ವಿಮಾ ಹಕ್ಕಿನ ಸ್ವೀಕಾರಾರ್ಹತೆ ಬಗ್ಗೆ ಸಂದೇಹವಿದ್ದಾಗ, ಅದರ ಪ್ರಯೋಜನ ವಿಮಾದಾರರಿಗೆ ದೊರೆಯಬೇಕು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ತೀರ್ಪು ನೀಡಿದೆ (ಮಾವ್ಜಿ ಕಾಂಜಿ ಜುಂಗಿ ಮತ್ತು ಓರಿಯಂಟಲ್ ಇನ್ಶುರೆನ್ಸ್ ಕಂಪನಿ ನಡುವಣ ಪ್ರಕರಣ). ಶಾರ್ಜಾಗೆ ತೆರಳುತ್ತಿದ್ದ ಹಡಗೊಂದು ಮಾರ್ಗ ಮಧ್ಯೆ ಮುಳುಗಿತ್ತು. ಆದರೆ ವಿಮಾ ಸಂಸ್ಥೆ ಓರಿಯೆಂಟಲ್ ಇನ್ಶೂರೆನ್ಸ್ (ಒಪಿ) ವಿಮಾ ಹಕ್ಕನ್ನು ನಿರಾಕರಿಸಿದ ಬಳಿಕ ಹಡಗಿನ ಮಾಲೀಕರು ಎನ್‌ಸಿಡಿಆರ್‌ಸಿ ಮೊರೆ ಹೋಗಿದ್ದರು.
ಹಡಗನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ ಎಂದು ವಿಮಾ ಕಂಪೆನಿ ವಾದಿಸಿದ್ದರೆ ಹಡಗಿನ ಮಾಲೀಕರು ʼಅದು ಸಮುದ್ರ ಯಾನಕ್ಕೆ ಯೋಗ್ಯವಾಗಿತ್ತು. ಕೆಳಗಿನಿಂದ ಯಾವುದೋ ವಸ್ತುವು ಢಿಕ್ಕಿ ಹೊಡೆದ ಪರಿಣಾಮ ಮುಳುಗಿಹೋಯಿತುʼ ಎಂದು ವಾದಿಸಿದ್ದರು. ಅಲ್ಲದೆ ಅಪಘಾತದ ಅಗಾಧತೆಯನ್ನು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು. ವಾದ ಆಲಿಸಿದ ಆಯೋಗದ ಸದಸ್ಯ ಅನೂಪ್ ಕೆ ಠಾಕೂರ್ “ಶೇ 6ರ ಬಡ್ಡಿಯೊಂದಿಗೆ 1,75,00,000 ರೂಪಾಯಿ ಪರಿಹಾರ ನೀಡಬೇಕು” ಎಂದು ಆದೇಶಿಸಿದರು. ಆದರೆ ಮಾಲೀಕರು ಅನುಭವಿಸಿದ ಮಾನಸಿಕ ಯಾತನೆ ಮತ್ತು ವ್ಯವಹಾರದ ನಷ್ಟಕ್ಕೆ ಸಂಬಂಧಿಸಿದಂತೆ ವಿಶೇಷ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಆ ಪರಿಹಾರ ಮೊತ್ತವನ್ನು ರೂ. 50,000ಕ್ಕೆ ಸೀಮಿತಗೊಳಿಸಿತು. ಹಡಗಿನ ಮಾಲೀಕರ ಪರ ವಕೀಲರಾದ ವಿಪಿನ್ ನಾಯರ್ ಮತ್ತು ಕಾರ್ತಿಕ್ ಜಯಶಂಕರ್, ಒಪಿ ಪರ ವಕೀಲ ವಿಷ್ಣು ಮೆಹ್ರಾ ಹಾಜರಿದ್ದರು.
ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವ ಪರೀಕ್ಷೆಗೆ ಹಾಜರಾಗಲು ಕಡ್ಡಾಯವಾಗಿ ಮೂರು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಎಂಬ ಷರತ್ತನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ. ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಅನಿರುದ್ಧ ಬೋಸ್ ಅವರಿದ್ದ ರಜಾಕಾಲದ ಪೀಠ ಅರ್ಜಿ ಸಂಬಂಧ ಆಂಧ್ರಪ್ರದೇಶ ಹೈಕೋರ್ಟ್‌ನ ನೇಮಕಾತಿ ರಿಜಿಸ್ಟ್ರಾರ್‌ಗೆ ಕೂಡ ನೋಟಿಸ್ ಜಾರಿ ಮಾಡಿದೆ.
ಡಿ. 3ರಂದು ಕಿರಿಯ ಸಿವಿಲ್ ನ್ಯಾಯಾಧೀಶರ ಹುದ್ದೆಗಳ ಸಾಮಾನ್ಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ 2007ರ ಆಂಧ್ರಪ್ರದೇಶ ರಾಜ್ಯ ನ್ಯಾಯಾಂಗ (ಸೇವೆ ಮತ್ತು ಕೇಡರ್) ನಿಯಮಗಳ ಪ್ರಕಾರ ನಡೆಯಬೇಕು ಎಂದು ರೇಗಲಗಡ್ಡ ವೆಂಕಟೇಶ್ ಎಂಬುವವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಜನವರಿ 5ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.