ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |14-6-2021

>> ಭ್ರಷ್ಟಾಚಾರ ಪ್ರಕರಣ ತನಿಖೆಗೆ ಅನುಮತಿ ಬೇಡ ಎಂದ ಸಿಬಿಐ >> ಸಿಎಲ್‌ಎಟಿ ಪರೀಕ್ಷೆ ಜುಲೈ 23ಕ್ಕೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |14-6-2021

ದೇಶಮುಖ್‌ ಪ್ರಕರಣ: ಭ್ರಷ್ಟಾಚಾರ ತನಿಖೆಗೆ ಅನುಮತಿಯ ಅಗತ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಸಿಬಿಐ

ತನ್ನ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸಬೇಕೆಂದು ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್‌ ದೇಶಮುಖ್‌ ಅವರು ಸಲ್ಲಿಸಿರುವ ಅರ್ಜಿ ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಸಿಬಿಐ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಹೈಕೋರ್ಟ್‌ ಕೂಡ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿರುವ ಅಪರಾಧದ ಬಗ್ಗೆ ತನಿಖೆ ರದ್ದುಗೊಳಿಸಲು ದೇಶಮುಖ್‌ ಪ್ರಯತ್ನಿಸುತ್ತಿರುವುದರಿಂದ ಅವರ ಅರ್ಜಿ ಸಮರ್ಥನೀಯವಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ.

Anil Deshmukh, Bombay High Court
Anil Deshmukh, Bombay High Court

ಭ್ರಷ್ಟಾಚಾರ ವಿರುದ್ಧದ ತನಿಖೆಗೆ ಅನುಮತಿಯ ಅಗತ್ಯವಿಲ್ಲ ಎಂದು ಅದು ಇದೇ ವೇಳೆ ತಿಳಿಸಿದೆ. ದೇಶಮುಖ್‌ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಹೈಕೋರ್ಟ್‌ ಸೂಚಿಸಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಅನುಮತಿ ಕೋರಿಲ್ಲ ಎಂದು ದೂರು ನೀಡಿಲ್ಲ. ಭವಿಷ್ಯದ ಕ್ರಮ ನಿರ್ಧರಿಸಲು ನ್ಯಾಯಾಲಯ ಕೂಡ ಸಿಬಿಐಗೆ ಸ್ವಾತಂತ್ರ್ಯ ನೀಡಿದೆ ಎಂಬುದಾಗಿ ಅದು ವಿವರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 18ಕ್ಕೆ ನಿಗದಿಯಾಗಿದೆ.

ಆಫ್‌ಲೈನ್‌/ಭೌತಿಕ ಮಾದರಿಯಲ್ಲಿ ಜುಲೈ 23ರಂದು ಸಿಎಲ್‌ಎಟಿ 2021 ಪರೀಕ್ಷೆ

ಕೋವಿಡ್‌ ಶಿಷ್ಟಾಚಾರದ ಅನ್ವಯ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರ್ಪಡೆಗೆ ಸಂಬಂಧಿಸಿದಂತೆ ಜುಲೈ 23ರ ಶುಕ್ರವಾರ ಮಧ್ಯಾಹ್ನ 2 ಮತ್ತು ಸಂಜೆ 4 ಗಂಟೆಗೆ ಭೌತಿಕ/ಆಫ್‌ಲೈನ್‌ ಮೂಲಕ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2021 (ಸಿಎಲ್‌ಎಟಿ 2021) ನಡೆಸಲಾಗುವುದು ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಅಧಿಸೂಚನೆಯಲ್ಲಿ ತಿಳಿಸಿದೆ.

ಆರಂಭದಲ್ಲಿ ಮೇ 9ರಂದು ಸಿಎಲ್‌ಎಟಿ ನಡೆಸಲು ನಿರ್ಧರಿಸಲಾಗಿತ್ತು. ಸಿಬಿಎಸ್‌ಇ ಪರೀಕ್ಷೆಗಳು ಮೇ 4ರಂದು ಆರಂಭವಾಗುತ್ತವೆ ಎಂಬ ಹಿನ್ನೆಲೆಯಲ್ಲಿ ಜೂನ್‌ 13ಕ್ಕೆ ಪರೀಕ್ಷೆ ಮುಂದೂಡಲಾಗಿತ್ತು. ಕೋವಿಡ್‌ ಎರಡನೇ ಅಲೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಸಿಎಲ್‌ಎಟಿ ಮುಂದೂಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com