ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |24-3-2021

>> ಹಿರಿಯ ನಾಗರಿಕರಿಗೆ ಇಲ್ಲ ಅಂಚೆ ಮತಪತ್ರ ಸೌಲಭ್ಯ >> ಹಳೆಯ ಇವಿಎಂ ನಿಷೇಧಿಸಲು ಕೋರಿದ ಡಿಎಂಕೆ >> ʼಅರ್ನಾಬ್‌ ಬಂಧಿಸುವ ಮುನ್ನ ಅವರಿಗೆ ಸೂಚನೆ ನೀಡಿʼ >> ಸೋಮನಾಥ್‌ ಭಾರ್ತಿ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |24-3-2021

ಹಿರಿಯ ನಾಗರಿಕರಿಗೆ ಚುನಾವಣೆ ವೇಳೆ ಅಂಚೆ ಮತಪತ್ರ ಸೌಲಭ್ಯ: ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಯಾವುದೇ ಚುನಾವಣೆಯಲ್ಲಿ ಎಲ್ಲಾ ಹಿರಿಯ ನಾಗರಿಕರಿಗೆ ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಇಂತಹ ಅರ್ಜಿಯನ್ನು ರಿಟ್‌ ನ್ಯಾಯಾಲಯಕ್ಕೆ ಸಲ್ಲಿಸಲಾಗದು ಎಂದು ಅರ್ಜಿದಾರರಾದ ವಕೀಲ ಎಲ್‌ ರಮೇಶ್‌ ನಾಯಕ್‌ ಅವರಿಗೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಸೂರಜ್‌ ಗೋವಿಂದರಾಜ್‌ ಅವರಿದ್ದ ಪೀಠ ತಿಳಿಸಿದೆ. ಭಾರತದ ಚುನಾವಣಾ ಆಯೋಗಕ್ಕೆ ಲೋಕಸಭಾ ಚುನಾವಣೆ ನಡೆಸುವುದು ಗಂಭೀರ ವಿಚಾರ ಎಂದು ಅಭಿಪ್ರಾಯಪಟ್ಟಿತು.

High Court of Karnataka
High Court of Karnataka

ಅಲ್ಲದೆ ಮತದಾನದ ವೇಳೆ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಬೇಕೆಂದು ಅರ್ಜಿದಾರರು ಕೋರಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. “ಹಿರಿಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗ ಜಾಗೃತವಾಗಿದೆ ಎಂದು ನಮಗೆ ದೃಢಪಟ್ಟಿದೆ. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವು ಬದ್ಧವಾಗಿವೆ” ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿತು. ಕೋವಿಡ್‌ ಸಾಂಕ್ರಾಮಿಕ ಭೀತಿಯ ನಡುವೆಯೂ ಚುನಾವಣೆಗಳು ನಡೆಯುತ್ತಿದ್ದು ಹಿರಿಯ ನಾಗರಿಕರಿಗೆ ಪ್ರತ್ಯೇಕ ಮತದಾನ ಕೇಂದ್ರ ಒದಗಿಸಬೇಕೆಂದು ರಮೇಶ್‌ ನಾಯಕ್‌ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು. ಇದಕ್ಕೆ ಪರ್ಯಾಯವಾಗಿ ಅಂಚೆ ಮತದಾನದ ವ್ಯವಸ್ಥೆಗೆ ನಿರ್ದೇಶಿಸಬೇಕೆಂದು ಅವರು ಕೋರಿದ್ದರು.

15 ವರ್ಷಕ್ಕಿಂತ ಹಳೆಯ ಇವಿಎಂ ನಿಷೇಧ, ಮತದಾನದ ನೇರಪ್ರಸಾರ ಕೋರಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ ಡಿಎಂಕೆ

ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಕೆಲ ನಿರ್ದೇಶನಗಳನ್ನು ನೀಡುವಂತೆ ಡಿಎಂಕೆ ಮದ್ರಾಸ್‌ ಹೈಕೋರ್ಟನ್ನು ಕೋರಿದೆ. ಮತದಾನದ ಮೊದಲು ಮತ್ತು ನಂತರ ಇವಿಎಂಗಳನ್ನು ಇರಿಸುವ ಸ್ಟ್ರಾಂಗ್‌ರೂಂಗಳಲ್ಲಿ ಹಾಗೂ ಮತ ಎಣಿಕಾ ಕೇಂದ್ರಗಳಲ್ಲಿ ಜಾಮರ್‌ ಅಳವಡಿಸಬೇಕು ಎಂದು ಕೋರಿದೆ. ಮತದಾನ ನಡೆಯುವಾಗ ಎಲ್ಲಾ ಮತದಾನ ಕೇಂದ್ರಗಳಲ್ಲಿ ಸಿಸಿಟಿವಿ ನೇರಪ್ರಸಾರ ವ್ಯವಸ್ಥೆ ಮಾಡಬೇಕು.

EVMs and Madras High Court
EVMs and Madras High Court

ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್‌ಗಳನ್ನು ಅಳವಡಿಸುವಂತೆ ರಿಟರ್ನಿಂಗ್‌ ಅಧಿಕಾರಿಗೆ ಸೂಚನೆ ನೀಡಬೇಕು, ಅಲ್ಲದೆ ದೇಶದಲ್ಲಿ 2001 ರಿಂದಲೂ ಇವಿಎಂಗಳು ಬಳಕೆಯಲ್ಲಿದ್ದು ಇವಿಎಂಗಳ ಜೀವಿತಾವಧಿ ಕೇವಲ 15 ವರ್ಷವಾಗಿದ್ದು ಅವಧಿ ಮೀರಿದ ಯಂತ್ರಗಳನ್ನು ನಿಷೇಧಿಸಬೇಕು ಎಂಬುದು ಕೂಡ ಪಕ್ಷದ ಪ್ರಮುಖ ಬೇಡಿಕೆಯಾಗಿದೆ. ಹಿರಿಯ ನ್ಯಾಯವಾದಿ ಮತ್ತು ರಾಜ್ಯಸಭಾ ಸದಸ್ಯ ಪಿ ವಿಲ್ಸನ್‌ ಅವರು ಡಿಎಂಕೆ ಪರ ವಾದ ಮಂಡಿಸಲಿದ್ದಾರೆ.

[ಏಮ್ಸ್ ಹಲ್ಲೆ ಪ್ರಕರಣ] ಸೋಮನಾಥ್‌ ಭಾರ್ತಿಗೆ ವಿಧಿಸಿದ್ದ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್‌

2016ರಲ್ಲಿ ಏಮ್ಸ್‌ನಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್‌ ಆದ್ಮಿ ಪಕ್ಷದ ಶಾಸಕ ಸೋಮನಾಥ್‌ ಭಾರ್ತಿ ಅವರಿಗೆ ದೆಹಲಿಯ ಜನಪ್ರತಿನಿಧಿಗಳ ನ್ಯಾಯಾಲಯ ನೀಡಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಅಮಾನತಿನಲ್ಲಿಟ್ಟಿದೆ. ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ.

Somnath bharti and Delhi hc
Somnath bharti and Delhi hc

ಶಿಕ್ಷೆಯನ್ನು ಎತ್ತಿಹಿಡಿದಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಭಾರ್ತಿ ಹೈಕೋರ್ಟ್‌ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್‌ ಅವರಿದ್ದ ಏಕ ಸದಸ್ಯ ಪೀಠ ಮೇಲ್ಮನವಿ ಸಂಬಂಧ ನೋಟಿಸ್‌ ಜಾರಿ ಮಾಡಿತಲ್ಲದೆ ಶಿಕ್ಷೆಗೆ ತಡೆ ನೀಡಿತು. ಭಾರ್ತಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಎನ್‌ ಹರಿಹರನ್‌ ವಾದ ಮಂಡಿಸಿದರು. ಮೇ 20ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.

ಟಿಆರ್‌ಪಿ ಹಗರಣ: ಬಂಧನಕ್ಕೂ ಮೂರು ದಿನ ಮೊದಲು ಅರ್ನಾಬ್‌ಗೆ ಸೂಚನೆ ನೀಡಬೇಕು ಎಂದ ಬಾಂಬೆ ಹೈಕೋರ್ಟ್‌

ಟಿಆರ್‌ಪಿ ಹಗರಣದಲ್ಲಿ ಪೊಲೀಸರು ರಿಪಬ್ಲಿಕ್‌ ಟಿವಿ ನಿರೂಪಕ ಅರ್ನಾಬ್‌ ಗೋಸ್ವಾಮಿ ಅವರನ್ನು ಬಂಧಿಸಲು ಬಯಸಿದರೆ ಅದಕ್ಕೂ ಮೂರು ದಿನಗಳ ಮೊದಲು ಅವರಿಗೆ ಸೂಚನೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ ಹಗರಣದ ತನಿಖೆಯನ್ನು 12 ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ಎಸ್‌ ಎಸ್ ಶಿಂಧೆ ನೇತೃತ್ವದ ಪೀಠ ತಿಳಿಸಿದೆ.

Arnab Goswami, Bombay High Court
Arnab Goswami, Bombay High Court

ರಿಪಬ್ಲಿಕ್‌ ಟಿವಿ ಮತ್ತು ಅರ್ನಾಬ್‌ ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಮಾತ್ರವಲ್ಲದೆ ಆರೋಪಪಟ್ಟಿಯಲ್ಲೂ ನಮೂದಿಸಿಲ್ಲದ ಕಾರಣಕ್ಕೆ ಪರಿಹಾರ ನೀಡಲು ನ್ಯಾಯಾಲಯ ಮುಂದಾಗಲಿಲ್ಲ. ಈ ಹಂತದಲ್ಲಿ ತನಿಖೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿತು. ತನಿಖೆ ಪೂರ್ಣಗೊಳಿಸಲು ತನಿಖಾಧಿಕಾರಿಗೆ ಅಗತ್ಯವಿರುವ ಸಮಯದ ಬಗ್ಗೆ ಮುಖ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ದೀಪಕ್‌ ಠಾಕ್ರೆ ಅವರು ಮಾಹಿತಿ ನೀಡಿದಾಗ ನ್ಯಾಯಾಲಯ ತನಿಖೆಗೆ ಗಡವು ನಿಗದಿಪಡಿಸಿತು. ಅರ್ನಾಬ್‌ ಅವರಿಗೆ ನೀಡುವ ಸೂಚನೆಯನ್ನು ವಾಹಿನಿಯ ಉಳಿದ ಸಿಬ್ಬಂದಿಗೂ ವಿಸ್ತರಿಸಬೇಕೆಂದೇನೂ ಇಲ್ಲ ಎಂದು ಅಭಿಪ್ರಾಯಪಟ್ಟಿತು.

Kannada Bar & Bench
kannada.barandbench.com