ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |17-4-2021

>> ʼಮೈ ಲಾರ್ಡ್‌ʼ ಪದ ಬಳಕೆ ಬೇಡ >> ʼರಾತ್ರಿ ಪಾಳಿಯ ನೆಪ ಹೇಳಿ ಮಹಿಳೆಯರಿಗೆ ಉದ್ಯೋಗ ನಿರಾಕರಿಸುವಂತಿಲ್ಲʼ‌ >> ಮತ್ತೆ ದೀಪ್‌‌ ಸಿಧು ಬಂಧನ >> ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಕೋವಿಡ್‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |17-4-2021
Published on

ಗೌರವಾರ್ಥಕವಾದ ʼಮೈ ಲಾರ್ಡ್‌ʼ, ʼಯುವರ್‌ ಲಾರ್ಡ್‌ಶಿಪ್‌ʼ ಬಳಸಬೇಡಿ: ನ್ಯಾ. ಕೃಷ್ಣ ಭಟ್‌

ಪ್ರಕರಣಗಳ ವಿಚಾರಣೆಗೆ ಹಾಜರಾಗುವ ವಕೀಲರು ತಮಗೆ 'ಲಾರ್ಡ್‌ಶಿಫ್'‌ ಅಥವಾ 'ಮೈ ಲಾರ್ಡ್'‌ ಪದಗಳನ್ನು ಬಳಸದಂತೆ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಭಟ್‌ ಮನವಿ ಮಾಡಿದ್ದಾರೆ. ಭಾರತದ ಸ್ಥಿತಿಗೆ ಹೊಂದುವ ʼಸರ್‌ʼ ಎಂಬ ಪದದ ಮೂಲಕ ಸಂಬೋಧಿಸಿದರೆ ಸಾಕು ಎಂದು ಅವರು ಹೇಳಿದ್ದಾರೆ.

Justice Krishna P Bhat
Justice Krishna P Bhat

'ಮೈ ಲಾರ್ಡ್' ಅಥವಾ 'ಯುವರ್‌ ಲಾರ್ಡ್‌ಶಿಪ್‌' ಎಂಬ ಪದಗಳ ಮೂಲಕ ವಿಪರೀತ ಗೌರವಗಳೊಂದಿಗೆ ನ್ಯಾಯಾಲಯವನ್ನು ಉದ್ದೇಶಿಸುವುದನ್ನು ತಪ್ಪಿಸಲು ವಕೀಲರನ್ನು ಕೋರುತ್ತಿದ್ದೇನೆ. ಆದರೆ ನ್ಯಾಯಾಲಯದ ಘನತೆ ಮತ್ತು ಅಲಂಕಾರಕ್ಕೆ ಅನುಗುಣವಾದ ಅಭ್ಯಾಸವನ್ನು ಅನುಸರಿಸಲು ವಿನಂತಿಸಲಾಗಿದೆ. 'ಸರ್' ನಂತಹ ಪದ ಭಾರತೀಯ ಸಂದರ್ಭಗಳಿಗೆ ಹೆಚ್ಚು ಸೂಕ್ತವಾಗಿದೆ ಎಂದು ನ್ಯಾಯಮೂರ್ತಿ ಕೃಷ್ಣ ಭಟ್ ಅವರ ನ್ಯಾಯಾಲಯದ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಈ ವಿಚಾರವನ್ನು ಮೌಖಿಕವಾಗಿಯೂ ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಭಟ್‌ ಹೇಳಿದ್ದು, ಸಮಕಾಲೀನ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ವಕೀಲರಿಗೆ ತಿಳಿಸಿದ್ದಾರೆ. ಒಡಿಶಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಮುರುಳೀಧರ್‌ ಅವರು ಸಹ ತಮ್ಮನ್ನು ಮೈ ಲಾರ್ಡ್‌ ಅಥವಾ ಯುವರ್‌ ಲಾರ್ಡ್‌ಶಿಪ್‌ ಎಂದು ಸಂಬೋಧಿಸದಂತೆ ಕೋರಿದ್ದರು.

ಉದ್ಯೋಗಾವಕಾಶ ನೀಡುವಾಗ ʼಕೇವಲ ಪುರುಷ ವಿದ್ಯಾರ್ಥಿಗಳಿಗಾಗಿʼ ಎಂದು ಪ್ರಕಟಿಸುವುದು ಅಸಾಂವಿಧಾನಿಕ: ಕೇರಳ ಹೈಕೋರ್ಟ್‌

ಮಹಿಳೆಯರು ಗೃಹಕೆಲಸಗಳಿಗೆ ಸೀಮಿತವಾಗದ ಸಂದರ್ಭದಲ್ಲಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬೇಕಾಗುತ್ತದೆ ಎಂಬ ಕಾರಣ ನೀಡಿ ಅವರಿಗೆ ಉದ್ಯೋಗ ನಿರಾಕರಿಸುವುದನ್ನು ಒಪ್ಪಲಾಗದು ಮತ್ತು ಕ್ಷಮಿಸಲಾಗದು ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ. ಅಲ್ಲದೆ ಉದ್ಯೋಗ ನೀಡುವ ಸಂದರ್ಭದಲ್ಲಿ "ಕೇವಲ ಪುರುಷ ಅಭ್ಯರ್ಥಿಗಳಿಗಾಗಿ" ಎಂದು ಪ್ರಕಟಿಸುವುದು ಕೂಡ ಅಸಾಂವಿಧಾನಿಕ ಎಂದು ಅದು ಹೇಳಿದೆ.

Kerala HC
Kerala HC

ಸಾರ್ವಜನಿಕ ವಲಯದ ಉದ್ಯಮವೊಂದರಲ್ಲಿ ಥ್ರೆಯೆಸಾ ಜೋಸ್ಫಿನ್‌ ಎಂಬುವವರು ಕೆಲಸ ಮಾಡುತ್ತಿದ್ದರು. ಅವರು ಅದೇ ಉದ್ಯಮದ ಉನ್ನತ ಹುದ್ದೆಯೊಂದಕ್ಕೆ ಅರ್ಜಿ ಸಲ್ಲಿಸಿದಾಗ ಆ ಹುದ್ದೆ ಕೇವಲ ಪುರುಷರಿಗೆ ಮಾತ್ರ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಅನು ಶಿವರಾಮನ್‌ ಅವರಿದ್ದ ಪೀಠ ಅಧಿಸೂಚನೆಯನ್ನು ರದ್ದುಪಡಿಸಿದೆ.

ಜಾಮೀನು ಪಡೆದ ದಿನವೇ ಮತ್ತೊಂದು ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪಂಜಾಬಿ ನಟ ದೀಪ್‌ ಸಿಧು

ಪ್ರಸಕ್ತ ವರ್ಷದ ಆರಂಭದಲ್ಲಿ ಗಣರಾಜ್ಯೋತ್ಸವದಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ ಪಂಜಾಬಿ ನಟ ದೀಪ್‌ ಸಿಧು ಅವರಿಗೆ ಶನಿವಾರ ಜಾಮೀನು ದೊರೆತಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Deep Sidhu
Deep Sidhu

ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ದೂರಿನ ಆಧಾರದಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕೆಂಪು ಕೋಟೆಗೆ ಗಲಭೆಯ ಸಂದರ್ಭದಲ್ಲಿ ಆಗಿದ್ದ ಹಾನಿ ಪರಿಗಣಿಸಿ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಫೆಬ್ರವರಿ 9ರಂದು ದೀಪ್‌ ಸಿಧು ಅವರನ್ನು ಬಂಧಿಸಲಾಗಿತ್ತು.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಶಂಕರ್‌ ಝಾ ಅವರಿಗೆ ಕೋವಿಡ್‌ ದೃಢ

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರವಿ ಶಂಕರ್‌ ಝಾ ಅವರಿಗೆ ಕೋವಿಡ್‌ ದೃಢಪಟ್ಟಿದೆ. ಹೈಕೋರ್ಟ್‌ ತನ್ನ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿರುವ ಕೇಸ್‌ಲಿಸ್ಟ್‌ನಿಂದಾಗಿ ಈ ಅಂಶ ತಿಳಿದು ಬಂದಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಏಪ್ರಿಲ್‌ 19 ಮತ್ತು 20ರಂದು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂದು ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವಾರ ಅಲಹಾಬಾದ್‌ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿಗೆ ಕೋವಿಡ್‌ ದೃಢಪಟ್ಟಿತ್ತು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಂ ಆರ್‌ ಶಾ ಅವರು ತಮ್ಮ ಎಲ್ಲಾ ಸಿಬ್ಬಂದಿಗೆ ಕೋವಿಡ್‌ ಸೋಂಕು ತಗುಲಿದೆ ಎಂದು ಈ ಹಿಂದೆ ಮುಕ್ತ ನ್ಯಾಯಾಲಯದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com