ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |25-4-2021

>> ದಿವ್ಯಾಂಗ ಪದ ಬಳಕೆ ನಿಷೇಧಿಸಲು ನಕಾರ >> ʼದೆಹಲಿಯ ನೂತನ ವಕೀಲರ ಭವನ ಕೋವಿಡ್‌ ಆರೈಕೆ ಕೇಂದ್ರವಾಗಲಿʼ >> ನ್ಯಾ. ಶಾಂತನಗೌಡರ್‌ ನಿಧನಕ್ಕೆ ಸಿಜೆಐ ಸಂತಾಪ >> ರಾಜ್ಯಸಭೆ ಹಕ್ಕಬಾಧ್ಯತಾ ಸಮಿತಿಗೆ ವಿಲ್ಸನ್‌, ಸಿಂಘ್ವಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |25-4-2021

ʼದಿವ್ಯಾಂಗʼ ಪದ ಬಳಕೆ ಪ್ರಶ್ನಿಸಿದ್ದ ಅರ್ಜಿ ಮದ್ರಾಸ್‌ ಹೈಕೋರ್ಟ್‌ನಿಂದ ವಜಾ

ವಿಶೇಷ ಚೇತನ ವ್ಯಕ್ತಿಗಳನ್ನು ಉಲ್ಲೇಖಿಸಲು ಹಿಂದಿಯ ʼದಿವ್ಯಾಂಗ್ʼ, ʼದಿವ್ಯಾಂಗನ್‌ʼ ಪದಗಳನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ತಳ್ಳಿಹಾಕಿದೆ. ಒರಟು, ಅಸಭ್ಯ ಹಾಗೂ ಅಪಮಾನಕಾರಿ ಎನಿಸುವ ʼಅಂಗವಿಕಲʼ, ʼವಿಕಲಾಂಗʼ ಪದಗಳ ಬದಲಿಗೆ ಹಲವು ಬಾರಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಡನೆ ಚರ್ಚಿಸಿ ʼದಿವ್ಯಾಂಗʼದಂತಹ ಪದಗಳ ಬಳಕೆ ಬಗ್ಗೆ ಕೇಂದ್ರ ನಿರ್ಧರಿಸಿದೆ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

"ಅರ್ಜಿದಾರರ ಪ್ರಯತ್ನ ಮೆಚ್ಚುವಂತಿದೆ… ಆದರೂ ರಾಜಕೀಯ ನಿಖರತೆಗಾಗಿ ಒಲವು ತೋರುವ ಬದಲು ಸರ್ಕಾರ ಪರಿಣಾಮಕಾರಿಯಾದ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು" ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರು ದಿವ್ಯಾಂಗ ಎಂಬ ಪದ ʼದೈವಾಂಶʼ ಎಂಬ ಅರ್ಥವನ್ನು ಕೊಡಲಿದ್ದು ಇದು ಅಪಮಾನಕರ ಮತ್ತು ವಿವಾದಾತ್ಮಕವಾಗಿದ್ದು ಇವುಗಳನ್ನು ಬಳಸದಂತೆ ವಿಶ್ವಸಂಸ್ಥೆ ಕೂಡ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ಎಂದು ವಾದಿಸಿದ್ದರು.

ದೆಹಲಿಯ ನೂತನ ವಕೀಲರ ಭವನವನ್ನು ಕೋವಿಡ್‌ ಆರೈಕೆ ಕೇಂದ್ರವಾಗಿ ಪರಿವರ್ತಿಸಲು ಸಿಜೆಐಗೆ ಎಸ್‌ಸಿಬಿಎ ಮನವಿ

ನವದೆಹಲಿಯ ಅಪ್ಪುಘರ್‌ ಸಂಕೀರ್ಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ವಕೀಲರ ಭವನವನ್ನು ಕೋವಿಡ್‌ ಆರೈಕೆ ಕೇಂದ್ರವಾಗಿ ಪರಿವರ್ತಿಸಲು ಸುಪ್ರೀಂಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪತ್ರ ಬರೆದಿದೆ. ಈ ಸೌಲಭ್ಯವನ್ನು ಎಸ್‌ಸಿಬಿಎ ಸದಸ್ಯರು, ಅವರ ಕುಟುಂಬಗಳು, ಸುಪ್ರೀಂಕೋರ್ಟ್‌ ರೆಜಿಸ್ಟ್ರಿ ನ್ಯಾಯಾಲಯ ಸಿಬ್ಬಂದಿ ಮತ್ತವರ ಕುಟುಂಬಗಳು ಬಳಸಬಹುದು ಎಂದು ಸಂಘ ಇಂಗಿತ ವ್ಯಕ್ತಪಡಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌ ಹೆಚ್ಚುತ್ತಿರುವುದರಿಂದ ನಿಗದಿತ ಅವಧಿಗೂ ಮೊದಲೇ ಸುಪ್ರೀಂಕೋರ್ಟ್‌ಗೆ ರಜೆ ನೀಡಬೇಕು. ಏಪ್ರಿಲ್‌ 26ರಿಂದ ಜೂನ್‌ 6ರವರೆಗೆ ರಜೆ ಘೋಷಿಸುವಂತೆ ಅದು ಕೋರಿದೆ. ವೈದ್ಯಕೀಯ ಅಗತ್ಯಗಳಿಗಾಗಿ ರಾಜ್ಯ ಸರ್ಕಾರ ಸಹ ಕಟ್ಟಡವನ್ನು ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ಕೂಡ ಮನವಿಯಲ್ಲಿ ತಿಳಿಸಲಾಗಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್‌ ನಿಧನಕ್ಕೆ ಸಿಜೆಐ ಎನ್‌ ವಿ ರಮಣ ಸಂತಾಪ

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಕನ್ನಡಿಗ ಮೋಹನ್‌ ಶಾಂತನಗೌಡರ್‌ ನಿಧನಕ್ಕೆ ಸಿಜೆಐ ಎನ್‌ ವಿ ರಮಣ ಸಂತಾಪ ಸೂಚಿಸಿದ್ದು “ಅವರು ಶೀಘ್ರ ಗುಣಮುಖರಾಗುವುದಾಗಿ ಭಾವಿಸಿದ್ದೆ. ಆದರೆ ಘೋರ ಆಘಾತವೊಂದು ಎರಗಿತು” ಎಂದು ಪ್ರತಿಕ್ರಿಯಿಸಿದ್ದಾರೆ. ಶಾಂತನಗೌಡರ್‌ ಅಗಲಿಕೆಯಿಂದಾಗಿ ಅದ್ಭುತ ಕಾನೂನು ಕುಶಾಗ್ರಮತಿ ಹಾಗೂ ಮೌಲ್ಯಯುತ ಸಹೋದ್ಯೋಗಿಯನ್ನು ಕಳೆದುಕೊಂಡಿದ್ದೇವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹರಿಯಾಣದ ಗುರುಗ್ರಾಮದ ಆಸ್ಪತ್ರೆಯಲ್ಲಿ ನ್ಯಾ. ಶಾಂತನಗೌಡರ್‌ ಶನಿವಾರ ರಾತ್ರಿ ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ವೈರಲ್‌ ನ್ಯುಮೋನಿಯಾ ಸೋಂಕು ತಗುಲಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಕಾನೂನು ಚತುರರಾದ ಅವರೊಂದಿಗಿನ ಒಡನಾಟದಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ ಎಂದಿದ್ದಾರೆ. ಶಾಂತನಗೌಡರ್‌ ಪುತ್ರರೊಂದಿಗೂ ಮಾತನಾಡಿರುವ ನ್ಯಾ. ರಮಣ ಸಾಂತ್ವನ ಹೇಳಿದ್ದಾರೆ.

ರಾಜ್ಯಸಭೆ ಹಕ್ಕಬಾಧ್ಯತಾ ಸಮಿತಿಗೆ ಹಿರಿಯ ನ್ಯಾಯವಾದಿಗಳಾದ ಪಿ ವಿಲ್ಸನ್‌, ಅಭಿಷೇಕ್‌ ಮನು ಸಿಂಘ್ವಿ ನೇಮಕ

ಈತ್ತೀಚೆಗೆ ರಚಿಸಲಾದ ರಾಜ್ಯಸಭೆ ಹಕ್ಕುಬಾಧತಾ ಸಮಿತಿಯ ಸದಸ್ಯರಾಗಿ ಹಿರಿಯ ನ್ಯಾಯವಾದಿಗಳೂ ಹಾಗೂ ಮೇಲ್ಮನೆ ಸದಸ್ಯರೂ ಆದ ಪಿ ವಿಲ್ಸನ್‌, ಡಾ. ಅಭಿಷೇಕ್‌ ಮನು ಸಿಂಘ್ವಿ ಆಯ್ಕೆಯಾಗಿದ್ದಾರೆ. ರಾಜ್ಯಸಭಾ ಕಾರ್ಯದರ್ಶಿ ಜಂಟಿ ಕಾರ್ಯದರ್ಶಿ ಸುರೇಂದ್ರ ಕುಮಾರ್ ತ್ರಿಪಾಠಿ ಅವರು ಏಪ್ರಿಲ್ 23 ರಂದು ಹೊರಡಿಸಿರುವ ಪತ್ರದಲ್ಲಿ ನೇಮಕದ ವಿವರಗಳಿವೆ.

ರಾಜ್ಯಸಭಾ ನಿಯಮಾವಳಿ 192 (2)ರ ಪ್ರಕಾರ ರಾಜ್ಯಸಭಾಧ್ಯಕ್ಷರು ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಹರಿವಂಶ್‌ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದಸ್ಯರ ವಿವರ ಹೀಗಿದೆ: ಡಾ ಅನಿಲ್ ಜೈನ್, ಕುಮಾರ್‌ ಕೇತ್ಕರ್‌, ಸುಜೀತ್‌ ಕುಮಾರ್‌, ಸರೋಜ್‌ ಪಾಂಡೆ, ಎಸ್‌ವಿಐ ನರಸಿಂಹ ರಾವ್, ಡಾ ಅಭಿಷೇಕ್ ಮನು ಸಿಂಘ್ವಿ, ರಾಕೇಶ್ ಸಿನ್ಹಾ, ಡಾ.ಸುಧಾನ್ಶು ತ್ರಿವೇದಿ ಹಾಗೂ ಪಿ ವಿಲ್ಸನ್.

Related Stories

No stories found.