ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನೆರವಾಗುವ ದೃಷ್ಟಿಯಿಂದ ಅವರಿಗೆ ವಿಮಾ ಯೋಜನೆ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ಗುರುವಾರ ಸಭೆ ನಡೆಯಿತು.
ಹಣಕಾಸು, ಕಾನೂನು ಮತ್ತು ಆರೋಗ್ಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್ ಹಾಗೂ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಂಜಾನ್ ಮಾಸದ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ಐವತ್ತು ಮಂದಿಗೆ ನಮಾಜ್ ಸಲ್ಲಿಸಲು ಗುರುವಾರ ದೆಹಲಿ ಹೈಕೋರ್ಟ್ ಅನುಮತಿಸಿದೆ. ಕಳೆದ ವರ್ಷ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಶ್ರದ್ಧಾಳುಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ನ್ಯಾಯಮೂರ್ತಿ ಮುಕ್ತ ಗುಪ್ತ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.
“ಬಂಗಲೆ ವಾಲಿ ಮಸೀದಿಯಲ್ಲಿ ದಿನಕ್ಕೆ ಐದು ಬಾರಿಯಂತೆ 50 ಮಂದಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲು ನ್ಯಾಯಾಲಯ ನಿರ್ದೇಶಿಸುತ್ತದೆ” ಎಂದು ಪೀಠ ಹೇಳಿದೆ. “ದಿನಗಳೆಯುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗುತ್ತಿದೆ. ಎಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆದಿರುವುದರಿಂದ ಇದನ್ನೂ ತೆರೆಯಬಹುದಾಗಿದೆ” ಎಂದು ಪೀಠ ಹೇಳಿದೆ. ಜುಲೈ 16ಕ್ಕೆ ವಿಚಾರಣೆ ಮುಂದೂಡಲಾಗಿದೆ.
ಅನೇಕ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಮಾಡಲಾಗುವ ದೂರುಗಳು ಸುಳ್ಳುಗಳಾಗಿರುತ್ತವೆ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ನ್ಯಾಯಮೂರ್ತಿಗಳಲ್ಲಿ ಅಭದ್ರತೆಯ ಭಾವ ಮೂಡುವಂತೆ ಮಾಡಬಾರದು ಎಂದು ಹೇಳಿದ್ದಾರೆ. ಸಂವಿಧಾನದ 224ಎ ಅಡಿ ಹೈಕೋರ್ಟ್‌ಗಳಿಗೆ ತದುದ್ದೇಶಿತ (ಆಡ್ ಹಾಕ್) ಅಥವಾ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸುವ ಸಂಬಂಧ ಸರ್ಕಾರೇತರ ಸಂಸ್ಥೆ ಲೋಕ ಪ್ರಹಾರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸೂರ್ಯಕಾಂತ್ ಅವರಿದ್ದ ವಿಶೇಷ ಪೀಠವು ನಡೆಸಿತು.
ಕೇಂದ್ರ ಸರ್ಕಾರ ನೀಡಿದ ಸಲಹೆಗಳನ್ನು ಗಮನಿಸಿದಾಗ ನ್ಯಾಯಾಧೀಶರ ಸ್ಥಾನವನ್ನು ದುರ್ಬಲಗೊಳಿಸಲಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. “ನ್ಯಾಯಾಧೀಶರ ಸ್ಥಾನವನ್ನು ಅಷ್ಟು ಅಸುರಕ್ಷಿತವಾಗಿಸಲು ನಾನು ಒಪ್ಪುವುದಿಲ್ಲ ಮತ್ತು ನ್ಯಾಯಾಧೀಶರ ವಿರುದ್ಧದ ದೂರುಗಳನ್ನು ನಾವು ನೋಡಿದ್ದೇವೆ ಮತ್ತು ಅವುಗಳಲ್ಲಿ ಅನೇಕವು ಕಡು ಸುಳ್ಳಾಗಿವೆ. ಅವರಿಗೆ ಸೇವಾವಧಿಯ ಭದ್ರತೆ ಒದಗಿಸಬೇಕಿದೆ. ಅವರನ್ನು ಈ ರೀತಿ ದುರ್ಬಲರನ್ನಾಗಿಸಲಾಗದು” ಎಂದು ಸಿಜೆಐ ಬೊಬ್ಡೆ ಹೇಳಿದ್ದಾರೆ. “ಒಬ್ಬರು ನ್ಯಾಯಾಧೀಶರಾಗಿ ನೇಮಕವಾದರೆ 200 ಮಂದಿ ನಾನೇಕೆ ಆಗಲಿಲ್ಲ ಎನ್ನುತ್ತಾರೆ. ಈ ಪೈಕಿ ಒಬ್ಬರು ಅಥವಾ ಇಬ್ಬರು ನ್ಯಾಯಾಧೀಶರು ನಿಧಾನವಾದ ಮಾತ್ರಕ್ಕೆ ತದುದ್ದೇಶಿತ ನ್ಯಾಯಮೂರ್ತಿಗಳ ವ್ಯವಸ್ಥೆಯನ್ನು ಪ್ರಶ್ನಿಸಲಾಗದು, ಹೆಚ್ಚು ಸ್ಪಷ್ಟತೆಗೆ ಮುಂದಾದಷ್ಟು ಅದು ತನ್ನ ಉದ್ದೇಶದಿಂದ ವಂಚಿತವಾಗಲಿದೆ” ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಹೇಳಿದರು.
ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಗಲಭೆ ಪ್ರಕರಣದ ಸಂದರ್ಭದಲ್ಲಿ ಯಾವುದೇ ಅಸ್ತ್ರ ಹೊಂದಿರದ ದೆಹಲಿ ಪೊಲೀಸ್ ಸಿಬ್ಬಂದಿಗೆ ಪಿಸ್ತೂಲಿನ ಮೂಲಕ ಗುರಿ ಇಟ್ಟಿದ್ದ ವೈರಲ್ ಆಗಿದ್ದ ವಿಡಿಯೋದಲ್ಲಿದ್ದ ಆರೋಪಿ ಶಾರೂಖ್ ಪಠಾಣ್‌ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. “ಅರ್ಜಿದಾರರು ನಡೆಸಿರುವ ಕೃತ್ಯದ ಗಹನತೆಯನ್ನು ಅರಿತು ಮತ್ತು ಸದರಿ ಪ್ರಕರಣದಲ್ಲಿ ಅದು ವಾಸ್ತವವಾಗಿರುವುದರಿಂದ ಅರ್ಜಿದಾರರಿಗೆ ಜಾಮೀನು ನೀಡಲು ಇಚ್ಛೆಯಿಲ್ಲ” ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಮೇಲಿನ ಅಪರಾಧದ ಹಿನ್ನೆಲೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಆರೋಪಿ ಪಠಾಣ್ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಆರೋಪಪಟ್ಟಿಯನ್ನು ಈಗಾಗಲೇ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈಶಾನ್ಯ ದೆಹಲಿಯ ನಿವಾಸಿಯಾದ ಪಠಾಣ್, ಜಫ್ರಾಬಾದ್-ಮೌಜ್ಪುರ್ ರಸ್ತೆಯಲ್ಲಿ ಪೊಲೀಸರೊಬ್ಬರಿಗೆ ಪಿಸ್ತೂಲಿನ ಮೂಲಕ ಗುರಿ ಇಟ್ಟಿರುವುದು ಚಿತ್ರದಲ್ಲಿತ್ತು. ಇದನ್ನು ಆಧರಿಸಿ ಅವರನ್ನು ಮಾರ್ಚ್ 3ರಂದು ಬಂಧಿಸಲಾಗಿತ್ತು. “ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲಾದ ವಿಡಿಯೋ ಮತ್ತು ಫೋಟೊದಲ್ಲಿ ಪಠಾಣ್ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ತಮ್ಮ ಕೈಗೆತ್ತಿಕೊಂಡಿರುವ ಚಿತ್ರ ನ್ಯಾಯಾಲಯದ ಆತ್ಮಸಾಕ್ಷಿಯನ್ನು ನಲುಗಿಸಿದೆ. ಅರ್ಜಿದಾರರಿಗೆ ದೂರುದಾರರು ಅಥವಾ ಸಾರ್ವಜನಿಕವಾಗಿ ಹಾಜರಿದ್ದ ಯಾವುದೇ ವ್ಯಕ್ತಿಯನ್ನು ತನ್ನ ಪಿಸ್ತೂಲ್ ಗುಂಡಿನಿಂದ ಕೊಲ್ಲುವ ಉದ್ದೇಶವಿದೆಯೋ ಇಲ್ಲವೋ, ಆದರೆ ಆತನ ಕೃತ್ಯವು ಸ್ಥಳದಲ್ಲಿದ್ದ ಯಾರಿಗಾದರೂ ಹಾನಿ ಮಾಡಬಹುದು ಎಂಬ ಜ್ಞಾನ ಅವನಿಗೆ ಇರಲಿಲ್ಲ ಎಂಬುದನ್ನು ನಂಬುವುದು ಕಷ್ಟ" ಎಂದು ಪೀಠ ಹೇಳಿದೆ.