ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ ಆರೋಪದಲ್ಲಿ ಬಂಧಿತರಾಗಿರುವ ಹಾಸ್ಯ ಕಲಾವಿದ ಮುನಾವರ್ ಫಾರೂಖಿ ಅವರ ಜಾಮೀನು ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಡೆಸಲಿದೆ. ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಪೀಠದ ಮುಂದೆ ಫಾರೂಖಿ ಸಲ್ಲಿಸಿರುವ ಕ್ರಿಮಿನಲ್ ರಿಟ್ ಮನವಿ ವಿಚಾರಣೆಗೆ ಒಳಪಡಲಿದೆ.
ಮೊದಲಿಗೆ ಸೆಷನ್ಸ್ ನ್ಯಾಯಾಲಯ, ಆ ಬಳಿಕ ಮಧ್ಯಪ್ರದೇಶ ಹೈಕೋರ್ಟ್ ಜನವರಿ 28ರಂದು ಫಾರೂಖಿ ಅವರ ಜಾಮೀನು ಮನವಿಯನ್ನು ವಜಾಗೊಳಿಸಿದ್ದವು. ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವರುಗಳ ಬಗ್ಗೆ ಆಕ್ಷೇಪಾರ್ಹವಾದ ಹಾಸ್ಯ ಮಾಡಿದ್ದರು ಎಂಬ ಆರೋಪದ ಮೇಲೆ ಹಿಂದ್ ರಕ್ಷಕ್ ಸಂಘಟನೆಯ ಮುಖ್ಯಸ್ಥ ಏಕಲವ್ಯ ಸಿಂಗ್ ಗೌರ್ ನೀಡಿದ ದೂರನ್ನು ಆಧರಿಸಿ ಮಧ್ಯಪ್ರದೇಶದ ಪೊಲೀಸರು ಜನವರಿ 1ರಂದು ಅವರ ವಿರುದ್ಧ ದೂರು ದಾಖಲಿಸಿದ್ದರು.
ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ವ್ಯಕ್ತಿತ್ವ ಆರಾಧನೆ ಗಣರಾಜ್ಯಕ್ಕೆ ಸರಿ ಹೊಂದುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 'ವೇದ ನಿಲಯಂ' ನಿವಾಸವನ್ನು ಸಾರ್ವಜನಿಕ ಸ್ಮಾರಕವನ್ನಾಗಿಸುವ ಸಂಬಂಧ ಕಾನೂನು ಜಾರಿಗೊಳಿಸಿದ್ದ ತಮಿಳುನಾಡು ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಹೇಳಿದೆ.
“ನಾವು ಅಗೌರವ ತೋರುತ್ತಿಲ್ಲ. ಉತ್ತರಾಧಿಕಾರಿ ಮುಖ್ಯಮಂತ್ರಿಗಳಿಗೆ ನೀವು ಹೀಗೆ ಮಾಡಲಾಗದು… ಗಾಂಧಿ, ನೆಹರೂ, ಪಟೇಲ್ ಮೊದಲಿಗರು ಎಂದು ಒಂದೊಂದು ಸ್ಮಾರಕ ನಿರ್ಮಿಸಬಹುದು.. ನೀವು ಇದನ್ನು ವಿಸ್ತರಿಸುತ್ತಾ ಹೋದರೆ ಉಪಮುಖ್ಯಮಂತ್ರಿಗಳಿಗೂ ಸ್ಮಾರಕ ನಿರ್ಮಿಸಬೇಕಾಗುತ್ತದೆ!.. ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಈ ರೀತಿಯ ವ್ಯಕ್ತಿತ್ವ ಆರಾಧನೆಯು ಗಣರಾಜ್ಯಕ್ಕೆ ಸರಿ ಹೊಂದುವುದಿಲ್ಲ” ಎಂದು ಸಿಜೆ ಬ್ಯಾನರ್ಜಿ ಹೇಳಿದ್ದಾರೆ. ಜಯಲಲಿತಾ ಅವರ ಸಂಬಂಧಿ ಜೆ ದೀಪಕ್ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ನಡೆಸಿದ್ದು, ಹಿರಿಯ ವಕೀಲ ಎ ಆರ್ ಎಲ್ ಸುಂದರೇಶನ್ ಅರ್ಜಿದಾರರ ಪರ ವಾದ ಮಂಡಿಸಿದರು.
ಕಳೆದ ವರ್ಷ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ದೆಹಲಿ ವಿಧಾನಸಭೆಯು ರಚಿಸಿರುವ ಶಾಂತಿ ಮತ್ತು ಸಾಮರಸ್ಯ ಸಮಿತಿಯ ಮುಂದೆ ಹಾಜರಾಗುವ ಬಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರದ ಸೆರಗಿನಲ್ಲಿ ಫೇಸ್‌ಬುಕ್ ಆಶ್ರಯ ಪಡೆಯಲಾಗದು ಎಂದು ದೆಹಲಿ ವಿಧಾನಸಭೆಯು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಮಿತಿಯ ಪ್ರಕ್ರಿಯೆಯು ಆಂತಕರಿವಾಗಿ ನಡೆಯಲಿದ್ದು, ಇದರಲ್ಲಿ ಸಾಮಾನ್ಯವಾಗಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದಿಲ್ಲ ಎಂದು ದೆಹಲಿ ವಿಧಾನಸಭೆ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ಯಾವ ಸಮಿತಿಯ ಮುಂದೆ ಹಾಜರಾಗಬೇಕು ಮತ್ತು ಯಾವ ಸಮಿತಿಯ ಮುಂದೆ ಹಾಜರಾಗಬಾರದು ಎಂಬುದನ್ನು ಫೇಸ್‌ಬುಕ್ ಆಯ್ಕೆ ಮಾಡಿಕೊಳ್ಳಲಾಗದು. ಅಂಥ ನಿಲುವನ್ನು ಒಪ್ಪಿಕೊಂಡಿದ್ದೇ ಆದರೆ ಅದು ಸಂಸತ್‌ನಲ್ಲಿ ಕಾರ್ಯನಿರ್ವಹಿಸುವ ಸಮಿತಿಗಳಿಗೆ ಹೊಡೆಯುವ ಸಾವಿನ ಮೊಳೆಯಾಗಿರುತ್ತದೆ” ಎಂದು ಹೇಳಲಾಗಿದೆ. “ಗಣರಾಜ್ಯ ದೇಶವಾದ ಭಾರತದಲ್ಲಿ ಫೇಸ್‌ಬುಕ್ ರಿಪಬ್ಲಿಕ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರನ್ನು ನಾವು ನೋಡುತ್ತಿದ್ದೇವೆ. ವಿಷಯ ಹೊಂದುವುದಿಲ್ಲ ಎಂದು ಯೂರೋಪಿಯನ್ ಸಮಿತಿಯ ಮುಂದೆ ಹಾಜರಾಗುತ್ತೇವೆ. ಆದರೆ, ಇಲ್ಲಿ ಹಾಜರಾಗುವುದಿಲ್ಲ ಎಂದು ಹೇಳುವಂತಿಲ್ಲ. ಕಾರ್ಪೊರೇಟ್ ಸಂಸ್ಥೆಯಾದ ಫೇಸ್‌ಬುಕ್ ಕೇಂದ್ರದ ಸೆರಗಿನಲ್ಲಿ ಆಶ್ರಯ ಪಡೆಯಲಾಗದು,” ಎಂದು ಸಿಂಘ್ವಿ ವಾದಿಸಿದ್ದಾರೆ.
ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ಸಂತ್ರಸ್ತನೊಬ್ಬ ತನ್ನ ಜಾತಿ/ಪಂಗಡದ ಕಾರಣಕ್ಕೆ ತನ್ನ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದಾಗ ಮಾತ್ರ 1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅನ್ವಯಿಸುತ್ತದೆಯೇ ವಿನಾ ಆತ ಕೇವಲ ಆ ಸಮುದಾಯಗಳಿಗೆ ಸೇರಿದ್ದಾನೆ ಎಂಬ ಕಾರಣಕ್ಕೆ ಅದನ್ನು ಅನ್ವಯಿಸಲಾಗದು ಎಂದು ಛತ್ತೀಸ್‌ಗಡ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಆರೋಪಿಗಳ ವಿರುದ್ಧ ಪ್ರಥಮ ಪ್ರಕರಣ ದಾಖಲಿಸದೇ ಇದ್ದಲ್ಲಿ ಎಸ್‌ಸಿ / ಎಸ್‌ಟಿ ಕಾಯ್ದೆಯಡಿ ಅಪರಾಧ ಎಸಗಿದ ವ್ಯಕ್ತಿಗಳಿಗೆ ನಿರೀಕ್ಷಣಾ ಜಾಮೀನು ನೀಡುವ ಶಾಸನಬದ್ಧ ಪಟ್ಟಿ ಅನ್ವಯಿಸುವುದಿಲ್ಲ ಎಂದು ಕೂಡ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಖುಮಾನ್ ಸಿಂಗ್ ಮತ್ತು ಮಧ್ಯಪ್ರದೇಶ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿ ನ್ಯಾ. ಮಹೀಂದ್ರ ಮೋಹನ್ ಶ್ರೀವಾಸ್ತವ ತೀರ್ಪು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರನಿಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರೆತಿದೆ. ವಕೀಲ ಶರದ್ ಮಿಶ್ರಾ ಅರ್ಜಿದಾರರ ಪರವಾಗಿ ವಾದ ಮಂಡಿಸಿದರು. ಸರ್ಕಾರಿ ವಕೀಲ ಪವನ್ ಕೇಶರ್ವಾನಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದರೆ ನ್ಯಾಯವಾದಿ ಪ್ರಸೂನ್ ಅಗರ್‌ವಾಲ್ ದೂರುದಾರರ ಪರ ವಾದಿಸಿದರು.