ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |1-6-2021

>> ಕ್ಷುಲ್ಲಕ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್‌ ಕಿಡಿ >>ಎನ್‌ಸಿಎಲ್‌ಟಿ ಪ್ರಕರಣ >> ಎಫ್‌ಎಂಜಿ ಅಭ್ಯರ್ಥಿಗಳ ಅರ್ಜಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |1-6-2021
Published on

ಕ್ಷುಲ್ಲಕ ಪ್ರಕರಣಗಳಿಂದ ರಾಷ್ಟ್ರೀಯ ಪ್ರಾಮುಖ್ಯತೆ ವಿಷಯಗಳನ್ನು ಆಲಿಸಲು ಸಾಧ್ಯವಾಗುತ್ತಿಲ್ಲ: ಸುಪ್ರೀಂ ಕೋರ್ಟ್ ಕಿಡಿ

ತನ್ನ ಮುಂದೆ ಪಟ್ಟಿ ಮಾಡಲಾದ ಶೇ 95ರಷ್ಟು ಪ್ರಕರಣಗಳು ಕ್ಷುಲ್ಲಕವಾಗಿವೆ. ಇದರಿಂದಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳನ್ನು ಆಲಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿದ್ದ ಸುಪ್ರೀಂಕೋರ್ಟ್‌ ಪೀಠ ಬೇಸರ ವ್ಯಕ್ತಪಡಿಸಿತು.

Supreme Court
Supreme Court

ಅರ್ಜಿಯೊಂದನ್ನು ಆಲಿಸುವಂತೆ ವಕೀಲರೊಬ್ಬರು ಕೋರಿದಾಗ ನ್ಯಾ. ಚಂದ್ರಚೂಡ್‌ “ಇಂದು ಸುಮ್ಮನೆ ದೃಷ್ಟಿಹರಿಸಿದಾಗ ಶೇ 95ರಷ್ಟು ಪ್ರಕರಣಗಳು ಕ್ಷುಲ್ಲಕವಾಗಿದ್ದವು. ಇದರಿಂದಾಗಿ ವ್ಯವಸ್ಥೆ ನಿಷ್ಕ್ರಿಯವಾಗಿದೆ. ರಾಷ್ಟ್ರೀಯ ಪ್ರಾಮುಖ್ಯತೆ ಇರುವ ವಿಷಯಗಳನ್ನು ನಾವು ವಿಚಾರಣೆ ನಡೆಸಬೇಕಿದೆ. ಆದರೂ ಇಂಥದ್ದನ್ನೆಲ್ಲಾ ಓದಬೇಕಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಪ್ರಕರಣಗಳಿಂದಾಗಿ ನಿನ್ನೆ ಕೋವಿಡ್‌ ನಿರ್ವಹಣೆ ಕುರಿತು ದಾಖಲಿಸಿಕೊಳ್ಳಲಾಗಿರುವು ಸ್ವಯಂಪ್ರೇರಿತ ಪ್ರಕರಣದಲ್ಲಿ (ಸೋಮವಾರ) ನೀಡಲಾದ ತೀರ್ಪನ್ನು ಇನ್ನೂ ಡಿಕ್ಟೇಟ್‌ ಮಾಡಿ ಅದನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಜೂನ್‌ 1ರ ಮಧ್ಯಾಹ್ನದ ಬಳಿಕವೂ ಕೋವಿಡ್‌ ಪ್ರಕರಣದ ತೀರ್ಪಿನ ಪ್ರತಿ ಆನ್‌ಲೈನ್‌ನಲ್ಲಿ ಲಭ್ಯ ಇರಲಿಲ್ಲ.

ಮರು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಎನ್‌ಸಿಎಲ್‌ಟಿ 11 ದಿನಗಳಲ್ಲಿ 5 ಹಂಗಾಮಿ ಅಧ್ಯಕ್ಷರನ್ನು ಕಾಣಲಿದೆ

ಕೇಂದ್ರ ಸರ್ಕಾರ ಸದಸ್ಯರ ಮರುನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) 11 ದಿನಗಳಲ್ಲಿ 5 ಹಂಗಾಮಿ ಅಧ್ಯಕ್ಷರನ್ನು ಕಾಣಲಿದೆ. ಎನ್‌ಸಿಎಲ್‌ಟಿ ಸದಸ್ಯರ ಅಧಿಕಾರಾವಧಿ ವಿಸ್ತರಿಸುವ ಕುರಿತಂತೆ ಯಾವುದೇ ಸಕಾರಾತ್ಮಕ ನಿರ್ದೇಶನ ನೀಡಲು ಸುಪ್ರೀಂಕೋರ್ಟ್‌ ಸೋಮವಾರ ಒಪ್ಪಲಿಲ್ಲ.

NCLT
NCLT

ಆದರೂ ಮರು ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತ್ವರಿತವಾಗಿ ಪೂರ್ಣಗೊಳಿಸುತ್ತದೆ ಎಂದು ನ್ಯಾಯಾಲಯ ಭರವಸೆ ವ್ಯಕ್ತಪಡಿಸಿತು. ಹಂಗಾಮಿ ಅಧ್ಯಕ್ಷರಾದ ಬೇತಾಲ ಶಾಂತಾ ವಿಜಯ ಪ್ರಕಾಶ್ ಕುಮಾರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಯಾವುದೇ ನಿರ್ದೇಶನಗಳಿಲ್ಲದ ಕಾರಣ, ಅವರ ಅಧಿಕಾರಾವಧಿ ಮೇ 31ಕ್ಕೆ ಪೂರ್ಣಗೊಂಡಿತ್ತು. ಒಂದು ವೇಳೆ ಮರು ನೇಮಕಾತಿ ಶೀಘ್ರವಾಗಿ ಆಗದೆ ಹೋದಲ್ಲಿ ಮುಂದಿನ ಹನ್ನೊಂದು ದಿನಗಳಲ್ಲಿ 5 ಮಂದಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜೂ.1ರಂದು ಕೇವಲ ಒಂದು ದಿನದ ಅವಧಿಗೆ ರಾಜೇಶ್ವರ್‌ ರಾವ್‌ ಹಂಗಾಮಿ ಅಧ್ಯಕ್ಷರಾಗಿದ್ದರು. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ನಾಲ್ವರು ಹಂಗಾಮಿ ಅಧ್ಯಕ್ಷರಾಗಿ ಕೆಲವೇ ದಿನಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಆರೋಗ್ಯ ಸೇವೆ ಷರತ್ತುಗಳನ್ನು ಸಡಿಲಗೊಳಿಸುವಂತೆ ಕೋರಿ ಸುಪ್ರೀಂ ಮೊರೆ ಹೋದ ವಿದೇಶಿ ವೈದ್ಯಕೀಯ ಪದವೀಧರರು

ದೇಶದ ಆರೋಗ್ಯ ಕಾರ್ಯಪಡೆಗೆ ಸೇರ್ಪಡೆಯಾಗಲು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ವಿದೇಶಿ ವೈದ್ಯಕೀಯ ಪದವೀಧರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಸಂಬಂಧ ನ್ಯಾಯಾಲಯ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ವಿದೇಶಿ ವೈದ್ಯಕೀಯ ಪದವೀಧರರು ವಿದೇಶಿ ವೈದ್ಯಕೀಯ ಪದವೀಧರ ಪರೀಕ್ಷೆಯನ್ನು (ಎಫ್‌ಎಂಜಿಇ) ತೇರ್ಗಡೆಯಾದರೆ ಮಾತ್ರ ಭಾರತದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಅರ್ಹರಾಗಿರುತ್ತಾರೆ. ಎಂಬಿಬಿಎಸ್‌ಗೆ ಸಮಾನವಾದ ಎಫ್‌ಎಂಜಿ ಪದವಿಯನ್ನು ವಿದೇಶಗಳಿಂದ ಪಡೆಯಲಾಗಿರುತ್ತದೆ. ಕೋವಿಡ್‌ ಹಿನ್ನೆಲೆಯಲ್ಲಿ ತುರ್ತು ಅನುಮತಿ ನೀಡಬೇಕೆಂದು ಈ ಪದವೀಧರರು ಮನವಿ ಮಾಡಿದ್ದಾರೆ.

Kannada Bar & Bench
kannada.barandbench.com