ನಾರದ ಹಗರಣ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ತೃಣಮೂಲ ಕಾಂಗ್ರೆಸ್‌ನ ನಾಲ್ವರು ನಾಯಕರಿಗೆ ಜಾಮೀನು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಸಂಜೆ ವೇಳೆಗೆ ಐವರು ಸದಸ್ಯರ ವಿಸ್ತೃತ ನ್ಯಾಯಪೀಠ ರಚಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿಗಳಾದ ಐ ಪಿ ಮುಖರ್ಜಿ, ಹರೀಶ್ ಟಂಡನ್, ಸೌಮೇನ್ ಸೇನ್ ಮತ್ತು ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠ ಮಧ್ಯಂತರ ಜಾಮೀನು ಮಂಜೂರು ವಿಚಾರದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಲು ಆದೇಶಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿಗಳು ಜಾಮೀನು ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ನ್ಯಾ. ಬ್ಯಾನರ್ಜಿ ಅದನ್ನು ವಿರೋಧಿಸಿದ್ದರು. ಆದರೆ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಹಾಗೂ ನಾಲ್ವರು ನಾಯಕರನ್ನು ಗೃಹ ಬಂಧನದಲ್ಲಿರಿಸುವ ವಿಚಾರಕ್ಕೆ ಸಿಬಿಐ ತಕರಾರು ತೆಗೆದಿತ್ತು. ಆದರೆ ಸಿಬಿಐ ಆಕ್ಷೇಪಕ್ಕೆ ನ್ಯಾಯಾಲಯ ಮನ್ನಣೆ ನೀಡಿರಲಿಲ್ಲ.
ಕೋವಿಡ್ ಸಮಯದಲ್ಲಿ ಕಾನೂನು ಸಮುದಾಯ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯವಾಗಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಮೇ 23ರಂದು ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರು ವಕೀಲರ ಸಂಘ ತನ್ನ ಮೂರನೇ ವೆಬಿನಾರ್ ಸರಣಿ ಅಂಗವಾಗಿ ಈ ಕಾರ್ಯಕ್ರಮ ಏರ್ಪಡಿಸಿದೆ.
ಬೆಳಗ್ಗೆ ಹನ್ನೊಂದು ಗಂಟೆಗೆ ಉಪನ್ಯಾಸ ಕಾರ್ಯಕ್ರಮ ಆರಂಭವಾಗಲಿದ್ದು ಜೂಮ್ ಲಾಗಿನ್ ಐಡಿ 860 1992 9691 ಬಳಸಿ ಲಾಗಿನ್ ಆಗಬಹುದು. ಪಾಸ್‌ಕೋಡ್: 0000. ಅಲ್ಲದೆ ಸಂಘವು ಕಾರ್ಯಕ್ರಮವನ್ನು ಫೇಸ್‌ಬುಕ್‌ನಲ್ಲಿಯೂ ನೇರಪ್ರಸಾರ ಮಾಡುತ್ತಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಸಂಪರ್ಕಿಸಿ: 9980006258
ಲಾಕ್‌ಡೌನ್‌ನಿಂದ ವಕೀಲರ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಹಣಕಾಸು ಮತ್ತು ವೈದ್ಯಕೀಯ ನೆರವು ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷ ಎ ಪಿ ರಂಗನಾಥ್ ಪತ್ರ ಬರೆದಿದ್ದಾರೆ. ಬೆಂಗಳೂರಿನಲ್ಲಿ 67 ಹಾಗೂ ರಾಜ್ಯದಾದ್ಯಂತ 170ಕ್ಕೂ ಹೆಚ್ಚು ವಕೀಲರು ಕೊರೊನಾಗೆ ಬಲಿಯಾಗಿದ್ದಾರೆ. ಸರ್ಕಾರ ತಕ್ಷಣವೇ ವಕೀಲರ ಸಂಘದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಕೀಲರನ್ನು ಕೂಡ ಕೋವಿಡ್ ಮುಂಚೂಣಿ ಹೋರಾಟಗಾರರು ಎಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ 30 ಲಕ್ಷ ಪರಿಹಾರವನ್ನು ನೀಡಬೇಕು ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಿಂದಲೂ ಸಂಕಷ್ಟದಲ್ಲಿರುವ ವಕೀಲರಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು. ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವಕೀಲರು, ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಸಿಬ್ಬಂದಿಗೆ ಉಚಿತ ಚಿಕಿತ್ಸೆ ಒದಗಿಸಬೇಕು ಎಂದು ಅವರು ಕೋರಿದ್ದಾರೆ.