ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |10-4-2021

>> ಪದವಿಗೆ ಸಂಬಂಧಿಸಿದ ಪ್ರಕರಣ >> 'ಕಬ್ಬನ್ ಉದ್ಯಾನದೊಳಗೆ ವಾಹನ ಸಂಚಾರ ತಪ್ಪಿಸುವುದು ಅಸಾಧ್ಯ' >> ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ ಅರ್ನಾಬ್‌ಗೆ ಖುದ್ದು ಹಾಜರಾತಿಯಿಂದ ತಾತ್ಕಾಲಿಕ ವಿನಾಯಿತಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |10-4-2021

ಸ್ನಾತಕ ಪದವಿಗೆ ಎಂಜಿನಿಯರಿಂಗ್‌ ಡಿಗ್ರಿ ಸಮವೇ ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳು ತಜ್ಞ ಸಂಸ್ಥೆಗಳಲ್ಲ: ಕರ್ನಾಟಕ ಹೈಕೋರ್ಟ್‌

ಎಂಜಿನಿಯರಿಂಗ್‌ ಪದವಿ ವಿಜ್ಞಾನ ಡಿಗ್ರಿಗೆ ಸಮನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ನ್ಯಾಯಾಲಯಗಳು ತಜ್ಞ ಸಂಸ್ಥೆಗಳಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಇಂತಹ ಕಾರ್ಯಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೀತಿಯ ತಜ್ಞ ಸಂಸ್ಥೆಗಳಿಗೆ ಬಿಡಬೇಕು ಎಂದು ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಎಸ್‌ ಅಂಬರೀಶ್ ಕುಮಾರ್ ನಡುವಣ ಪ್ರಕರಣ).

Justice Satish Chandra Sharma, Justice Vishwajith Shetty
Justice Satish Chandra Sharma, Justice Vishwajith Shetty

‘ವಿಜ್ಞಾನ’ ಎಂಬ ಪದವನ್ನು ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲವಾದ್ದರಿಂದ ವಿಜ್ಞಾನದ ಪದವಿಯಂತೆಯೇ ಎಂಜಿನಿಯರಿಂಗ್‌ ಪದವಿಯನ್ನೂ ಪರಿಗಣಿಸಬೇಕು ಮತ್ತು ಏಳು ಎಂಜಿನಿಯರಿಂಗ್‌ ಪದವೀಧರರನ್ನು ಸಹಾಯಕ/ ಗುಮಾಸ್ತ ಹುದ್ದೆಗೆ ನೇಮಿಸಿಕೊಳ್ಳಬೇಕು ಎಂದು 2020ರ ಸೆಪ್ಟೆಂಬರ್ 3 ರಂದು ಏಕ ಸದಸ್ಯ ಪೀಠ ನೀಡಿದ ಆದೇಶವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಪ್ರಶ್ನಿಸಿತ್ತು, ಸಹಾಯಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದ ಮಂಡಳಿಯು ಅರ್ಹತೆಯಾಗಿ “ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಕಲೆ / ವಾಣಿಜ್ಯ / ವಿಜ್ಞಾನದಲ್ಲಿ ಪದವಿ ಮತ್ತು ಕಂಪ್ಯೂಟರ್ ಬೇಸಿಕ್ಸ್‌ನಲ್ಲಿ ಒಂದು ವರ್ಷದ ಅವಧಿಯ ಕೋರ್ಸ್ ಪೂರ್ಣಗೊಳಿಸಿರಬೇಕು” ಎನ್ನುವ ನಿಯಮಾವಳಿ ಹೇರಿತ್ತು. ಆದರೆ ಬಿಇ ಪದವಿಯನ್ನು ವಿಜ್ಞಾನದಲ್ಲಿ ಪದವಿ ಎಂದು ಪರಿಗಣಿಸಬೇಕು ಎಂದು ವಾದಿಸಿದ್ದ ವಿದ್ಯಾರ್ಥಿಗಳು ತಮ್ಮ ನೇಮಕಾತಿಯನ್ನು ಪರಿಗಣಿಸುವಂತೆ ವಾದಿಸಿದ್ದರು. ವಾದಗಳನ್ನು ಆಲಿಸಿದ ನ್ಯಾಯಲಯ ಮೇಲ್ಮನವಿಯನ್ನು ಪುರಸ್ಕರಿಸಿ ಏಕಸದಸ್ಯ ಪೀಠದ ಆದೇಶವನ್ನು ತಿರಸ್ಕರಿಸಿತು.

ಕಬ್ಬನ್‌ ಉದ್ಯಾನದೊಳಗೆ ವಾಹನ ಸಂಚಾರ ತಪ್ಪಿಸುವುದು ಅಸಾಧ್ಯ: ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ

ಕಬ್ಬನ್‌ ಉದ್ಯಾನದೊಳಗೆ ವಾಹನ ಸಂಚಾರ ತಪ್ಪಿಸುವುದು ಅಸಾಧ್ಯವಾದ್ದರಿಂದ ಅದನ್ನು ಮುಂದುವರಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಇತ್ತೀಚೆಗೆ ತಿಳಿಸಿದೆ. ಕಬ್ಬನ್ ಉದ್ಯಾನ ನಡಿಗೆದಾರರ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಎಲ್ಲಾ ಇಲಾಖೆಗಳ ಅಭಿಪ್ರಾಯಪಡೆದು ಸರ್ಕಾರಿ ವಕೀಲರು ತಮ್ಮ ಅಹವಾಲು ಸಲ್ಲಿಸಿದರು.

Cubbon Park
Cubbon Park

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠವು ಸರ್ಕಾರಿ ವಕೀಲರು ಎಲ್ಲಾ ಇಲಾಖೆಗಳ ಅಭಿಪ್ರಾಯ ಪರಿಶೀಲಿಸಿದ ಬಳಿಕ ಕಬ್ಬನ್ ಪಾರ್ಕ್‌ನೊಳಗಿನ ಸಂಚಾರ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಮೊದಲಿನಂತೆ ಸಂಚಾರ ಮುಂದುವರೆಯಬೇಕು ಎಂದು ಹೇಳಿದ್ದಾರೆ. ನ್ಯಾಯಾಲಯದ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿದ ನಿರ್ದೇಶನವನ್ನು ಪಾಲಿಸಲಾಗಿದೆ ಆದ್ದರಿಂದ, ನ್ಯಾಯಾಂಗ ನಿಂದನೆ ಅರ್ಜಿ ಕೈಬಿಡಬಹುದು ಎಂದಿತು.

ಒಳಾಂಗಣ ವಿನ್ಯಾಸಕಾರ ಆತ್ಮಹತ್ಯೆ ಪ್ರಕರಣ: ಅರ್ನಾಬ್‌ಗೆ ತಾತ್ಕಾಲಿಕವಾಗಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ಬಾಂಬೆ ಹೈಕೋರ್ಟ್

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ಪರಿಹಾರ ವಿಸ್ತರಿಸಿದ್ದು ಅಲಿಬಾಗ್‌ನ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಮತ್ತು ರಾಯಗಢದ ಸೆಷನ್ಸ್ ನ್ಯಾಯಾಲಯದ ಎದುರು ಖುದ್ದು ಹಾಜರಾತಿಯಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಿದೆ. ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಗೋಸ್ವಾಮಿ ಅವರು ಅಲಿಬಾಗ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಲು ವಿನಾಯಿತಿ ಕೋರಿದ್ದರು.

Arnab Goswami, Bombay High Court
Arnab Goswami, Bombay High Court

ನ್ಯಾಯಮೂರ್ತಿಗಳಾದ ಎಸ್ ಎಸ್‌ ಶಿಂಧೆ ಮತ್ತು ಮನೀಶ್‌ ಪಿಟಾಲೆ ಅವರಿದ್ದ ಪೀಠ ಮಾರ್ಚ್ 5 ರಂದು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿತ್ತು. ಅದೇ ಸಮಯದಲ್ಲಿ ನ್ಯಾಯಾಲಯ ರಾಯಗಢ ಪೊಲೀಸರ ಅಕ್ರಮ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆಯೂ ನೋಟಿಸ್‌ ನೀಡಿತ್ತು. ಏಪ್ರಿಲ್ 16 ರಂದು ವಿಡಿಯೋ ಕಾನ್ಫರೆನ್ಸ್ ವಿಚಾರಣೆಯ ಮೂಲಕ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ ಏಪ್ರಿಲ್ 15 ರಿಂದ 17 ರವರೆಗೆ ಹೈಕೋರ್ಟ್ ರಜೆ ಇದ್ದುದರಿಂದ ಶುಕ್ರವಾರವೇ ವಿಚಾರಣೆ ನಡೆಸಿತ್ತು. ಹೈಕೋರ್ಟ್‌ ರಜೆ ಇರುವುದರಿಂದ ಮಧ್ಯಂತರ ಪರಿಹಾರ ಘೋಷಿಸಬೇಕೆಂದು ವಕೀಲರು ಕೋರಿದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಮಧ್ಯಂತರ ಪರಿಹಾರ ವಿಸ್ತರಿಸಲಾಗಿದೆ. ವಿಚಾರಣಾ ನ್ಯಾಯಾಲಯದ ಎದುರು ಮುಂದಿನ ವಿಚಾರಣೆ ಏಪ್ರಿಲ್ 26ಕ್ಕೆ ನಿಗದಿಯಾಗಿದೆ. ಹೈಕೋರ್ಟ್ ಕೂಡ ಇದೇ ದಿನಾಂಕದಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ.

Related Stories

No stories found.
Kannada Bar & Bench
kannada.barandbench.com