡಿದೆ. ಸುಪ್ರೀಂ ಕೋರ್ಟ್ ಅರ್ಜಿ ವಿಲೇವಾರಿ ಮಾಡಲಿದ್ದು, ಅರ್ಜಿದಾರರು ಹೈಕೋರ್ಟ್‌ಗೆ ತೆರಳಬಹುದಾಗಿದೆ ಎಂದು ಸಿಜೆಐ ಎಸ್ ಎ ಬೊಬ್ಡೆ ಹೇಳಿದರು. ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸ್ವಾತಂತ್ರ್ಯ ಕಲ್ಪಿಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಮನವಿ ಮಾಡಿದ ಹಿನ್ನೆಲೆಯಲ್ಲಿ “ನಿಮಗೆ ಮತ್ತೆ ಇಲ್ಲಿ ಸ್ವಾಗತವಿಲ್ಲ. ನೀವು ಇಲ್ಲಿ ಅದನ್ನು ಉಲ್ಲೇಖಿಸಿದ್ದು, ದೇವರ ದಯೆಯಿಂದ ಒಳ್ಳೆಯದೇ ಆಯಿತು” ಎಂದು ಸಿಜೆಐ ಬೊಬ್ಡೆ ಹೇಳಿದರು.
“ನಾವು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ನಂಬುತ್ತೇವೆ. ಅವರು ಉತ್ತಮವಾದ ನಿರ್ಧಾರ ಕೈಗೊಳ್ಳಲಿದ್ದಾರೆ,” ಎಂದು ಸಿಜೆಐ ಬೊಬ್ಡೆ ಅವರು ಹಿರಿಯ ವಕೀಲೆ ಗೀತಾ ಲೂಥ್ರಾ ಅವಕಾಶ ಕೋರಿದ ಹಿನ್ನೆಲೆಯಲ್ಲಿ ಹೇಳಿದರು.